
ಪ್ರಾತಿನಿಧಿಕ ಚಿತ್ರ
ನಂಜನಗೂಡು: ಗ್ರಾಮೀಣ ಕೃಷಿ ಕಾರ್ಮಿಕರ ನೆರವಿಗೆ ಮನಮೋಹನ್ ಸಿಂಗ್ ಕಾಲದಲ್ಲಿ ಜಾರಿಗೆ ತರಲಾದ ಮನರೇಗಾ ಯೋಜನೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತರುವ ಮೂಲಕ ಗ್ರಾಮ ಪಂಚಾಯಿತಿ ಹಕ್ಕುಗಳನ್ನು ಮೊಟಕುಗೊಳಿಸಿ, ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ ಹೆಸರನ್ನು ಅಳಿಸಿ ಹಾಕುವ ಉನ್ನಾರ ನಡೆಸುತ್ತಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್ ಹೇಳಿದರು.
‘ಗ್ರಾಮೀಣ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ಯೋಜನೆ ಜಾರಿಗೆ ತಂದಿದ್ದು, ಕೇಂದ್ರವು ಯೋಜನೆಯನ್ನು ಸಮಗ್ರವಾಗಿ ಬದಲಾವಣೆ ಮಾಡುವ ಮೂಲಕ ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಹಿಂದೆ ಗ್ರಾಮ ಪಂಚಾಯಿತಿಗಳೇ ಗ್ರಾಮಕ್ಕೆ ಬೇಕಾದ ಕಾಮಗಾರಿಗಳನ್ನು ಆಯ್ಕೆ ಮಾಡುವ, ಕನಿಷ್ಠ ವೇತನ ಹೆಚ್ಚಿಸುವ ಅವಕಾಶವೂ ಇತ್ತು, ಆದರೆ ಬದಲಾದ ಕಾಯ್ದೆಯಲ್ಲಿ ಕೇಂದ್ರ ಸರ್ಕಾರವೇ ಕಾಮಗಾರಿ ಆಯ್ಕೆ ಮಾಡುವ ಹಕ್ಕನ್ನು ಹೊಂದಿದೆ. ಕೇಂದ್ರವೇ ಶೇ 100ರಷ್ಟು ಅನುದಾನ ನೀಡುತ್ತಿತ್ತು. ಬದಲಾದ ಕಾಯ್ದೆಯಲ್ಲಿ ಕೇಂದ್ರ ಸರ್ಕಾರ ಶೇ 60 ಹಾಗೂ ರಾಜ್ಯ ಸರ್ಕಾರ ಶೇ 60ರಷ್ಟು ಅನುದಾನ ಬಳಕೆ ಮಾಡಬೇಕಾಗಿದೆ’ ಎಂದರು.
ಮಾಜಿ ಶಾಸಕ ಬಿ ಹರ್ಷವರ್ಧನ್ ಹೇಳಿಕೆಯಂತೆ ಈ ಯೋಜನೆ ಯಾವ ದೃಷ್ಟಿಯಿಂದಲೂ ಸಹ ವಿಕಸಿತ ಭಾರತದ ಯೋಜನೆಯಾಗುವುದಿಲ್ಲ, ಹರ್ಷವರ್ಧನ್ ಅವರ ತಾತ ಬಿ.ಬಸವಲಿಂಗಪ್ಪ ಮಾವ ಶ್ರೀನಿವಾಸ ಪ್ರಸಾದ್ ಅವರು ಸರ್ಕಾರ ತಪ್ಪು ನಿರ್ಧಾರ ಕೈಗೊಂಡಾಗ ವಿರೋಧಿಸುವ ಮನೋಭಾವ ಹೊಂದಿದ್ದರು, ಅವರ ಹೋರಾಟದ ಮನೋಭಾವವನ್ನು ಮೈಗೂಡಿಸಿಕೊಂಡು ಅವರ ಹಾದಿಯಲ್ಲಿ ಮುನ್ನಡೆಯಬೇಕಿದ್ದ ಮಾಜಿ ಶಾಸಕ ಹರ್ಷವರ್ಧನ್ ಒಂದು ಪಕ್ಷದ ಪರವಹಿಸಿರುವುದು ವಿಷಾದನೀಯ, ಆದ್ದರಿಂದ ಮನರೇಗಾ ಕಾಯ್ದೆಯನ್ನು ಉಳಿಸುವ ಸಲುವಾಗಿ ಕಾಂಗ್ರೆಸ್ ಪಕ್ಷ ಫೆ. 1ರಂದು ಮೈಸೂರಿನ ಟೌನ್‌ಹಾಲ್ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಕೆ.ಜಿ.ಮಹೇಶ್ ಮಾತನಾಡಿ, ‘ಬಿ. ಹರ್ಷವರ್ಧನ್ ಹೇಳಿರುವಂತೆ ಕ್ಷೇತ್ರದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ, ನಮ್ಮ ಶಾಸಕರು ಪ್ರಬುದ್ಧತೆಯಿಂದ ಅಭಿವೃದ್ಧಿ ಕಾರ್ಯಗಳ ಜೊತೆಗೆ ಕ್ಷೇತ್ರವನ್ನು ಮುನ್ನಡೆಸುತ್ತಿದ್ದಾರೆ’ ಎಂದರು.
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಮಾರುತಿ, ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ, ಉಪ್ಪಿನಹಳ್ಳಿ ಶಿವಣ್ಣ, ಲತಾ ಸಿದ್ಧಶೆಟ್ಟಿ, ಗೋವಿಂದರಾಜು, ಕಳಲೆ ರಾಜೇಶ್, ಹಲ್ಲರೆ ಮಹದೇವಸ್ವಾಮಿ, ರಘು, ಚಂದನ್ ಗೌಡ, ವಿಜಯ್ ಕುಮಾರ್, ಮಹೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.