ADVERTISEMENT

ಮೈಸೂರು: ದಸರಾ ಆನೆಗಳಿಗೆ ಮಜ್ಜನದ ಖುಷಿ, ಅರಮನೆ ಆವರಣದಲ್ಲಿ ಸರಳ ತಾಲೀಮು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 5:51 IST
Last Updated 13 ಆಗಸ್ಟ್ 2022, 5:51 IST
ಅರಮನೆ ಆವರಣದಲ್ಲಿ ಶುಕ್ರವಾರ ಮಾವುತರು ಹಾಗೂ ಕಾವಾಡಿಗಳಿಂದ ದಸರಾ ಆನೆ ‘ಭೀಮ’ನಿಗೆ ಮಜ್ಜನ ಪ್ರಜಾವಾಣಿ ಚಿತ್ರ
ಅರಮನೆ ಆವರಣದಲ್ಲಿ ಶುಕ್ರವಾರ ಮಾವುತರು ಹಾಗೂ ಕಾವಾಡಿಗಳಿಂದ ದಸರಾ ಆನೆ ‘ಭೀಮ’ನಿಗೆ ಮಜ್ಜನ ಪ್ರಜಾವಾಣಿ ಚಿತ್ರ   

ಮೈಸೂರು: ಅಂಬಾವಿಲಾಸ ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ ದಸರಾ ಆನೆಗಳಿಗೆ ಸರಳ ತಾಲೀಮು ಆರಂಭಗೊಂಡಿದೆ.

ಶುಕ್ರವಾರ ಬೆಳಿಗ್ಗೆ ಮಾವುತರು, ಕಾವಾಡಿಗಳು ಅರಮನೆಯ ಒಳಗಿನ ಪಥಗಳಲ್ಲಿ ಆನೆಗಳನ್ನು ನಡೆಸಿದರು. ಕ್ಯಾಪ್ಟನ್‌ ‘ಅಭಿಮನ್ಯು’ವನ್ನು ಉಳಿದ 8 ಆನೆಗಳು ಅನುಸರಿಸಿದವು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಗಾಗಿ ಬಂದಿದ್ದ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಆನೆಗಳನ್ನು ವೀಕ್ಷಿಸಿದರು. ಪ್ರವಾಸಿಗಳು ಆನೆ ಬಿಡಾರಗಳತ್ತ ಧಾವಿಸಿದಾಗ ಅರಣ್ಯ ಇಲಾಖೆಯ ಸಿಬ್ಬಂದಿ, ಆನೆಗಳ ಹತ್ತಿರ ಸುಳಿಯದಂತೆ ನಿಗಾ ವಹಿಸಿದರು.

ADVERTISEMENT

ಆಹಾರದ ದಾಸ್ತಾನು ಶೆಡ್‌ನಲ್ಲಿ ಭತ್ತದ ಹುಲ್ಲು ಸಂಗ್ರಹಿಸಿದ್ದರೆ, ಆಲದ ಸೊಪ್ಪನ್ನು ಅಭಿಮನ್ಯು, ಚೈತ್ರಾ ಆನೆಗಳಿದ್ದ ಶೆಡ್‌ ಸಮೀಪದ ಅಂಗಳದಲ್ಲಿ ಇರಿಸಲಾಗಿತ್ತು. ಮಧ್ಯಾಹ್ನ ಬಿಸಿಲೇರುತ್ತಿದ್ದಂತೆ ದಣಿದಿದ್ದ ಆನೆಗಳಿಗೆ ಸ್ನಾನದ ತೊಟ್ಟಿಗೆ ಒಂದೊಂದಾಗಿ ಕರೆದೊಯ್ದು ಮಜ್ಜನ ಮಾಡಿಸಲಾಯಿತು. ಮಾವುತ, ಕಾವಾಡಿ ಅವರೊಂದಿಗೆ ಮಕ್ಕಳು ಆನೆ ಮೈಯನ್ನು ಉಜ್ಜಿದರು.

ಆನೆಗಳ ಬಿಡಾರದಲ್ಲಿ ಆಲದ ಸೊಪ್ಪು, ಹಸಿರು ಹುಲ್ಲಿನ ಕಂತೆಗಳನ್ನು ಗಜಗಳಿಗೆ ಮಾವುತರು, ಕಾವಾಡಿಗರ ಮಕ್ಕಳು ನೀಡುತ್ತಿದ್ದರು. ‘ಅಭಿಮನ್ಯು’, ‘ಚೈತ್ರಾ’ ಜೊತೆಯಲ್ಲಿದ್ದರೆ, ಭುವನೇಶ್ವರಿ ದೇವಾಲಯದ ಪಕ್ಕದಲ್ಲಿರುವ ಶೆಡ್‌ನಲ್ಲಿ ಧನಂಜಯ–ಕಾವೇರಿ, ಮುಖ್ಯ ಶೆಡ್‌ನಲ್ಲಿ ಗೋಪಾಲಸ್ವಾಮಿ, ಭೀಮ, ಮಹೇಂದ್ರ, ಅರ್ಜುನ, ಲಕ್ಷ್ಮಿ ಇದ್ದರು.

ಪ್ರವಾಸಿಗರು ತುಸು ದೂರದಲ್ಲಿ ನಿಂತು ಸೆಲ್ಫಿ ತೆಗೆದುಕೊಂಡರು. ಹತ್ತಿರ ಹೋಗಲು ಪ್ರಯತ್ನಿಸಿದವರನ್ನು, ಫೋಟೊ ತೆಗೆಯುತ್ತಿದ್ದವರನ್ನು ಸಿಬ್ಬಂದಿ ಬೆದರಿಸಿ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.