ADVERTISEMENT

ಮ್ಯೂಚುವಲ್ ಫಂಡ್‌ ಜಾದೂವಲ್ಲ; ಸುಮಂತ್‌ ಎಂ.ಎಸ್‌

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 5:26 IST
Last Updated 17 ಜನವರಿ 2026, 5:26 IST
ಸುಮಂತ್‌ ಎಂ.ಎಸ್‌
ಸುಮಂತ್‌ ಎಂ.ಎಸ್‌   

ಮೈಸೂರು: ‘ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದರಿಂದ ತಕ್ಷಣ ಫಲ ಸಿಗದಿರಬಹುದು. ಆದರೆ ತಾಳ್ಮೆಯಿಂದ ಕಾದರೆ, ಇತರ ಯಾವುದೇ ಹೂಡಿಕೆಗಳಿಗಿಂತಲೂ ಹೆಚ್ಚು ಲಾಭವಂತೂ ಸಿಗುತ್ತದೆ’ ಎಂದು ‘ಕೆನರಾ ರೊಬೆಕೊ’ ಕ್ಲಸ್ಟರ್‌ ಮುಖ್ಯಸ್ಥ ಸುಮಂತ್‌ ಎಂ.ಎಸ್‌ ಹೇಳಿದರು.

ನಗರದಲ್ಲಿ ಶುಕ್ರವಾರ ‘ಪ್ರಜಾವಾಣಿ’ ಮತ್ತು ‘ಕೆನರಾ ರೊಬೆಕೊ’ ಮ್ಯೂಚುವಲ್ ಫಂಡ್ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ‘ಸ್ಮಾರ್ಟ್‌ ಟುಮಾರೋಸ್‌– ಹೂಡಿಕೆದಾರರಿಗೆ ಶಿಕ್ಷಣ ಮತ್ತು ಜಾಗೃತಿ’ ಕಾರ್ಯಕ್ರಮ’ದಲ್ಲಿ ಅವರು ಉಪನ್ಯಾಸ ನೀಡಿ, ‘ಹೂಡಿಕೆದಾರರು ತಾಳ್ಮೆ, ಶಿಸ್ತು ಹಾಗೂ ವ್ಯವಸ್ಥಿತವಾದ ವಿಧಾನದಲ್ಲಿ ಮುಂದುವರಿಯುವುದು ಮುಖ್ಯ. ಬೇಗ ಹೂಡಿಕೆ ಆರಂಭಿಸಿದಷ್ಟೂ ಲಾಭ ಜಾಸ್ತಿ’ ಎಂದರು.

‘ಮ್ಯೂಚುವಲ್ ಫಂಡ್‌ನಲ್ಲಿ ಮಾಡಿದ ಹೂಡಿಕೆಯನ್ನು ಯಾವಾಗ ಬೇಕಾದರೂ ಹಿಂದಕ್ಕೆ ಪಡೆಯಬಹುದು. ಆದರೆ, ಹೂಡಿಕೆ ಮಾಡುವಾಗ ದೀರ್ಘಾವಧಿ ಗುರಿ ಇಟ್ಟುಕೊಂಡರೆ ಒಳ್ಳೆಯದು. ಇದರಿಂದ ಲಾಭ ಗಳಿಸುವ ಅವಕಾಶ ಹೆಚ್ಚು ಇರುತ್ತದೆ. ಮಾರುಕಟ್ಟೆಯ ಸಣ್ಣಪುಟ್ಟ ಏರುಪೇರುಗಳಿಂದ ವಿಚಲಿತವಾಗಬೇಕಿಲ್ಲ. ಐದರಿಂದ ಏಳು ವರ್ಷವಾದರೂ ಕಾಯಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಅರ್ಥವ್ಯವಸ್ಥೆ ಚೆನ್ನಾಗಿದೆ. ದೇಶವು ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. 2025–26ರಲ್ಲೂ ದೇಶದ ಒಟ್ಟು ಆಂತರಿಕ ಉತ್ಪನ್ನವು ಸರಿ ಸುಮಾರು ಶೇ 7ರ ದರದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ನಮ್ಮಲ್ಲಿ ತಲಾ ಆದಾಯ ₹2.34 ಲಕ್ಷ ಇದೆ. ಪ್ರಸ್ತುತ ದೇಶವು ₹3.97 ಲಕ್ಷ ಕೋಟಿ (4 ಟ್ರಿಲಿಯನ್ ಡಾಲರ್) ಆರ್ಥಿಕತೆ ಹೊಂದಿದ್ದು, 2047ರ ವೇಳೆಗೆ ಇದು ₹29.02 ಲಕ್ಷ ಕೋಟಿಗೆ (30 ಟ್ರಿಲಿಯನ್ ಡಾಲರ್) ಹೆಚ್ಚಳವಾಗುವ ನಿರೀಕ್ಷೆಯಿದೆ’ ಎಂದು ವಿವರಿಸಿದರು.

