
ಸರಗೂರು: ತಾಲ್ಲೂಕಿನ ಕಂದೇಗಾಲ ಗ್ರಾಮದ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಕೊಂಡೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ಕೊಂಡೋತ್ಸವ ಕಣ್ತುಂಬಿಕೊಂಡರು.
ಜಾತ್ರೆಯಲ್ಲಿ ದೇವರಿಗೆ ಪಂಜಿನ ಸೇವೆ, ಮಹಾಮಂಗಳಾರತಿ ನಡೆಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಹಂಚೀಪುರ ಮಠಾಧ್ಯಕ್ಷ ಚನ್ನಬಸವ ಸ್ವಾಮೀಜಿ, ದಡದಹಳ್ಳಿ ಮಠದ ಷಡಕ್ಷರಿಸ್ವಾಮೀಜಿ, ಪಡುವಲು ವಿರಕ್ತಮಠದ ಮಹದೇವ ಸ್ವಾಮೀಜಿ, ಪುರ ಮಠದ ನಾಗೇಂದ್ರ ಸ್ವಾಮಿಜಿ, ದಿವ್ಯ ಸಾನಿದ್ಯ ವಹಿಸಿದ್ದರು.
ದೇವಾಲಯ ಮತ್ತು ಗ್ರಾಮವನ್ನು ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬೆಳಗಿನ ಜಾವದಿಂದಲೇ ಮಹದೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಹೋಮ, ಹವನಗಳು, ರುದ್ರಾಭಿಷೇಕ ಮಾಡಲಾಯಿತು. ಜಾತ್ರಾ ಮಹೋತ್ಸವ ಅಂಗವಾಗಿ ನದಿಗೆ ತೆರಳಿ ಗಂಗೆ ಪೂಜೆ ನಡೆಸಿ ದೇವರ ಉತ್ಸವಮೂರ್ತಿಯನ್ನು ವಿವಿಧ ಹೂವಿನಿಂದ ಅಲಂಕರಿಸಿ ಮೆರವಣಿಗೆ ನಡೆಸಲಾಯಿತು. ನಂತರ ಕೊಂಡೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ, ನೂರಾರು ಭಕ್ತರು ಕೆಂಡದ ಮೇಲೆ ನಡೆದು ಹರಕೆ ತೀರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಚಿಕ್ಕವೀರ ನಾಯಕ ಮಾತನಾಡಿ, ‘ಸರಗೂರು ತಾಲ್ಲೂಕಿನಲ್ಲಿ ಹೆಚ್ಚು ಮಹದೇಶ್ವರ ದೇವಾಲಯಗಳಿದ್ದು, ಕಂದೇಗಾಲ ಮಹದೇಶ್ವರಸ್ವಾಮಿ ಜಾತ್ರೆ ಎಂಬುದಾಗಿ ಹೆಸರು ಪ್ರಸಿದ್ದಿ ಪಡೆದಿದೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರೂಪಾ ಲೋಕೇಶ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ದೇವಸ್ಥಾನದ ಅಭಿವೃದ್ಧಿ ಹೆಚ್ಚಿನ ಧನ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ದಾನಿಗಳು ಹೆಚ್ಚಿನ ಅನುದಾನ ನೀಡಿದರೆ ದೇವಸ್ಥಾನದ ಏಳಿಗೆಗೆ ಸಾಧ್ಯವಾಗಲಿದೆ ಎಂದು ಹೇಳಿದರು.
ಕಂದೇಗಾಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಎಲ್ಲಾ ಭಕ್ತರಿಗೂ ಅನ್ನಸಂತರ್ಪಣೆ ನಡೆಯಿತು.
ಮುಖಂಡರಾದ ಎಂ.ಪಿ.ಶಂಕರ್, ಎಂ.ಎಸ್.ಚರಣ್, ಪಟೇಲ್ ರಾಜಪ್ಪ, ಸೋಮಣ್ಣ, ರವೀಶ್, ಕೆ.ವಿ.ರುದ್ರಯ್ಯ, ಮಾದಪ್ಪ, ಮಲ್ಲೇಶ್, ಶ್ರೀಕಂಠಸ್ವಾಮಿ, ಅಡುಗೆ ಬಸವರಾಜು, ಚಲುವಯ್ಯ, ಲಕ್ಷ್ಮಣ, ರವಿ ಅರಸ್, ಕಾಳಸ್ವಾಮಿ, ಮಹೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.