ADVERTISEMENT

ಯೋಗ ದಿನ: ಯದುವೀರ್ ಸೇರಿ ಅತಿಥಿಗಳ ಬಗ್ಗೆ ತೀರ್ಮಾನಿಸಿಲ್ಲ- ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 5:39 IST
Last Updated 15 ಜೂನ್ 2022, 5:39 IST
 ಸಂಸದ ಪ್ರತಾಪ ಸಿಂಹ
ಸಂಸದ ಪ್ರತಾಪ ಸಿಂಹ   

ಮೈಸೂರು: ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಜೂನ್ 21ರಂದು ನಡೆಯಲಿರುವ ಯೋಗ ದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಮುಖ್ಯ ಅತಿಥಿಗಳನ್ನಾಗಿ ಯಾರಾರಿಗೆ ಆಹ್ವಾನ ನೀಡಬೇಕು ಎನ್ನುವುದನ್ನು ಇನ್ನೂ ತೀರ್ಮಾನಿಸಿಲ್ಲ ಎಂದು ಸಂಸದ ಪ್ರತಾಪ ಸಿಂಹ ಸ್ಪಷ್ಟಪಡಿಸಿದರು.

ಯೋಗ ದಿನದ ಕಾರ್ಯಕ್ರಮಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಆಹ್ವಾನಿಸಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ನಡೆಯಿತ್ತಿರುವ ಚರ್ಚೆಗೆ ಸಂಬಂಧಿಸಿ ಇಲ್ಲಿ ಬುಧವಾರ ಪ್ರತಿಕ್ರಿಯೆ ನೀಡಿದರು.

ಇದುವರೆಗೂ ಐದು ವಿಶ್ವ ಯೋಗ ದಿನ ಕಾರ್ಯಕ್ರಮಗಳು ನಡೆದಿವೆ. ಅಲ್ಲಿ ವೇದಿಕೆಗಳು ರಾಜಕಾರಣಿಗಳ ವೇದಿಕೆ ಆಗಬಾರದೆಂದು ಅತಿಥಿಗಳ ಸಂಖ್ಯೆ ಕಡಿಮೆ ಇರುತ್ತದೆ. ಇಲ್ಲೂ ಅದೇ ವ್ಯವಸ್ಥೆ ಇರಲಿದೆ. ಗಣ್ಯರನ್ನು ಕರೆಯುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ ಎಂದರು.

ADVERTISEMENT

ಮೈಸೂರಿನಲ್ಲಿ ಹಲವು ಯತಿಗಳು, ರಾಜವಂಶಸ್ಥರು ಇದ್ದಾರೆ. ಅವರೆಲ್ಲರಿಗೂ ಗೌರವ ಕೊಡುವ ಕೆಲಸವನ್ನು ನಾವು ಹಿಂದಿನಿಂದಲೂ ಮಾಡುತ್ತಿದ್ದೇವೆ. ಆದರೆ, ಸಿದ್ದರಾಮಯ್ಯ ಅವರು ರಾಜವಂಶಸ್ಥರ ಬಗ್ಗೆ ಹಿಂದೆ ಹಲವು ಬಾರಿ ಉದ್ದಟತನದಿಂದ ಮಾತನಾಡಿದ್ದರು. ಅವರು ಮಹಾರಾಜರ ಬಗ್ಗೆ ನಿಕೃಷ್ಟವಾಗಿ ಮಾತನಾಡಿದಾಗ ಪ್ರತ್ಯುತ್ತರ ಕೊಟ್ಟವನು ನಾನೊಬ್ಬನೇ ಹೊರತು ಮೈಸೂರಿನ ಯಾವ ರಾಜಕಾರಣಿಯೂ ಧ್ವನಿ ಎತ್ತಿರಲಿಲ್ಲ. ಮಹಾರಾಜರ ಕುಟುಂಬಕ್ಕೆ ಅತಿ ಹೆಚ್ಚು ಅವಮಾನ ಮಾಡಿದವರು ಸಿದ್ದರಾಮಯ್ಯ. ಮಹಾರಾಜರು ವಾಸ ಮಾಡುವ ಅರಮನೆ ಕಿತ್ತುಕೊಳ್ಳಲು ಪ್ರಯತ್ನ ಮಾಡಿದವರು ಯಾರು? ಅವರಿಗೆ ಕಿರುಕುಳ ಕೊಟ್ಟವರಾರು? ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದವರಾರು? ಎಂದು ವಾಗ್ದಾಳಿ ನಡೆಸಿದರು.

ಮಹಾರಾಜರಿಗೆ ಅಪಾರ ಗೌರವ ತೋರಿದವರು ನಾವು. ಯಾರೋ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಪಾಠ ಹೇಳಿಕೊಡುವುದು ಬೇಡ. ಕ್ಷುಲ್ಲಕ ಆರೋಪ ಮಾಡುವುದನ್ನು ಬಿಡಿ. ಮಹಾರಾಜರಿಗೆ ಗೌರವ ಕೊಟ್ಟವರು ಯಾರು, ಗೌರವಿಸಿದವರು ಯಾರು ಎನ್ನುವುದು ಜನರಿಗೆ ಗೊತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.