‘ದೇಶದ ಬೆಳವಣಿಗೆಯಲ್ಲಿ ಸಾರ್ವಜನಿಕರು ಭಾಗೀದಾರರಾಗಲು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಆಯ್ಕೆ. ಹೂಡಿಕೆ ಮಾಡಿದರೆ ಹಣದುಬ್ಬರದಿಂದ ಆಗುವ ನಷ್ಟವನ್ನು ಸಮರ್ಥವಾಗಿ ಎದುರಿಸಬಹುದಲ್ಲದೆ, ಲಾಭವನ್ನೂ ಗಳಿಸುವ ಅವಕಾಶ ಹೆಚ್ಚಿರುತ್ತದೆ’ ಎಂದರು.

ಕಾರ್ಯಾಗಾರದಲ್ಲಿ ಎಸ್‌ಐಪಿ (ಸಿಸ್ಟಮೆಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲಾನ್) ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆಯ ಒಂದು ರೂಪ, ಎಸ್‌ಟಿಪಿ (ಸಿಸ್ಟಮೆಟಿಕ್ ಟ್ರಾನ್ಸ್‌ಫರ್ ಪ್ಲಾನ್) ಒಂದು ಮ್ಯೂಚುವಲ್ ಫಂಡ್ ಸ್ಕೀಮ್‌ನಿಂದ ಇನ್ನೊಂದು ಮ್ಯೂಚುವಲ್ ಫಂಡ್ ಸ್ಕೀಮ್‌ಗೆ ವರ್ಗಾವಣೆ ಮಾಡುವ ವಿಧಾನ, ಎಸ್‌ಡಬ್ಲ್ಯುಪಿ (ಸಿಸ್ಟಮೆಟಿಕ್ ವಿತ್‌ಡ್ರಾವಲ್ ಪ್ಲಾನ್) ವ್ಯವಸ್ಥಿತ ಹಿಂತೆಗೆತ ಯೋಜನೆ, ಇನ್‌ವೆಸ್ಟ್‌ಮೆಂಟ್ ಫಂಡ್, ಈಕ್ವಿಟಿ, ಸ್ಟಾಕ್ ಹೀಗೆ ಮ್ಯೂಚುವಲ್‌ ಫಂಡ್‌ನ ವಿವಿಧ ಉಳಿತಾಯ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು.

