ADVERTISEMENT

ರಂಜಾನ್‌ ಮಾಸ | ಇಫ್ತಾರ್‌ ಸಂಭ್ರಮ: ಹಣ್ಣಿನ ಸಲಾಡ್‌, ಜ್ಯೂಸ್‌ಗಳಿಗೆ ಬೇಡಿಕೆ

ಎಚ್‌.ಕೆ. ಸುಧೀರ್‌ಕುಮಾರ್
Published 19 ಮಾರ್ಚ್ 2025, 6:37 IST
Last Updated 19 ಮಾರ್ಚ್ 2025, 6:37 IST
ಅಶೋಕ ರಸ್ತೆಯ ಮಿಲಾನ್‌ ಪಾರ್ಕ್‌ನಲ್ಲಿ ಇಫ್ತಾರ್‌ ಕೂಟದಲ್ಲಿ ನಿರತರಾಗಿದ್ದ ಮಹಿಳೆಯರು ಮತ್ತು ಮಕ್ಕಳು –ಪ್ರಜಾವಾಣಿ ಚಿತ್ರ: ಹಂಪಾ ನಾಗರಾಜ್‌
ಅಶೋಕ ರಸ್ತೆಯ ಮಿಲಾನ್‌ ಪಾರ್ಕ್‌ನಲ್ಲಿ ಇಫ್ತಾರ್‌ ಕೂಟದಲ್ಲಿ ನಿರತರಾಗಿದ್ದ ಮಹಿಳೆಯರು ಮತ್ತು ಮಕ್ಕಳು –ಪ್ರಜಾವಾಣಿ ಚಿತ್ರ: ಹಂಪಾ ನಾಗರಾಜ್‌   

ಮೈಸೂರು: ಮುಸಲ್ಮಾನರ ಪವಿತ್ರ ಮಾಸ ರಂಜಾನ್‌ ಆಚರಣೆಯು ನಗರದಲ್ಲಿ ಅದ್ದೂರಿಯಾಗಿ ಸಾಗುತ್ತಿದ್ದು, ಸಂಜೆಯ ಅಸರ್‌ ಪ್ರಾರ್ಥನೆ ಬಳಿಕ ಆರಂಭವಾಗುವ ಇಫ್ತಾರ್‌ ಹಲವು ಖಾದ್ಯಗಳ ರುಚಿಯೊಂದಿಗೆ ಪರಿಪೂರ್ಣವಾಗುತ್ತಿದೆ.

ಅಶೋಕ ರಸ್ತೆಯ ಆಜಮ್‌ ಮಸೀದಿ, ಶಾಂತಿನಗರದ ಮಸ್ಜಿದ್– ಇ– ಸೊಹದೌಲ್ ಬದರ್, ಇರ್ವಿನ್‌ ರಸ್ತೆಯ ಜಾಮೀಯಾ ಮಸೀದಿ ಮುಂತಾದ ಕಡೆ ಸಂಜೆ ಪ್ರಾರ್ಥನೆಯನ್ನು ಸಾಮೂಹಿಕವಾಗಿ ಮಾಡುವ ಜನರು, ಬಳಿಕ ಗುಂಪಾಗಿ ಕುಳಿತು ಇಫ್ತಾರ್‌ಗೆ ಸಜ್ಜಾಗುತ್ತಾರೆ. ಖರ್ಜೂರ ಸೇವಿಸಿ, ತಂಪಾದ ಪಾನೀಯಗಳನ್ನು ಕುಡಿದು ಉಪವಾಸ ಕೈಬಿಟ್ಟು ಸಂಭ್ರಮಿಸುವರು.

ಅಂಗಡಿಗಳಲ್ಲಿ ವ್ಯಾಪಾರನಿರತರಾದವರು ಒಮ್ಮೆಗೆ ಎಲ್ಲವನ್ನು ನಿಲ್ಲಿಸಿ ಮನೆಯಿಂದ ತಂದ ಅಥವಾ ಹೋಟೆಲ್‌ಗಳಲ್ಲಿ ಖರೀದಿಸಿದ ಆಹಾರದ ಪೊಟ್ಟಣಗಳನ್ನು ಬಿಚ್ಚುತ್ತಾರೆ. ಮಹಿಳೆಯರೂ ಮಸೀದಿ ಬಳಿಯ ಪಾರ್ಕ್‌ಗಳಲ್ಲಿ, ಖಾಲಿ ಜಾಗಗಳಲ್ಲಿ ಗುಂಪಾಗಿ ಕುಳಿತು ಉಪವಾಸದಿಂದ ದಣಿದ ದೇಹಕ್ಕೆ ಚೈತನ್ಯ ನೀಡುವ ದೃಶ್ಯಗಳು ಕಂಡುಬರುತ್ತವೆ.

