
ತಿ.ನರಸೀಪುರ: ‘ಮಾದಿಗ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಮಾದರ ಮಹಸಭಾ ಆರಂಭಿಸಲಾಗಿದೆ. ಇದರ ಮೂಲಕ ಸಮುದಾಯದ ಸಂಘಟನೆ ಜತೆ ಪ್ರತಿಭಾನ್ವಿತರಿಗೆ ಅಗತ್ಯ ಸಹಕಾರ ನೀಡುವ ಆಶಯವಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಪಟ್ಟಣಕ್ಕೆ ಭೇಟಿ ನೀಡಿದ್ದ ಸಚಿವರು ಸಮುದಾಯದ ಮುಖಂಡರ ಜತೆ ಸಮಾಲೋಚನೆ ಸಭೆ ನಡೆಸಿದರು. ‘ಮಾದಿಗ ಸಮಾಜದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಚಿಂತನೆ ಮಾಡಿ ಈ ಮಹಾಸಭಾ ಪ್ರಾರಂಭಿಸಿದ್ದೇವೆ. ಸಮುದಾಯಕ್ಕೆ ನೈತಿಕ ಬಲ ಒದಗಿಸಿ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶೈಕ್ಷಣಿಕ ವ್ಯಾಸಂಗಕ್ಕೆ ನೆರವಾಗುವುದು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಒದಗಿಸಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.
ರಾಜ್ಯದಾದ್ಯಂತ ಸದಸ್ಯತ್ವ ನೋಂದಣಿ ಪ್ರಕ್ರಿಯೆ ನಡೆಸಿ, ಪ್ರಜಾತಂತ್ರ ವ್ಯವಸ್ಥೆಯಡಿ ಚುನಾವಣೆಯ ಮೂಲಕ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಅಲ್ಲಿಯವರೆಗೆ ಮಾದಾರ ಮಹಾಸಭಾದ ನಿರ್ವಹಣೆ ಉಸ್ತುವಾರಿಯನ್ನು ಅಡಾಕ್ ಸಮಿತಿ ನೋಡಿಕೊಳ್ಳಲಿದೆ. ಪ್ರತಿ ಹಳ್ಳಿ, ತಾಲ್ಲೂಕಿನಿಂದಲೂ ಸಹಸ್ರಾರು ಮಂದಿ ಸದಸ್ಯತ್ವ ನೋಂದಣಿ ಪಡೆದು ಮಹಾಸಭಾಕ್ಕೆ ಶಕ್ತಿ ತುಂಬಬೇಕು. ಸಮುದಾಯದ ಮುಖಂಡರು ಜವಾಬ್ದಾರಿ ಹೊತ್ತು ಕಾರ್ಯ ನಿರ್ವಹಿಸುವಂತೆ ಅವರು ಸಲಹೆ ನೀಡಿದರು.
ಬಳಿಕ ಸಚಿವರು, ಸಮುದಾಯ ಮುಖಂಡರು ಹಾಗೂ ಸಾರ್ವಜನಿಕರ ಅಹವಾಲು ಆಲಿಸಿದರು. ಇದೇ ವೇಳೆ ಜನಕಲ್ಯಾಣ ಸಂಘದ ಅಧ್ಯಕ್ಷ ಡಿ.ಶಂಕರ್ ಸೇರಿ ಅರುಂಧತಿ ನೌಕರರ ಸಂಘ ಹಾಗೂ ಎನ್.ರಾಚಯ್ಯ ಸಹಕಾರ ಸಂಘದ ಪದಾಧಿಕಾರಿಗಳು ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳಿಗೆ ಪ್ರತ್ಯೇಕವಾಗಿ ಹೆಚ್ಚುವರಿ ನ್ಯಾಯ ಬೆಲೆ ಅಂಗಡಿಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಸ್ಥಳದಲ್ಲಿಯೇ ಇದ್ದ ಆಹಾರ ಇಲಾಖೆ ಉಪನಿರ್ದೇಶಕ ಮಂಟೇಸ್ವಾಮಿ ಅವರಿಗೆ ಈ ಬಗ್ಗೆ ಪರಿಶೀಲಿಸುವಂತೆ ಸಚಿವರು ಸೂಚಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ಆರ್.ಧರ್ಮಸೇನಾ, ಸಿ.ರಮೇಶ್, ಋತ್ವಿಕ್ ಬೋದ್, ಕಾರ್ಣಿಕ್ ಬೋದ್, ಗೌತಮ್, ಆರ್.ಶಾರದ, ಸಚಿವರ ಆಪ್ತ ಸಹಾಯಕ ಪ್ರೇಮನಾಥ್, ಕಾಂಗ್ರೆಸ್ ಎಸ್ಸಿ ನಗರಾಧ್ಯಕ್ಷ ಕೆ.ರಮೇಶ್, ಮಹಾಸಭಾ ಚಾಮರಾಜನಗರ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ, ಅರುಂಧತಿ ನೌಕರರ ಸಂಘದ ಅಧ್ಯಕ್ಷ ಕೆಂಚಪ್ಪ, ಟಿಒಟಿ ನಾಗರಾಜು, ಪುರಸಭೆ ಸದಸ್ಯ ಎಲ್.ಮಂಜುನಾಥ, ವಕೀಲರಾದ ರಂಗನಾಥ್, ಸುಮಿತ್ರ, ಕೆಬ್ಬೆ ಶಿವಸ್ವಾಮಿ, ರಂಗಸ್ವಾಮಿ, ಮೂಗೂರು ಸಿದ್ದರಾಜು, ಸಿ.ಮಹದೇವ, ಮುಖಂಡರಾದ ಎಚ್.ನಾಗರಾಜು, ಪಾಳ್ಯ ರಾಚಪ್ಪ, ಬಾಲರಾಜು, ಮುಳ್ಳೂರು ಮಂಜು, ರವಿ, ರವಿಪ್ರಕಾಶ್, ಮಹದೇವ, ರಾಕೇಶ್ ಕುಮಾರ್, ಕುಮಾರಸ್ವಾಮಿ, ರಾಜಶೇಖರ್, ಬೂದಬಾಳ್ ಮಹದೇವ್, ಕೆ.ಜಗದೀಶ್, ಸಂದೇಶ, ಜಯಶಂಕರ್, ಎಂ.ರಾಜು ಇದ್ದರು.
ತಿ.ನರಸೀಪುರ : ಹಿರಿಯ ದಲಿತ ನಾಯಕ ಮಾಜಿ ಸಚಿವ ಎನ್.ರಾಚಯ್ಯ ಅವರ ಪುತ್ರ ಮಾಜಿ ಶಾಸಕ ಆರ್. ಧರ್ಮಸೇನಾ ಅವರ ಸಹೋದರ ಆರ್. ಚಿತ್ತಬೋಧ್ ನಿಧನರಾಗಿದ್ದ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಅವರು ಪಟ್ಟಣದ ಗೋಪಾಲಪುರದ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಧರ್ಮಸೇನಾ ಅವರ ನಿವಾಸಕ್ಕೆ ಶನಿವಾರ ಭೇಟಿ ನೀಡಿ ಚಿತ್ತಬೋದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.