ADVERTISEMENT

ಕಳುವಾಗಿದ್ದ 57 ವಾಹನ, ₹2.96 ಕೋಟಿ ಮೌಲ್ಯದ ಆಭರಣ ಮೈಸೂರು ನಗರ ಪೊಲೀಸರಿಂದ ಪತ್ತೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:49 IST
Last Updated 26 ಫೆಬ್ರುವರಿ 2026, 5:49 IST
ಮೈಸೂರಿನ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಕಳವಾಗಿದ್ದ ವಸ್ತುಗಳನ್ನು ವಾರಸುದಾರರಿಗೆ ವಿತರಿಸಿದರು ಪ್ರಜಾವಾಣಿ ಚಿತ್ರ
ಮೈಸೂರಿನ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಕಳವಾಗಿದ್ದ ವಸ್ತುಗಳನ್ನು ವಾರಸುದಾರರಿಗೆ ವಿತರಿಸಿದರು ಪ್ರಜಾವಾಣಿ ಚಿತ್ರ   

ಮೈಸೂರು: ‘ನಗರ ಪೊಲೀಸ್‌ ಘಟಕವು ಕಳೆದ ಆರು ತಿಂಗಳಲ್ಲಿ 105 ಸ್ವತ್ತು ಕಳವು ಪ್ರಕರಣಗಳ ಪತ್ತೆ ಮಾಡಿ, ₹ 2.96 ಕೋಟಿ ಮೌಲ್ಯದ 2.54 ಕೆ.ಜಿ ಚಿನ್ನಾಭರಣ, 5.31 ಕೆ.ಜಿ ಬೆಳ್ಳಿ ಪದಾರ್ಥ, 57 ವಾಹನ ಮತ್ತು ₹ 10.03 ಲಕ್ಷ ನಗದು ವಶಪಡಿಸಿಕೊಂಡಿದೆ’ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.

ಕಮಿಷನರ್‌ ಕಚೇರಿಯಲ್ಲಿ ಬುಧವಾರ ಪತ್ತೆಯಾದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ‘2026ನೇ ಸಾಲಿನಲ್ಲಿ 22 ಎನ್‌ಡಿಪಿಎಸ್‌ ಕಾಯ್ದೆ ಪ್ರಕರಣ ದಾಖಲಿಸಿದ್ದು, 30.25 ಕೆ.ಜಿ ಗಾಂಜಾ, 311 ಗ್ರಾಂ ಸಿಂಥೆಟಿಕ್ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ’ ಎಂದರು.

‘1 ದರೋಡೆ, 1 ದರೋಡೆಗೆ ಸಂಚು, 4 ಸುಲಿಗೆ, 2 ಸರಗಳ್ಳತನ, 26 ಕನ್ನ ಕಳವು, 9 ಮನೆ ಕಳ್ಳತನ, 3 ಮನೆ ಕೆಲಸದವರಿಂದ ಕಳ್ಳತನ, 57 ವಾಹನ ಕಳ್ಳತನ, 4 ಸಾಮಾನ್ಯ ಕಳ್ಳತನ, 1 ಕರ್ನಾಟಕ ಅರಣ್ಯ ಕಾಯ್ದೆ ಸೇರಿದಂತೆ ಒಟ್ಟು 79 ಸ್ವತ್ತು ಕಳವು ಪ್ರಕರಣಗಳು ಹಾಗೂ 1 ವಂಚನೆ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಈ ಪ್ರಕರಣಗಳಿಂದ ಒಟ್ಟು ₹2.96 ಕೋಟಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಪದಾರ್ಥ, 49 ದ್ವಿಚಕ್ರ ವಾಹನಗಳು, 3 ಕಾರು, 1 ಥಾರ್ ಜೀಪ್, 2 ಲಾರಿ, 1 ಗೂಡ್ಸ್ ವಾಹನ, 1 ಆಟೋ, ₹ 10.03 ಲಕ್ಷ ನಗದು, 33 ಕೆ.ಜಿ. ಗಂಧದ ಮರದ ತುಂಡು ಪತ್ತೆಯಾಗಿವೆ. ಪತ್ತೆಯಾದ ಈ ಪ್ರಕರಣಗಳಲ್ಲಿ ಒಟ್ಟು 82 ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಪ್ರಮುಖ ಪ್ರಕರಣಗಳು: ಸರಸ್ವತಿಪುರಂ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 8 ಕನ್ನ ಕಳವು, 1 ವಾಹನ ಕಳವು ಸೇರಿದಂತೆ ಒಟ್ಟು 9 ಪ್ರಕರಣಗಳನ್ನು ಪತ್ತೆ ಮಾಡಿ, ₹80.50 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಪಧಾರ್ಥ, 1 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಕುವೆಂಪುನಗರ ಠಾಣೆ ಪೊಲೀಸರು 10 ಆರೋಪಿಗಳನ್ನು ಬಂಧಿಸಿ, 9 ಕನ್ನ ಕಳವು, 2 ಮನೆ ಕಳ್ಳತನ, 2 ಕೆಲಸದವರಿಂದ ಕಳ್ಳತನ ಸೇರಿದಂತೆ ಒಟ್ಟು 13 ಪ್ರಕರಣಗಳನ್ನು ಪತ್ತೆ ಮಾಡಿ, ₹63 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಪದಾರ್ಥ ಹಾಗೂ 9.40 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಲಷ್ಕರ್ ಠಾಣೆ ಪೊಲೀಸರು 6 ಆರೋಪಿಗಳನ್ನು ಬಂಧಿಸಿ, ₹45 ಲಕ್ಷ ಮೌಲ್ಯದ 3 ಮನೆ ಕಳ್ಳತನ, 4 ವಾಹನ ಕಳವು, 1 ಚಿನ್ನ ವಂಚನೆ ಪ್ರಕರಣಗಳನ್ನು ಪತ್ತೆ ಮಾಡಿ 324 ಗ್ರಾಂ ಚಿನ್ನಾಭರಣ, 3 ದ್ವಿಚಕ್ರ ವಾಹನ ಮತ್ತು 1 ಆಟೋ ಪತ್ತೆ ಮಾಡಿದ್ದಾರೆ.