ADVERTISEMENT

ಇಲ್ಲಿನ ಸಾಡೇ ರಸ್ತೆ ಆಸುಪಾಸಿನ ಹೋಟೆಲ್‌ಗಳು, ಬಿಸಿ ಬಾದಾಮಿ ಹಾಲಿನ ಗಾಡಿಗಳು, ಲಸ್ಸಿ ಅಂಗಡಿಗಳು, ಜ್ಯೂಸ್‌ ಸೆಂಟರ್‌, ಕತ್ತರಿಸಿದ ಹಣ್ಣುಗಳ ಮಾರಾಟಗಾರರು, ವಿವಿಧ ರೀತಿಯ ಸಸ್ಯಾಹಾರ ಹಾಗೂ ಮಾಂಸಾಹಾರದ ಚಾಟ್ಸ್‌ ಅಂಗಡಿಗಳು ಜನರಿಂದ ಕಿಕ್ಕಿರಿದು ತುಂಬುತ್ತಿದ್ದು, ಜೋಡಿಸಿಟ್ಟ ಖಾದ್ಯಗಳ ರಾಶಿ ಒಮ್ಮೆಲೆ ಕರಗತೊಡಗುವುದನ್ನು ನೋಡುವುದೇ ಅದ್ಭುತ. ವ್ಯಾಪಾರಿಗಳಿಗೂ ಹಬ್ಬದ ಸಡಗರ.

ಬೇಸಿಗೆ ಧಗೆಯ ಕಾರಣಕ್ಕೆ ಕಾಜೂ ಗುಲ್ಕನ್, ಪಿಸ್ತಾ, ವೆನಿಲ್ಲಾ, ರಸ್ಮಲಾಯ್, ಫಲೂದಾ, ಕಲ್ಲಂಗಡಿ ಶರಬತ್‌ ಮುಂತಾದ ತಂಪು ಪಾನೀಯಗಳತ್ತ ಹಲವರು ಆಕರ್ಷಿತರಾಗುತ್ತಿದ್ದಾರೆ. ‘ಜಿಗರ್ ತಂಡ, ಶರಬತ್ ಎ ಫಿದಾ ಎಂಬ ಹೊಸ ಜ್ಯೂಸ್‌ಗಳು ಬಂದಿವೆ, ರುಚಿ ನೋಡಿ ಬಯ್ಯಾ’ ಎಂದು ಆಜಮ್‌ ಮಸೀದಿ ಎದುರು ಒಡಿಶಾದ ಅಬುತಾಲಿಬ್ ಅವರು ಜನರನ್ನು ಕೂಗಿ ಕೂಗಿ ಕರೆಯುತ್ತಿದ್ದರು. ಬಿಸಿ ಬಿಸಿ ಚಿಕನ್ ರೋಲ್, ಶಾಮಿ ಕಬಾಬ್, ಚಿಕನ್ ಸಮೋಸಾ ಎನ್ನುತ್ತಾ ಸೆಳೆಯುವ ಅಂಗಡಿಗಳೂ ಅನೇಕ. ಅಜೀಂ ಅಂಗಡಿಯ ಹಲೀಂ ಅಂತೂ ಫೇವರೇಟ್‌.

‘ಕಬಾಬ್, ಚಿಕನ್‌ ಲಾಲಿಪಾಪ್, ಹೈದರಾಬಾದಿ ಹಲೀಂ, ಶವರ್ಮಾ, ಕಟ್ಲೆಟ್‌, ಖೀಮಾ, ಮೋಮೊಸ್, ಚಿಕನ್‌ ರೋಲ್‌ ಖಾದ್ಯಗಳು ಹಾಗೂ ವಿವಿಧ ರೀತಿಯ ಬಿರಿಯಾನಿಗಳೂ ಮಾರಾಟವಾಗುತ್ತಿದ್ದು, ಇಫ್ತಾರ್‌ಗಾಗಿಯೇ ದಿನವೆಲ್ಲಾ ತಯಾರಿ ನಡೆಸುತ್ತೇವೆ’ ಎಂದು ವ್ಯಾಪಾರಿ ಅಬ್ದುಲ್ಲಾ ಹೇಳಿದರು.

