
ಮೈಸೂರು: ಇಲ್ಲಿನ ಗೀತಾ ಶಿಶು ಶಿಕ್ಷಣ ಸಂಘ (ಜಿಎಸ್‌ಎಸ್‌ಎಸ್)ದ ಆಡಳಿತ ಮಂಡಳಿ ಮತ್ತು ಅದರ ಅಧೀನದಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳು ಇನ್ಮುಂದೆ ಶೃಂಗೇರಿ ಶಾರದಾ ಪೀಠದ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ.
ಈ ಮಹತ್ವದ ಘೋಷಣೆಯನ್ನು, ಕೆಆರ್‌ಎಸ್ ರಸ್ತೆಯ ಜಿಎಸ್‌ಎಸ್‌ಎಸ್ ಮಹಿಳಾ ತಾಂತ್ರಿಕ ಕಾಲೇಜಿನಲ್ಲಿ ನಡೆದ ಗುರುವಂದನಾ ಸಮಾರಂಭದಲ್ಲಿ ವಿಧುಶೇಖರ ಭಾರತೀ ಸ್ವಾಮೀಜಿ ಘೋಷಿಸಿದರು.
‘ಈ ಐತಿಹಾಸಿಕ ನಿರ್ಣಯಕ್ಕಾಗಿ ಎರಡೂ ಸಂಸ್ಥೆಗಳ ನಡುವೆ 18 ತಿಂಗಳಿಂದ ಚರ್ಚೆ ನಡೆದಿತ್ತು. ಜಿಎಸ್ಎಸ್‌ಎಸ್ ಸ್ಥಾಪಿಸಿ ಬೆಳೆಸಿದ ದಿವಂಗತ ಪ್ರೊ.ಬಿ.ಎಸ್. ಪಂಡಿತ್ ಅವರ ದೂರದೃಷ್ಟಿ ಹಾಗೂ ಅವಿರತ ಶ್ರಮದಿಂದ ಸ್ಥಾಪಿತವಾದ ಸಂಸ್ಥೆ ಇದು. ಇದರ ಬೆಳವಣಿಗೆ, ಅಭಿವೃದ್ಧಿ ಹಾಗೂ ಆಡಳಿತದ ಹೊಣೆಗಾರಿಕೆಯನ್ನು ಪೀಠ ವಹಿಸಿಕೊಳ್ಳಬೇಕು ಎಂಬ ಮನವಿಯನ್ನು ಅಂದಿನ ಕಾರ್ಯದರ್ಶಿ ದಿವಂಗತ ವನಜಾ ಬಿ. ಪಂಡಿತ್ ನೇತೃತ್ವದಲ್ಲಿ ಆಡಳಿತ ಮಂಡಳಿ ಮಾಡಿತ್ತು’ ಎಂದು ತಿಳಿಸಲಾಯಿತು.
ಪೀಠದ ಅಡಳಿತಾಧಿಕಾರಿ ಮತ್ತು ಸಿಇಒ ಮುರಳಿ ಪಿ.ಎ. ಅವರಿಗೆ ಸಂವಾದ ಹಾಗೂ ಪರಿಶೀಲನೆ ನಡೆಸುವ ಜವಾಬ್ದಾರಿ ನೀಡಲಾಯಿತು. ಸಂಸ್ಥೆಯನ್ನು ಪೀಠದ ಅಧೀನಕ್ಕೆ ತರುವ ಪ್ರಸ್ತಾವ ಅಂಗೀಕರಿಸಲಾಯಿತು.
ಯಾವ್ಯಾವುದು?:
‘ಸಿದ್ಧಾರ್ಥನಗರದಲ್ಲಿರುವ ಗೀತಾಭಾರತಿ ಸ್ಕೂಲ್ ಆಫ್ ಎಕ್ಸಲೆನ್ಸ್, ಬಂಟ್ವಾಳ್ ಮಾಧವಶೆಣೈ ಪ್ರೌಢಶಾಲೆ, ಬದ್ರಿಪ್ರಸಾದ್ ಪಿಯು ಕಾಲೇಜು, ಮೇಟಗಳ್ಳಿಯ ಜಿಎಸ್‌ಎಸ್‌ಎಸ್ ಸಿಂಹ ಸುಬ್ಬ ಮಹಾಲಕ್ಷ್ಮಿ ಪ್ರ.ದ. ಕಾಲೇಜು, ಜಿಎಸ್‌ಎಸ್‌ಎಸ್ ಮಹಿಳಾ ತಾಂತ್ರಿಕ ಕಾಲೇಜು ಹಾಗೂ ಜಿಎಸ್‌ಎಸ್‌ಎಸ್ ಮಹಿಳಾ ವಾಸ್ತುಶಿಲ್ಪ ಕಾಲೇಜು ಶಾರದಾಪೀಠದ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ’ ಎಂದು ತಿಳಿಸಲಾಯಿತು.
‘1981ರಲ್ಲಿ ಒಂದೇ ತರಗತಿಯಿಂದ ಆರಂಭವಾದ ಸಂಸ್ಥೆಯು ಈಗ 3 ಕ್ಯಾಂಪಸ್‌ಗಳು, 5ಸಾವಿರ ವಿದ್ಯಾರ್ಥಿಗಳು ಹಾಗೂ 450 ಸಿಬ್ಬಂದಿ ಒಳಗೊಂಡಿದೆ. ಸದಾ ವಿಭಿನ್ನ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಒದಗಿಸುವ ಗುರಿಯೊಂದಿಗೆ, ಆಧುನಿಕ ಶಿಕ್ಷಣವನ್ನು ಭಾರತೀಯ ಮೌಲ್ಯಗಳೊಂದಿಗೆ ಸಂಯೋಜಿಸಿ ಸಮಗ್ರ ಶಿಕ್ಷಣ ಕೊಡುತ್ತಿದೆ. ಇದನ್ನು ಮುಂದುವರಿಸಲಾಗುವುದು’ ಎಂದು ಮಾಹಿತಿ ನೀಡಲಾಯಿತು.
ಜಿಎಸ್‌ಎಸ್‌ಎಸ್ ಅಧ್ಯಕ್ಷ ಎಂ.ಜಗನ್ನಾಥಶೆಣೈ, ಉಪಾಧ್ಯಕ್ಷ ಶ್ರೀನಿವಾಸ ಎ. ಗುಪ್ತ, ಕಾರ್ಯದರ್ಶಿ ಅನುಪಮಾ ಬಿ. ಪಂಡಿತ್, ಆಡಳಿತ ಮಂಡಳಿ ಸದಸ್ಯ ಬಿ.ಕೆ. ನಟರಾಜ್, ಸಿಇಒ ಆರ್.ಕೆ. ಭರತ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.