ADVERTISEMENT

ಕಳ್ಳತನವನ್ನೇ ಕಸುಬಾಗಿಸಿಕೊಂಡಿದ್ದ ಭೂಪ: ಹೈಟೆಕ್‌ ಠಕ್ಕನಾಗಿದ್ದ ಆಟೊ ಚಾಲಕ ಜೈಲಿಗೆ

ಶಿವಪ್ರಸಾದ್ ರೈ
Published 26 ಫೆಬ್ರುವರಿ 2026, 6:06 IST
Last Updated 26 ಫೆಬ್ರುವರಿ 2026, 6:06 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಮೈಸೂರು: ಆಟೊ ಚಾಲಕನಾಗಿದ್ದ ವ್ಯಕ್ತಿಯೊಬ್ಬ ಕಳ್ಳತನವನ್ನೇ ವೃತ್ತಿಯನ್ನಾಗಿಸಿ, 69 ಕಳವು ಪ್ರಕರಣಗಳಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ನಗರದ ಬಿ.ಡಿ.ಕಾಲೊನಿ ನಿವಾಸಿ ಸೈಯದ್‌ ಅಲಿಂ (39) ಆರೋಪಿ. 

ಈತ 2013 ರಿಂದೀಚೆಗೆ ಮನೆಗಳಲ್ಲಿ ಕದಿಯುವುದನ್ನೇ ಕೆಲಸ ಮಾಡಿಕೊಂಡಿದ್ದ ಎಂಬುದು ಪೊಲೀಸರು ನಡೆಸಿದ ವಿಚಾರಣೆ ವೇಳೆ ತಿಳಿದುಬಂದಿದೆ.

ADVERTISEMENT

ಸರಸ್ವತಿಪುರಂ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳವು ಪ್ರಕರಣವನ್ನು ಪೊಲೀಸರು ಬೇಧಿಸಿದಾಗ ಈತನ ವೃತ್ತಾಂತ ಬಯಲಾಗಿದೆ. ಕೆಆರ್‌ಎಸ್‌ ರಸ್ತೆಯಲ್ಲಿ ಕುಟುಂಬದೊಂದಿಗೆ ತೆರಳುತ್ತಿದ್ದಾಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಅದೇ ಠಾಣೆ ವ್ಯಾಪ್ತಿಯಲ್ಲಿ 9 ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆಯಲ್ಲಿ ಬಯಲಾಗಿದೆ. 

ತೀವ್ರ ವಿಚಾರಣೆ ನಡೆಸಿದಾಗ ಈತನ ವಿರುದ್ಧ ರಾಜ್ಯದಲ್ಲಿ 69 ಪ್ರಕರಣಗಳು ದಾಖಲಾಗಿರುವುದು ಗೊತ್ತಾಗಿದೆ. ಈ ಪೈಕಿ ಮೈಸೂರು ನಗರದ ವಿವಿಧ ಠಾಣೆಗಳಲ್ಲಿ 49 ಪ್ರಕರಣ ಹಾಗೂ ಇತರೆ ಜಿಲ್ಲೆಯಲ್ಲಿ 20 ಪ್ರಕರಣ. ಪೊಲೀಸರಿಂದ ಬಂಧಿತನಾಗುತ್ತಿದ್ದ ಈತ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಕಳ್ಳತನದಲ್ಲಿ ತೊಡಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

‘ಸಂಜೆ ಹಾಗೂ ರಾತ್ರಿ ಹೊತ್ತು ವಾಯುವಿಹಾರಕ್ಕೆ ತೆರಳುವವರ ಅಥವಾ ಖಾಲಿಯಿರುವ ಮನೆಗಳಲ್ಲಿ ಕಳವು ಮಾಡುತ್ತಿದ್ದ. ಹೆಚ್ಚಿನ ಬಾರಿ ಒಬ್ಬನೇ ಅಥವಾ ಸಹಾಯಕ್ಕಾಗಿ ಮತ್ತೊಬ್ಬನನ್ನು ಸೇರಿಸಿಕೊಳ್ಳುತ್ತಿದ್ದ. ರಾಡ್‌ ಮೂಲಕ ಬಾಗಿಲನ್ನು ಮೀಟಿ, ಮನೆಯೊಳಗೆ ಹೋಗಿ ಕಳ್ಳತನ ಮಾಡುತ್ತಿದ್ದ. ಚಿನ್ನಾಭರಣವನ್ನು ಮಾರಿ ಹಣ ಖರ್ಚು ಮಾಡುತ್ತಿದ್ದ. 9 ಪ್ರಕರಣಕ್ಕೆ ಸಂಬಂಧಿಸಿ 529 ಗ್ರಾಂ ಚಿನ್ನ ಹಾಗೂ 1.41 ಕೆ.ಜಿ ಬೆಳ್ಳಿ ವಶಪಡಿಸಿಕೊಂಡಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳ್ಳತನಕ್ಕೆ ಗೂಗಲ್‌ ಮ್ಯಾಪ್‌ ಬಳಕೆ

‘ಕುವೆಂಪು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣದಲ್ಲಿ ಆಂಧ್ರಪ್ರದೇಶದ ವೆಂಕಟ್‌ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ಗೂಗಲ್‌ ಮ್ಯಾಪ್‌ನಲ್ಲಿ ಕಡಿಮೆ ಜನಸಂಖ್ಯೆ ಇರುವ, ಶ್ರೀಮಂತರು ನೆಲೆಸುವ ಪ್ರದೇಶಗಳನ್ನು ಗುರುತಿಸುತ್ತಾನೆ. ಮನೆಯ ಕಿಟಕಿ ಅಥವಾ ಬಾಗಿಲನ್ನು ಮುರಿದು ಮನೆಗೆ ಪ್ರವೇಶಿಸುತ್ತಿದ್ದ. ಸಿಸಿಟಿವಿ ಕ್ಯಾಮೆರಾದಲ್ಲಿ ಆತನ ಮುಖದ ಚಿತ್ರ ಸಿಕ್ಕಿತ್ತು. ಎನ್‌ಎಎಫ್‌ಆರ್‌ಎಸ್‌ (ನ್ಯಾಷನಲ್‌ ಅಟೊಮೇಟೆಡ್‌ ಫೇಸ್‌ ರೆಕಗ್ನೇಷನ್‌ ಸಿಸ್ಟಂ) ಮೂಲಕ ನೋಡಿದಾಗ ಆರೋಪಿಯ ಗುರುತು ಪತ್ತೆಯಾಗಿದ್ದು, ನಗರದ 3 ಪ್ರಕರಣಗಳಲ್ಲಿ ಭಾಗಿಯಾಗಿದ್ದ’ ಎಂದು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.