ಸಹರಿ ತಯಾರಿ: ‘ಬೆಳಿಗ್ಗೆ ಉಪವಾಸ ಆರಂಭಕ್ಕೂ ಮುನ್ನ, ಹಲವು ಮನೆಗಳಲ್ಲಿ ಮಹಿಳೆಯರು ಬೆಳಿಗ್ಗೆ 3ಕ್ಕೆ ಎದ್ದು ಮನೆಮಂದಿಗೆಲ್ಲ ಸಹರಿ ಅಡುಗೆ ಮಾಡುತ್ತಾರೆ. ಸಹರಿಯಲ್ಲಿ ವೈವಿಧ್ಯದ ಅಡುಗೆಗಳನ್ನು ಮಾಡುವುದಿಲ್ಲ. ಸಾಧಾರಣವಾಗಿ ಅನ್ನ, ಮುದ್ದೆ, ಸಾರು ಮಾಡುತ್ತೇವೆ’ ಎಂದು ಮಂಡಿ ಮೊಹಲ್ಲಾದ ರುಕ್ಸಾನಾ ಮಾಹಿತಿ ನೀಡಿದರು.

ಮನೆ ಮಂದಿಯೆಲ್ಲ ಕುಳಿತು ಇಫ್ತಾರ್‌ ಆಹಾರ ಸೇವಿಸುವುದು ದಿನದ ದಣಿವನ್ನು ಮರೆಸುತ್ತದೆ. ಹಬ್ಬವು ಹಸಿವಿನ ಮೌಲ್ಯವನ್ನು ತಿಳಿಸುತ್ತದೆ
ಅಬ್ದುಲ್ಲಾ ಮೀನಾ ಬಜಾರ್‌ ಗ್ರಾಹಕ

ಮಹಿಳೆ ಮಕ್ಕಳ ‘ಇಫ್ತಾರ್‌ ಪಾರ್ಕ್‌’

ಇಲ್ಲಿನ ಅಶೋಕ ರಸ್ತೆಯ ಆಜಮ್‌ ಮಸೀದಿ ಮುಂಭಾಗದ ಮಿಲಾದ್‌ ಪಾರ್ಕ್‌ ಸಂಜೆ ಅಸರ್‌ ಪ್ರಾರ್ಥನೆಯ ಬಳಿಕ ಮಹಿಳೆ ಮಕ್ಕಳ ‘ಇಫ್ತಾರ್‌ ಪಾರ್ಕ್‌’ ಆಗಿ ಬದಲಾಗುತ್ತದೆ. ಪ್ರಾರ್ಥನೆ ನೆರವೇರಿಸಿದ ಮಹಿಳೆಯರು ಮಕ್ಕಳೊಂದಿಗೆ ಬುತ್ತಿಯ ಗಂಟನ್ನು ತೆರೆಯುತ್ತಾರೆ. ಬಗೆ ಬಗೆಯ ಆಹಾರ ಖಾದ್ಯಗಳನ್ನು ಸೇವಿಸಿ ಉಪವಾಸ ಕೊನೆಗೊಳಿಸುತ್ತಾರೆ. ದಿನದ ಆಗುಹೋಗುಗಳ ಮಾತುಕತೆಗೂ ಮಕ್ಕಳ ಆಟೋಟಕ್ಕೆ ಲಾಲನೆ– ಪಾಲನೆಗೆ ವೇದಿಕೆಯಾಗುತ್ತಿದೆ. ಮಂಡಿ ಮೊಹಲ್ಲಾ ಎನ್‌.ಆರ್‌. ಮೊಹಲ್ಲಾ ರಾಜೇಂದ್ರ ನಗರ ಬೀಬಿ ಕೇರಿ ನಜರ್‌ಬಾದ್‌ ಮುಂತಾದ ಕಡೆಗಳಿಂದ ನೂರಾರು ಜನರು ಕುಟುಂಬದೊಂದಿಗೆ ಆಗಮಿಸಿ ಸಂಭ್ರಮಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.