ADVERTISEMENT

ಸರ್ಕಾರಿ ಆಸ್ತಿ ರಕ್ಷಿಸಲು ಹುಣಸೂರು ನಗರಸಭೆ ವಿಫಲ: ಶಾಸಕ ಎಚ್‌.ಪಿ. ಮಂಜುನಾಥ್‌

ಪೌರಾಡಳಿತ ನಿರ್ದೇಶಕಿ ಬಿ.ಬಿ.ಕಾವೇರಿ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 5:26 IST
Last Updated 17 ಜುಲೈ 2021, 5:26 IST
ಹುಣಸೂರು ನಗರದ ಸಂತೆ ಮಾಳದಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಿಸುತ್ತಿರುವ ವಾಹನ ನಿಲ್ದಾಣ ಮತ್ತು ತರಕಾರಿ ಮಾರುಕಟ್ಟೆ ಕಾಮಗಾರಿ ಸ್ಥಳಕ್ಕೆ ಬಿ.ಬಿ.ಕಾವೇರಿ, ಎಚ್‌.ಪಿ. ಮಂಜುನಾಥ್, ಅನುಷಾ ಭೇಟಿ ನೀಡಿ ಪರಿಶೀಲಿಸಿದರು
ಹುಣಸೂರು ನಗರದ ಸಂತೆ ಮಾಳದಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಿಸುತ್ತಿರುವ ವಾಹನ ನಿಲ್ದಾಣ ಮತ್ತು ತರಕಾರಿ ಮಾರುಕಟ್ಟೆ ಕಾಮಗಾರಿ ಸ್ಥಳಕ್ಕೆ ಬಿ.ಬಿ.ಕಾವೇರಿ, ಎಚ್‌.ಪಿ. ಮಂಜುನಾಥ್, ಅನುಷಾ ಭೇಟಿ ನೀಡಿ ಪರಿಶೀಲಿಸಿದರು   

ಹುಣಸೂರು: ‘ನಗರಸಭೆ ಸಾರ್ವಜನಿಕರ ಮತ್ತು ಸರ್ಕಾರಿ ಆಸ್ತಿಗಳನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅನಧಿಕೃತ ಖಾತೆಗಳ ಹಾವಳಿ ಹೆಚ್ಚಾಗಿದೆ’ ಎಂದು ಶಾಸಕ ಎಚ್‌.ಪಿ.ಮಂಜುನಾಥ್ ಅವರು ಆರೋಪಿಸಿದರು.

ರಾಜ್ಯ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಬಿ.ಬಿ.ಕಾವೇರಿ ಅವರು ನಗರಸಭೆಗೆ ಶುಕ್ರವಾರ ದಿಢೀರ್‌ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಾಸಕರು ಮಾತನಾಡಿದರು.

‘ನಗರಸಭೆ ವ್ಯಾಪ್ತಿಯಲ್ಲಿ ಬೆಲೆ ಬಾಳುವ ನಿವೇಶನಗಳನ್ನು ಬೇರೆಯವರಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ. ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಭೂಮಿ ಇಲ್ಲವಾಗಿದೆ. ಈ ಹಿಂದಿನ ಪೌರಾಯುಕ್ತ ಮತ್ತು ಕಂದಾಯ ಅಧಿಕಾರಿಗಳು ಮಾಡಿದ ಲೋಪದಿಂದ ನಗರಸಭೆ ಅತಂತ್ರವಾಗಿದೆ’ ಎಂದು ದೂರಿದರು.

