ಮೈಸೂರು: ‘ಕೇಂದ್ರ ರಕ್ಷಣಾ ಇಲಾಖೆ ಹಾಗೂ ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ಮೇ 10ರಂದು ಸಂಜೆ 4ಕ್ಕೆ ಇಲ್ಲಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ‘ಸಿವಿಲ್ ಡಿಫೆನ್ಸ್ ಮಾಕ್‌ಡ್ರಿಲ್’ (ಸೇನೆಯ ಅಣಕು ಕಾರ್ಯಾಚರಣೆ) ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.
ನಗರದ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ತುರ್ತು ಪರಿಸ್ಥಿತಿ ಎದುರಿಸುವ ಜಾಗೃತಿ ಕವಾಯತು ಇದಾಗಿದೆ’ ಎಂದರು.
‘ಅರಮನೆ ಆವರಣದಲ್ಲಿ ಸೂಕ್ತ ಸ್ಥಳ ಗುರುತಿಸಿಕೊಳ್ಳಬೇಕು. ಕವಾಯತಿಗೆ ಅಗತ್ಯವಾದ ತಯಾರಿ ಮಾಡಿಕೊಳ್ಳಬೇಕು. ವ್ಯವಸ್ಥಿತವಾಗಿ ನಡೆಸಬೇಕು. ಬೇಕಾದ ಮಾನವ ಸಂಪನ್ಮೂಲವನ್ನು, ಅಗತ್ಯ ಆಂಬುಲೆನ್ಸ್, ನಿಯಂತ್ರಣ ಕೊಠಡಿ, ಅಗ್ನಿಶಾಮಕ ವಾಹನ, ಚಿಕಿತ್ಸೆಗೆ ವ್ಯವಸ್ಥೆ ಮೊದಲಾದವುಗಳನ್ನು ಸಜ್ಜುಗೊಳಿಸಿಕೊಳ್ಳಬೇಕು’ ಎಂದು ಸೂಚಿಸಿದರು.
ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಎಸ್‌ಪಿ ಎನ್. ವಿಷ್ಣುವರ್ಧನ್, ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸಿಫ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು, ಡಿಸಿಪಿ ಎಂ. ಮುತ್ತುರಾಜ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.