ಸಿಸಿಬಿ ಘಟಕದ ಪೊಲೀಸರು 7 ಆರೋಪಿಗಳನ್ನು ಬಂಧಿಸಿ, 11 ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿದ್ದು, 35 ಲಕ್ಷ ಮೌಲ್ಯದ 2 ಲಾರಿ, 1 ಥಾರ್ ಜೀಪ್, 8 ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿದ್ದಾರೆ.

ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಒಬ್ಬ ಆರೋಪಿ ಬಂಧಿಸಿ, 1 ಕನ್ನಕಳವು ಪ್ರಕರಣ ಪತ್ತೆ ಮಾಡಿ ₹25.08 ಲಕ್ಷ ಮೌಲ್ಯದ ಒಟ್ಟು 252 ಗ್ರಾಂ ಚಿನ್ನಾಭರಣಗಳನ್ನು ಅಮಾನತು ಪಡಿಸಿಕೊಂಡಿದ್ದಾರೆ.

ಮೇಟಗಳ್ಳಿ ಠಾಣೆ ಪೊಲೀಸರು 17 ಆರೋಪಿಗಳನ್ನು ಬಂಧಿಸಿ, 1 ಸುಲಿಗೆ, 7 ಕನ್ನ ಕಳವು, 1 ಮನೆ ಕಳವು, 1 ಕೆಲಸದವರಿಂದ ಕಳವು, 2 ವಾಹನ ಕಳವು, 1 ಸಾಮಾನ್ಯ ಕಳವು ಸೇರಿಂದತೆ ಒಟ್ಟು 13 ಪ್ರಕರಣಗಳನ್ನು ಪತ್ತೆ ಮಾಡಿ, 17 ಲಕ್ಷ ಮೌಲ್ಯದ 73 ಗ್ರಾಂ ಚಿನ್ನಾಭರಣ, 447 ಗ್ರಾಂ ಬೆಳ್ಳಿ ಪದಾರ್ಥ, 2 ದ್ವಿಚಕ್ರ ವಾಹನ, 1 ಲ್ಯಾಪ್‌ಟಾಪ್, 63 ಸಾವಿರ ಹಣ, ಬ್ಯಾಟರಿಗಳು, ಮೋಟರ್‌ಗಳು, ತಾಮ್ರದ ತಂತಿಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯನಗರ ಠಾಣೆ ಪೊಲೀಸರು 6 ಆರೋಪಿಗಳನ್ನು ಬಂಧಿಸಿ, 1 ಸರಗಳ್ಳತನ, 3 ವಾಹನ ಕಳ್ಳತನ, 1 ಕೆಲಸದವರಿಂದ ಕಳ್ಳತನ ಪ್ರಕರಣ ಪತ್ತೆ ಮಾಡಿ ₹15 ಲಕ್ಷ ಮೌಲ್ಯದ 63 ಗ್ರಾಂ ಚಿನ್ನಾಭರಣ, 2 ಕೆ.ಜಿ. 450 ಗ್ರಾಂ ಬೆಳ್ಳಿ ಪದಾರ್ಥ, 2 ದ್ವಿಚಕ್ರವಾಹನ ಹಾಗೂ 1 ಕಾರನ್ನು ಪತ್ತೆ ಮಾಡಿದ್ದಾರೆ.

