ಮೈಸೂರು: ‘ಮದ್ದೂರು ಹಾಗೂ ಮೈಸೂರಿನ ಚಾಮುಂಡಿ ಚಲೊ ಹೋರಾಟವು ಪೂರ್ವನಿಯೋಜಿತ. ಈ ಬಗ್ಗೆ ಮುಕ್ತವಾಗಿ ತನಿಖೆಯಾಗಬೇಕು, ಅಶಾಂತಿ ಸೃಷ್ಟಿಸುವವವರಿಗೆ ಶಿಕ್ಷೆಯಾಗಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆಗ್ರಹಿಸಿದರು.
ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಹಿಂದೂ ಜಾಗರಣ ವೇದಿಕೆ ಕರೆ ನೀಡಿದ್ದ ಚಾಮುಂಡಿ ಚಲೊಗೆ ಹೊರಜಿಲ್ಲೆಗಳಿಂದಲೂ ಜನರನ್ನು ಕರೆಸಲಾಗಿತ್ತು. ಅನುಮತಿ ನೀಡದಿದ್ದರೂ ಬೆಟ್ಟದ ಕಡೆ ನುಗ್ಗಿದ 487 ಜನರನ್ನು ವಶಕ್ಕೆ ಪಡೆಯಲಾಗಿತ್ತು. 47 ಜನರಷ್ಟೇ ಸ್ಥಳೀಯರಾಗಿದ್ದು, ಉಳಿದವರು ಹಾಸನ, ಉಡುಪಿ, ಮಂಗಳೂರು ಚಿಕ್ಕಮಗಳೂರಿನಿಂದ ಬಂದಿದ್ದರು. ಮೈಸೂರನ್ನು ಕೋಮುವಾದದ ಜಿಲ್ಲೆಯನ್ನಾಗಿಸುವ ಹುನ್ನಾರ ಇದು’ ಎಂದು ಆರೋಪಿಸಿದರು.
‘ಮಾಜಿ ಸಂಸದ ಪ್ರತಾಪ ಸಿಂಹ ಸೂಕ್ಷ್ಮ ಪ್ರದೇಶದಲ್ಲಿ ಪತ್ರಿಕಾ ಹೇಳಿಕೆ ನೀಡುವ ಅಗತ್ಯವೇನಿತ್ತು? ಅಲ್ಲಿ ಪತ್ರಕರ್ತರೊಬ್ಬರನ್ನು ಏಕವಚನದಲ್ಲಿ ನಿಂದಿಸಿದ್ದು, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.
‘ಮದ್ದೂರಿನ ರಾಮ್ ರಹೀಂ ನಗರದಲ್ಲಿ ನಿಷೇಧಾಜ್ಞೆ ಇದ್ದರೂ ಮೆರವಣಿಗೆ ಮಾಡಿದವರ ವಿರುದ್ಧ ಕಾನೂನು ಕ್ರಮವಾಗಬೇಕು. ಅಮಾಯಕರನ್ನು ಬಂಧಿಸಬಾರದು. ಕುಮಾರಸ್ವಾಮಿಯು ಬಿಜೆಪಿ ನೀಡಿದ ಸಚಿವ ಸ್ಥಾನಕ್ಕಾಗಿ ಪಕ್ಷವನ್ನೇ ಅಡವಿಟ್ಟಿದ್ದಾರೆ. ಅವರು ಹಳೆ ಮೈಸೂರಿನಲ್ಲಿ ನೆಲೆಯೂರಲು ಜೆಡಿಎಸ್ ಕಾರಣ. ಬಿಜೆಪಿಯು ಒಂದೊಂದೇ ಕ್ಷೇತ್ರವನ್ನು ವಶಪಡಿಸಿಕೊಂಡು ಕೊನೆಗೆ ಜೆಡಿಎಸ್‌ನ್ನೇ ನುಂಗುತ್ತಾರೆ. ಎಲ್ಲವನ್ನೂ ಎನ್‌ಐಎಗೆ ಒಪ್ಪಿಸಬೇಕು ಎನ್ನುವ ಬಿಜೆಪಿ ನಾಯಕರು ಮದ್ದೂರು ಘಟನೆಯ ಬಗ್ಗೆ ತನಿಖೆಗೆ ಯಾಕೆ ಒತ್ತಾಯಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.