‘ಪ್ರಜಾವಾಣಿ’ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕೆಯು ಹಮ್ಮಿಕೊಳ್ಳುತ್ತಿರುವ ಓದುಗಸ್ನೇಹಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

‘ಡೆಕ್ಕನ್‌ ಹೆರಾಲ್ಡ್‌’ ಬ್ಯೂರೊ ಮುಖ್ಯಸ್ಥ ಟಿ.ಆರ್.ಸತೀಶ್‌ ಕುಮಾರ್‌, ಟಿಪಿಎಂಎಲ್‌ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್.ಪ್ರಕಾಶ್, ಸಹಾಯಕ ವ್ಯವಸ್ಥಾಪಕ ಲೋಕೇಶ್ ಪಿ.ಆರ್., ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕ ಸ್ಕಂದನ್‌ರಾವ್, ಈವೆಂಟ್ಸ್‌ ವಿಭಾಗದ ಪ್ರಮೋದ್ ಪಾಲ್ಗೊಂಡಿದ್ದರು.

ಕಾರ್ಯಾಗಾರವು ಹೊಸ ಹೂಡಿಕೆದಾರರಿಗೆ ಪ್ರಯೋಜನಕಾರಿಯಾಗಿದೆ. ಹೂಡಿಕೆಯ ಮಹತ್ವ ತಿಳಿಯಲು ನೆರವಾಗಿದೆ. ಕಾರ್ಯಕ್ರಮದಲ್ಲಿ ಹಣಕಾಸು ನಿರ್ವಹಣೆ ಬಗ್ಗೆ ಗೊತ್ತಿರದ ವಿಚಾರಗಳನ್ನು ತಿಳಿದುಕೊಂಡೆ. ಗೊಂದಲಗಳು ಪರಿಹಾರವಾದವು

–ಬಿ.ಎಂ.ಸುರೇಶ್‌ ಕುಮಾರ್‌ ಶಕ್ತಿನಗರ

ಮ್ಯೂಚುವಲ್ ಫಂಡ್‌ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಕಾರ್ಯಾಗಾರದಲ್ಲಿ ಸಾಕಷ್ಟು ವಿಚಾರ ತಿಳಿದುಕೊಂಡೆ. ಭವಿಷ್ಯದ ಬೆಳವಣಿಗೆಗೆ ಹೂಡಿಕೆ ಮಾಡುವ ಆಸಕ್ತಿ ಮೂಡಿದೆ. ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದ ಪ್ರಜಾವಾಣಿಗೆ ಧನ್ಯವಾದ

–ನವ್ಯಾ ಕೆ ವಿನಾಯಕನಗರ ಮೈಸೂರು

‘ಮ್ಯೂಚುವಲ್ ಫಂಡ್‌ ಜಾದೂವಲ್ಲ’

ಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದ ‘ಕೆನರಾ ರೊಬೆಕೊ’ ಕ್ಲಸ್ಟರ್‌ ಮುಖ್ಯಸ್ಥ ಸುಮಂತ್‌ ಎಂ.ಎಸ್‌ ಅವರು ‘ಮ್ಯೂಚುವಲ್ ಫಂಡ್‌ ಹೂಡಿಕೆ ತಕ್ಷಣದ ಜಾದೂವಲ್ಲ. ಅದೊಂದು 8ನೇ ಅದ್ಭುತ. ಹೂಡಿಕೆ ಮಾಡಲು ಬಯಸುವ ಹೂಡಿಕೆದಾರರು ಮೊದಲು ಸರಿಯಾದ ಮ್ಯೂಚುಯಲ್ ಫಂಡ್ ಆಯ್ಕೆ ಮಾಡಬೇಕು. ಮಾರುಕಟ್ಟೆಯಲ್ಲಿ ಏರಿಳಿತವಾದರೂ ಹೂಡಿಕೆ ಮಾಡಿದ ಹಣಕ್ಕೆ ತೊಂದರೆಯಾಗದು. ಒಂದೇ ಕಡೆಗೆ ಹೆಚ್ಚು ಹೂಡಿಕೆ ಮಾಡಬಾರದು. ದೊಡ್ಡ ಮೊತ್ತವಿದ್ದರೆ ಒಂದಕ್ಕಿಂತ ಹೆಚ್ಚು ಕಡೆ ಹೂಡುವುದೇ ಸುರಕ್ಷಿತ’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.