ಮಂಡಿ ಠಾಣೆ ಪೊಲೀಸರು 11 ಆರೋಪಿಗಳನ್ನು ಬಂಧಿಸಿ, 1 ಸುಲಿಗೆ, 13 ವಾಹನ ಕಳ್ಳತನ ಪ್ರಕರಣಗಳು ಸೇರಿದಂತೆ ಒಟ್ಟು 14 ಪ್ರಕರಣಗಳನ್ನು ಪತ್ತೆ ಮಾಡಿ 13.70 ಲಕ್ಷ ಮೌಲ್ಯದ 13 ದ್ವಿಚಕ್ರ ವಾಹನಗಳು ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 1 ಮಾರುತಿ ಬಲೆನೋ ಕಾರು, 61 ಗ್ರಾಂ ಬೆಳ್ಳಿ ಪದಾರ್ಥ, 1 ಮೊಬೈಲ್ ಪತ್ತೆ ಮಾಡಿದ್ದಾರೆ.

ಎನ್.ಆರ್. ಠಾಣೆ ಪೊಲೀಸರು 9 ಆರೋಪಿಗಳನ್ನು ಬಂಧಿಸಿ, 2 ಸುಲಿಗೆ, 1 ಕನ್ನ ಕಳವು, 4 ವಾಹನ ಕಳವು, 1 ಕೆ.ಎಫ್. ಕಾಯ್ದೆಯ ಒಟ್ಟು 8 ಪ್ರಕರಣಗಳನ್ನು ಪತ್ತೆ ಮಾಡಿ, ₹12.80 ಲಕ್ಷ ಮೌಲ್ಯದ 69 ಗ್ರಾಂ ಚಿನ್ನಾಭರಣ, 4 ದ್ವಿಚಕ್ರವಾಹನ, 33 ಕೆ.ಜಿ. ಶ್ರೀಗಂಧದ ಮರ ವಶಪಡಿಸಿಕೊಂಡಿದ್ದಾರೆ.

2026ನೇ ಸಾಲಿನಲ್ಲಿ ಒಟ್ಟು 22 ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕರಣಗಳನ್ನು ದಾಖಲು ಮಾಡಿ, 30 ಕೆ.ಜಿ. 255 ಗ್ರಾಂ ಗಾಂಜಾ ಹಾಗೂ 311 ಗ್ರಾಂ 579 ಮಿ. ಗ್ರಾಂ ಸಿಂಥೆಟಿಕ್ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ 102 ಸೇವನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ನಗರದಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಾಣೆ, ಸಂಗ್ರಹ ನಿಯಂತ್ರಣ ಸಂಬಂಧ 2025– 26ನೇ ಸಾಲಿನಲ್ಲಿ 16 ಎನ್.ಡಿ.ಪಿ.ಎಸ್. ಆರೋಪಿಗಳ ವಿರುದ್ಧ ಗಡಿಪಾರು ಆದೇಶ ಮಾಡಲಾಗಿದೆ.

ಡಿಸಿಪಿ ಕೆ.ಎಸ್. ಸುಂದರ್‌ರಾಜ್, ಎಸಿಪಿಗಳಾದ ರಮೇಶ್ ಕುಮಾರ್, ರವಿಶಂಕರ್, ಮ್ಯಾಥ್ಯೂ ಥಾಮಸ್, ಮಹಮ್ಮದ್ ಶರೀಫ್ ರಾವುತರ್ ಇದ್ದರು.

24 ಕೆ.ಜಿ. ಗಾಂಜಾ ವಶ

ಉದಯಗಿರಿ ಠಾಣೆ ಪೊಲೀಸರು ರಾಜೀವ್ ನಗರ 2ನೇ ಹಂತದ ವರುಣ್‌ ನನ್ನು ಮಂಗಳವಾರ ಬಂಧಿಸಿ ಆತನಿಂದ 24 ಕೆ.ಜಿ. 485 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ‘ಚನ್ನರಾಯಪಟ್ಟಣದಲ್ಲಿ ಆರೋಪಿಯನ್ನು ಬಂಧಿಸಿದ್ದು ಮತ್ತೊಬ್ಬ ಆರೋಪಿ ವೆಂಕಟೇಶ್‌ ತಲೆಮರೆಸಿಕೊಂಡಿದ್ದಾನೆ. ಬೆಂಗಳೂರು ಹಾಗೂ ಚನ್ನರಾಯಪಟ್ಟಣದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು’ ಎಂದು ಸೀಮಾ ಲಾಟ್ಕರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.