ADVERTISEMENT

ಮೈಸೂರು ಮಲೇರಿಯಾ ಮುಕ್ತ ಜಿಲ್ಲೆ: ಕೇಂದ್ರ ಆರೋಗ್ಯ ಇಲಾಖೆಯಿಂದ ಘೋಷಣೆ ಬಾಕಿ

ಐದು ವರ್ಷಗಳಿಂದ ನಿಯಂತ್ರಣ; ಕೇಂದ್ರ ಆರೋಗ್ಯ ಇಲಾಖೆಯಿಂದ ಘೋಷಣೆ ಬಾಕಿ

ರಮೇಶ ಕೆ
Published 8 ಜೂನ್ 2022, 4:07 IST
Last Updated 8 ಜೂನ್ 2022, 4:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಐದು ವರ್ಷಗಳಿಂದ ಜಿಲ್ಲೆಯಲ್ಲಿ ಒಂದೂ ಮಲೇರಿಯಾ ಪ್ರಕರಣ ದಾಖಲಾಗದೆ ‘ಮಲೇರಿಯಾ ಮುಕ್ತ ಜಿಲ್ಲೆ’ಯಾಗಿ ಮೈಸೂರು ಹೊರ ಹೊಮ್ಮಿದೆ.

ಎರಡು ವರ್ಷದಿಂದ ರಾಜ್ಯದ ಮಂಡ್ಯ, ಕೊಡಗು, ಚಾಮರಾಜನಗರ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿದ್ದರೆ, ಮೈಸೂರು ಜಿಲ್ಲೆಯಲ್ಲಿ ಮಾತ್ರ 2017ರಿಂದಲೇ ಮಲೇರಿಯಾ ಪೂರ್ಣ ನಿಯಂತ್ರಣ ಕಂಡಿದೆ.

ರಾಜ್ಯ ಹಾಗೂ ಕೇಂದ್ರ ಆರೋಗ್ಯ ಇಲಾಖೆಯಿಂದ ಮೌಲ್ಯಮಾಪನ ನಡೆದಿದ್ದು, ಮೈಸೂರು ಎಲಿಮಿನೇಷನ್‌ ಹಂತಕ್ಕೆ ಬಂದ ಮೊದಲ ಜಿಲ್ಲೆಯಾಗಿದ್ದು, ಘೋಷಣೆಯಷ್ಟೇ ಬಾಕಿಯಿದೆ. ಮೂರು ವರ್ಷ ‘ಸೊನ್ನೆ’ ಕೆಟಗೆರಿ ಇದ್ದು, ಲ್ಯಾಬ್‌ ವರದಿ ಗುಣಮಟ್ಟ, ದಾಖಲೆ ಪಕ್ಕಾ ಇರುವ ಹಾಗೂ ಜಿಲ್ಲೆಯಲ್ಲಿ ಮಲೇರಿಯಾ ಜ್ವರ ಕಾಣಿಸಿಕೊಂಡ ರೋಗಿ ಇರಬಾರದು ಎಂಬ ನಿಯಮವಿದೆ.

ADVERTISEMENT

ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ರೋಗ ನಿಯಂತ್ರಣಕ್ಕೆ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳಿಂದ ಪ್ರಕರಣಗಳ ನಿಯಂತ್ರಣ ಸಾಧ್ಯವಾಗಿದೆ.

‘1998–2004ರವರೆಗೆ ಮಲೇರಿಯಾ ಪ್ರಕರಣಗಳು ಹೆಚ್ಚಿದ್ದವು. 2017ರಿಂದ ಪ್ರಕರಣಗಳಿಲ್ಲ. ಕೆಟಗೆರಿ ಸೊನ್ನೆಯಲ್ಲಿದ್ದೇವೆ’ಎಂದುಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್‌.ಚಿದಂಬರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶೂನ್ಯ ಪ್ರಕರಣಗಳಿದ್ದರೂ ಜ್ವರ ಸರ್ವೆ, ಮಲೇರಿಯಾ ಪರೀಕ್ಷೆ ನಿಂತಿಲ್ಲ. ಗ್ರಾಮೀಣ ಭಾಗದಲ್ಲಿ ಸೊಳ್ಳೆ ಲಾರ್ವಾಗಳನ್ನು ತಿನ್ನುವಂಥ ಮೀನು ಗಳನ್ನು ಕೆರೆಗಳಿಗೆ ಬಿಡುತ್ತಿದ್ದೇವೆ. ಸೊಳ್ಳೆಗೆ ಸ್ಪ್ರೆ ಹಾಗೂ ಫಾಗಿಂಗ್‌ ಮಾಡು ತ್ತೇವೆ. ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಂಡಿದ್ದರಿಂದ ಶೂನ್ಯ ಪ್ರಕರಣ ದಾಖಲಾದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದೇವೆ’ ಎಂದು ಹೇಳಿದರು.

‘ಮಂಗಳೂರು, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸಗಡ ಕಡೆಯಿಂದ ಬರುವವರು ಸಮಸ್ಯಾತ್ಮಕವಾಗಿದ್ದಾರೆ. ಅಲ್ಲೆಲ್ಲ ಪ್ರಕರಣಗಳಿರುವುದರಿಂದ ಬಂದವರ ಮೇಲೆ ನಿಗಾ ವಹಿಸುತ್ತೇವೆ. ಜ್ವರ ಇರಲೀ ಇಲ್ಲದಿರಲಿ ತಪಾಸಣೆ ನಡೆಸಿ, ಮಲೇರಿಯಾ ಪಾಸಿಟಿವ್‌ ಇದ್ದರೆ ಚಿಕಿತ್ಸೆ ಮುಂದುವರಿಸುತ್ತೇವೆ’ ಎಂದರು.

‘ಖಾಸಗಿ ಆಸ್ಪತ್ರೆಗಳ ಜ್ವರ ಪ್ರಕರಣಗಳಲ್ಲೂ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. 2 ಸಾವಿರ ಆಶಾ ಕಾರ್ಯಕರ್ತೆಯರು, 700 ಆರೋಗ್ಯ ಸಹಾಯಕರು, 350 ವೈದ್ಯರು ಹಾಗೂ 126 ಲ್ಯಾಬ್‌ ಟೆಕ್ನೀಷಿಯನ್‌ಗಳೊಂದಿಗೆ ಶೂನ್ಯ ಮಲೇರಿಯಾ ಜಿಲ್ಲೆಯ ಗರಿ ಮುಂದುವರಿಸಿಕೊಂಡು ಹೋಗಲು ಇಲಾಖೆ ಶ್ರಮಿಸುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.