ADVERTISEMENT

ಪ್ರತಿಭಟನೆ ಹತ್ತಿಕ್ಕಬಾರದು; ಆಸ್ತಿಗೂ ಹಾನಿಯಾಗಬಾರದು :ಶಾಸಕ ಜಿ.ಟಿ.ದೇವೇಗೌಡ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 19:45 IST
Last Updated 27 ಡಿಸೆಂಬರ್ 2019, 19:45 IST
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಶುಕ್ರವಾರ ಹಿನಕಲ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಶುಕ್ರವಾರ ಹಿನಕಲ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು   

ಮೈಸೂರು: ‘ನ್ಯಾಯಕ್ಕಾಗಿ ಬೇಡಿಕೆ ಸಲ್ಲಿಸಿ ಪ್ರತಿಭಟಿಸುವುದು ಎಲ್ಲರ ಹಕ್ಕು. ಇದನ್ನು ಯಾರೊಬ್ಬರೂ ಹತ್ತಿಕ್ಕಬಾರದು’ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವಿಜಯನಗರ ವ್ಯಾಪ್ತಿಯಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ‘ಸರ್ಕಾರ ಪೌರತ್ವ (ತಿದ್ದುಪಡಿ) ಕಾಯ್ದೆಯ ಅನುಕೂಲ, ಅನಾನುಕೂಲಗಳ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ಒದಗಿಸಲಿ’ ಎಂದರು.

‘ಪ್ರತಿಭಟನಕಾರರು ಸಹ ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕ ಅಸ್ತಿಗೆ ನಷ್ಟವುಂಟು ಮಾಡಬಾರದು. ಸರ್ಕಾರಿ ಆಸ್ತಿಗೆ ಹಾನಿ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಭೂಮಿ ಪೂಜೆ; ವೀಕ್ಷಣೆ: ವಿಜಯನಗರ 3ನೇ ಹಂತದ ಎ ಬ್ಲಾಕ್ ಬಡಾವಣೆಯ ವಾಣಿಜ್ಯ ಸಂಕೀರ್ಣದ ಹತ್ತಿರವಿರುವ ಮಳೆ ನೀರಿನ ಚರಂಡಿಗೆ ಆರ್.ಸಿ.ಸಿ ಡ್ರೈನ್ ಮತ್ತು ಡೆಕ್ ಸ್ಲ್ಯಾಬ್ ನಿರ್ಮಾಣದ ಕಾಮಗಾರಿಗೆ ಜಿ.ಟಿ.ಡಿ ಚಾಲನೆ ನೀಡಿದರು.

ಐಶ್ವರ್ಯ ಆಸ್ಪತ್ರೆ ಎದುರು ಒಳಚರಂಡಿ ಸಮಸ್ಯೆ ಹಾಗೂ ಐಶ್ವರ್ಯ ಆಸ್ಪತ್ರೆ ಪಕ್ಕದ ರಸ್ತೆ ಅಭಿವೃದ್ಧಿ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿ, ಶೀಘ್ರ ರಸ್ತೆ ಅಭಿವೃದ್ಧಿ ಪಡಿಸುವಂತೆ ಪಾಲಿಕೆ, ಮುಡಾ ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗಾಲದಲ್ಲಿ ನಡೆಯಬಹುದಾದ ಅವಘಡವನ್ನು ತಪ್ಪಿಸುವ ಮುಂಜಾಗ್ರತೆ ಕ್ರಮವಾಗಿ, ವಿಜಯನಗರ 3ನೇ ಹಂತದ ಬಡಾವಣೆಯಲ್ಲಿ ಮಳೆ ನೀರಿನ ಚರಂಡಿ ಪರಿಶೀಲನೆ ನಡೆಸಿ, ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಚರಂಡಿ ದುರಸ್ತಿ ಮಾಡುವಂತೆ ಹೇಳಿದರು.

3ನೇ ಹಂತದ, ಬಿ ಬ್ಲಾಕ್ ಮುಂಭಾಗದ ನಿರ್ಮಿತ ಕೇಂದ್ರ ವೃತ್ತದ ಅಭಿವೃದ್ಧಿಗೆ ಹಾಗೂ ವಿಜಯನಗರ 4ನೇ ಹಂತದಲ್ಲಿ ಹಿನಕಲ್ ಕೆರೆ ಸರ್ವೇ ನಂಬರ್‌ 305ರಲ್ಲಿ ಸ್ಮಶಾನ ಅಭಿವೃದ್ಧಿ(ಜಂಗಲ್ ಕ್ಲಿನಿಕ್)ಗೆ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಮುಡಾ ಆಯುಕ್ತ ಪಿ.ಎಸ್.ಕಾಂತರಾಜು, ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.