ADVERTISEMENT

‘ನಗರಸಭೆ ವತಿಯಿಂದ ನಿರ್ಮಿಸಿರುವ ಅಂಗಡಿ ಮಳಿಗೆ ಹರಾಜಿಗೆ 5 ವರ್ಷಗಳಿಂದ ಅಧಿಕಾರಿಗಳ ಮೇಲೆ ಒತ್ತಡ ತಂದು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಹರಾಜು ಪ್ರಕ್ರಿಯೆ ನಡೆಸಿಲ್ಲ. ಇದರಿಂದ ₹50 ಲಕ್ಷಕ್ಕೂ ಹೆಚ್ಚು ಬಾಡಿಗೆ ಕೈತಪ್ಪಿದೆ. ಈ ಸಂಬಂಧ ಯಾವುದೇ ಕಾನೂನು ಚೌಕಟ್ಟಿನಲ್ಲೂ ಒತ್ತಡ ಹೇರಲಾಗದೆ ನಗರಸಭೆ ಕೈ ಕಟ್ಟಿದೆ’ ಎಂದರು.

‘ನಗರದಲ್ಲಿ ಸಮಗ್ರ ಒಳಚರಂಡಿ ಯೋಜನೆಯನ್ನು ₹80 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ, ಕೆಲ ಕುಂಟು ನೆಪವೊಡ್ಡಿ ಯೋಜನೆಯನ್ನು ತಡೆ ಹಿಡಿಯಲಾಗಿದೆ. ಈ ಬಗ್ಗೆ ಗಮನ ಹರಿಸಬೇಕು’ ಎಂದು ಶಾಸಕರು ಮನವಿ ಮಾಡಿದರು.

ಕುಡಿಯುವ ನೀರು ಯೋಜನೆ: ನಗರಕ್ಕೆ ಎರಡನೇ ಹಂತದ ಕಾವೇರಿ ಕುಡಿಯುವ ನೀರು ಯೋಜನೆಗೆ ಅನುಮೋದನೆ ಸಿಕ್ಕಿ 5 ವರ್ಷ ಕಳೆದಿದ್ದರೂ ಅನುದಾನ ಬರುವುದು ವಿಳಂಬವಾಗಿದೆ. ಇದರಿಂದ ಕಾಮಗಾರಿ ಕುಂಠಿತಗೊಂಡಿದೆ ಎಂದು ಎಚ್‌.ಪಿ.ಮಂಜುನಾಥ್‌ ಹೇಳಿದರು.

‘ಹೆಚ್ಚುವರಿ ಅನುದಾನ ನೀಡಲು ಅವಕಾಶವಿದ್ದು, ತಳಮಟ್ಟದಲ್ಲಿ ಅಧಿಕಾರಿಗಳು ನಿಗಾವಹಿಸಿದರೆ ಅನುದಾನ ಬರಲಿದೆ. ಪೌರಾಡಳಿತದಲ್ಲಿ ಅನುದಾನಕ್ಕೆ ಕೊರತೆ ಇಲ್ಲ’ ಎಂದು ಬಿ.ಬಿ.ಕಾವೇರಿ ಹೇಳಿದರು.

ಅಕ್ರಮ ಬಡಾವಣೆ, ನಗರಸಭೆ ಆಸ್ತಿ ಮತ್ತು ಅಕ್ರಮ ಖಾತೆ ಸಂಬಂಧಿಸಿದಂತೆ ದಾಖಲಾತಿಗಳನ್ನು ನಗರಸಭೆ ಸದಸ್ಯರು ಬಿ.ಬಿ.ಕಾವೇರಿ ಅವರಿಗೆ ಸಲ್ಲಿಸಿ, ಈ ಬಗ್ಗೆ ಕ್ರಮವಹಿಸುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಅನುಷಾ, ಉಪಾಧ್ಯಕ್ಷ ದೇವನಾಯಕ, ನಗರಸಭೆ ಸದಸ್ಯರಾದ ಸತೀಶ್, ಸ್ವಾಮಿಗೌಡ, ಕೃಷ್ಣರಾಜ್ ಗುಪ್ತ, ಶ್ರೀನಾಥ್, ಅಂಡಿ ನಗರ ಪೌರಾಯುಕ್ತ ರಮೇಶ್, ಕಾಂಗ್ರೆಸ್ ಮುಖಂಡ ರಾಘು ಇದ್ದರು.‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.