ADVERTISEMENT

ವಿದ್ಯಾರ್ಥಿನಿಯರ ಓಡಾಟಕ್ಕೆ ನಿರ್ಬಂಧ: ಸುತ್ತೋಲೆ ವಾಪಸು ಪಡೆದ ಮೈಸೂರು ವಿ.ವಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 10:42 IST
Last Updated 28 ಆಗಸ್ಟ್ 2021, 10:42 IST
ಮೈಸೂರು ವಿವಿ
ಮೈಸೂರು ವಿವಿ   

ಮೈಸೂರು: ಮಾನಸಗಂಗೋತ್ರಿ ಆವರಣದಲ್ಲಿ ಸಂಜೆ 6.30ರ ನಂತರ ವಿದ್ಯಾರ್ಥಿನಿಯರ ತಿರುಗಾಟಕ್ಕೆ ನಿರ್ಬಂಧ ವಿಧಿಸಿ ಹೊರಡಿಸಿದ್ದ ಸುತ್ತೋಲೆಯನ್ನು ಮೈಸೂರು ವಿಶ್ವವಿದ್ಯಾಲಯ ಶನಿವಾರ ವಾಪಸ್‌ ಪಡೆದಿದೆ.

ಸಾಂಸ್ಕೃತಿಕ ನಗರಿಯಲ್ಲಿ ವಿದ್ಯಾರ್ಥಿನಿಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಹಿನ್ನೆಲೆಯಲ್ಲಿ ಆ.26ರಂದು ಕುಲಸಚಿವ ಪ್ರೊ.ಆರ್‌.ಶಿವಪ್ಪ ಅವರು ನಿರ್ಬಂಧ ವಿಧಿಸಿ ಸುತ್ತೋಲೆ ಹೊರಡಿಸಿದ್ದರು. ‘ಕ್ಯಾಂಪಸ್‌ನಲ್ಲಿ ಸಂಜೆ 6.30ರ ನಂತರ ಹೆಣ್ಣು ಮಕ್ಕಳು ಒಂಟಿಯಾಗಿ ತಿರುಗಾಡುವುದನ್ನು ಹಾಗೂ ಕೂರುವುದನ್ನು ನಿಷೇಧಿಸಲಾಗಿದೆ. ಪೊಲೀಸ್‌ ಇಲಾಖೆಯ ಮೌಖಿಕ ನಿರ್ದೇಶನದ ಮೇರೆಗೆ ಈ ಸುತ್ತೋಲೆ ಹೊರಡಿಸಲಾಗಿದೆ’ ಎಂದು ಉಲ್ಲೇಖಿಸಿದ್ದರು.

ಈ ನಿಲುವಿಗೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲೇ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಸೂಚನೆ ಮೇರೆಗೆ ಆದೇಶ ಹಿಂಪಡೆದಿದ್ದಾರೆ.

‘ಮಾನಸಗಂಗೋತ್ರಿ ಆವರಣದಲ್ಲಿ ಸಂಜೆ ನಂತರ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು. ನಿತ್ಯ ಸಂಜೆ 6ರಿಂದ 9ರವರೆಗೆ ಗಸ್ತು ತಿರುಗಲು ಭದ್ರತಾ ಸಿಬ್ಬಂದಿ ನಿಯೋಜಿಸಲಾಗುವುದು. ಸಂಜೆ 6.30ರ ನಂತರ ಸುರಕ್ಷತಾ ದೃಷ್ಟಿ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಕುಕ್ಕರಹಳ್ಳಿ ಕೆರೆ ಆವರಣ ಪ್ರವೇಶ ನಿರ್ಬಂಧಿಸಲಾಗಿದೆ’ ಎಂದು ಕುಲಸಚಿವರು ಹೊಸ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.