ADVERTISEMENT

ಸಿದ್ದನಕೊಪ್ಪಲು | ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮ: ಶಾಸಕ ಡಿ.ರವಿಶಂಕರ್ ಭರವಸೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 2:41 IST
Last Updated 12 ನವೆಂಬರ್ 2025, 2:41 IST
ಕೆ.ಆರ್.ನಗರ ತಾಲ್ಲೂಕಿನ ಸಿದ್ದನಕೊಪ್ಪಲು ಗ್ರಾಮದಲ್ಲಿ ಮಂಗಳವಾರ ನಡೆದ ಜನ ಸಂಪರ್ಕ ಸಭೆಯಲ್ಲಿ  ಶಾಸಕ ಡಿ.ರವಿಶಂಕರ್ ಅವರು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಿದರು
ಕೆ.ಆರ್.ನಗರ ತಾಲ್ಲೂಕಿನ ಸಿದ್ದನಕೊಪ್ಪಲು ಗ್ರಾಮದಲ್ಲಿ ಮಂಗಳವಾರ ನಡೆದ ಜನ ಸಂಪರ್ಕ ಸಭೆಯಲ್ಲಿ  ಶಾಸಕ ಡಿ.ರವಿಶಂಕರ್ ಅವರು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಿದರು   

ಕೆ.ಆರ್.ನಗರ: ‘ಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ ಸಾಕಷ್ಟು ಅನುದಾನ ತಂದು ಕೆಲಸ ಮಾಡಿದ್ದೇನೆ. ನಾನು ಕೇಳಿದಷ್ಟು ಅನುದಾನ ಸಿಗದೇ ಇರುವುದರಿಂದ ತೊಂದರೆಯಾಗುತ್ತಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ತಂದು ಗ್ರಾಮಗಳ ಅಭಿವೃದ್ಧಿಪಡಿಸುತ್ತೇನೆ’ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ತಾಲ್ಲೂಕಿನ ಸಿದ್ದನಕೊಪ್ಪಲು ಗ್ರಾಮದಲ್ಲಿ ಮಂಗಳವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ‘ಗ್ರಾಮಸ್ಥರ ಬೇಡಿಕೆಯಂತೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೊಳಿಸಲಾಗುತ್ತದೆ. ಸಮುದಾಯ ಭವನ, ಜಮೀನಿಗೆ ಹೋಗುವ ರಸ್ತೆ ದುರಸ್ತಿಗೊಳಿಸಲಾಗುತ್ತದೆ, ಬಸ್ ನಿಲ್ದಾಣ ನಿರ್ಮಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

‘ಕುಡಿಯುವ ನೀರಿಗಾಗಿ ಗ್ರಾಮದಲ್ಲಿ 3 ಕೊಳವೆ ಬಾವಿ ಕೊರೆಸಿದರೂ ನೀರು ಬರದೇ ಇರುವುದರಿಂದ ತಜ್ಞರ ಮೂಲಕ ಕೊರೆಸಿ ಗ್ರಾಮಕ್ಕೆ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಲಾಗುತ್ತದೆ. ಸ್ಮಶಾನಕ್ಕೆ ಕೆರೆ ಬಳಿ ಜಾಗ ಗುರುತಿಸಿ ಅಭಿವೃದ್ಧಿಗೊಳಿಸಲಾಗುತ್ತದೆ’ ಎಂದರು.

ADVERTISEMENT

ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಮಾತನಾಡಿ, ‘ಹಲವು ವರ್ಷಗಳಿಂದ ಸರ್ಕಾರಿ ಮತ್ತು ಖಾಸಗಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವವರಿಗೆ ಇ-ಸ್ವತ್ತು ಮಾಡಿಸಿಕೊಳ್ಳಲು ರಾಜ್ಯ ಸರ್ಕಾರ 94ಡಿ ಅಡಿಯಲ್ಲಿ ಹೊಸ ಯೋಜನೆ ಜಾರಿಗೆ ತಂದಿದೆ. ಸಿದ್ದನಕೊಪ್ಪಲು ಗ್ರಾಮದಲ್ಲಿ ಈಗಾಗಲೇ 116 ಹಕ್ಕುಪತ್ರ ನೀಡಲಾಗಿದೆ. ಹಿತ್ತಲಿನ ಜಾಗ ಸೇರಿಸಿಕೊಳ್ಳದೇ ಇರುವುದರಿಂದ ಮನೆ ಮಾಲೀಕರಿಗೆ ತೊಂದರೆಯಾಗಿದೆ. ಶಾಸಕರ ನಿರ್ದೇಶನದಂತೆ ಹಿತ್ತಲು ಜಾಗ ಮತ್ತೊಮ್ಮೆ ಸರ್ವೆ ಮಾಡಿ ಅಳತೆ ಗೊಂದಲ ನಿವಾರಿಸಲಾಗುತ್ತದೆ’ ಎಂದು ತಿಳಿಸಿದರು.

‘ಹಲವು ವರ್ಷಗಳಿಂದ ಪೌತಿ ಖಾತೆ ಮಾಡಿಸಿಕೊಳ್ಳದೇ ಇರುವುದರಿಂದ ತಾಲ್ಲೂಕಿನಲ್ಲಿ ಸುಮಾರು 12,470 ಪ್ರಕರಣಗಳಲ್ಲಿ ಬ್ಯಾಂಕ್ ಸಾಲ, ಸಬ್ಸಿಡಿ ಸೇರಿದಂತೆ ಸರ್ಕಾರದ ಯಾವೊಂದು ಸೌಲಭ್ಯ ಪಡೆದುಕೊಳ್ಳಲು ವಾರಸುದಾರರಿಗೆ ಸಾಧ್ಯವಾಗುತ್ತಿಲ್ಲ. ತಾಲ್ಲೂಕಿನಲ್ಲಿ ಕಂದಾಯ ಇಲಾಖೆಯಿಂದ ಇ-ಪೌತಿ ಆಂದೋಲನ, ಪಿಂಚಣಿ ಅದಾಲತ್ ಮಾಡಲಾಗುತ್ತಿದ್ದು, ವಾರಸುದಾರರು ವಂಶವೃಕ್ಷ, ಇ-ಕೆವೈಸಿ, ಆಧಾರ್ ಸೀಡಿಂಗ್ ಮಾಡಿಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿ.ಪಿ.ಕುಲದೀಪ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮಹದೇವ್, ಉದಯಶಂಕರ್, ಕಾಂಗ್ರೆಸ್ ವಕ್ತಾರ ಸಯ್ಯದ್ ಜಾಬೀರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮದ ಮುಖಂಡರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.