ADVERTISEMENT

ಮೈಸೂರು: ಕನ್ನಡದಲ್ಲಿ ವಿಜ್ಞಾನ ಕಲಿಸುವ ಸರ್ಕಾರಿ ಶಾಲೆ ಶಿಕ್ಷಕರು!

ಕನ್ನಡದ ದಾರಿಯಲ್ಲಿ– 19

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 19:30 IST
Last Updated 22 ನವೆಂಬರ್ 2021, 19:30 IST
‘ಮೈಸೂರು ಸೈನ್ಸ್‌ ಫೌಂಡೇಶನ್‌’ ಹಮ್ಮಿಕೊಂಡಿದ್ದ ‘ಮೊನೊ ಸ್ಕೋಪ್‌’ ಮೂಲಕ ಕೆರೆ ಪರಿಸರವನ್ನು ಅರ್ಥೈಸುವ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು
‘ಮೈಸೂರು ಸೈನ್ಸ್‌ ಫೌಂಡೇಶನ್‌’ ಹಮ್ಮಿಕೊಂಡಿದ್ದ ‘ಮೊನೊ ಸ್ಕೋಪ್‌’ ಮೂಲಕ ಕೆರೆ ಪರಿಸರವನ್ನು ಅರ್ಥೈಸುವ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು   

ಮೈಸೂರು: ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವಿಜ್ಞಾನ ಹಾಗೂ ಗಣಿತ ಸುಲಭಗೊಳಿಸಲು ಅವಿರತವಾಗಿ ದುಡಿಯುತ್ತಿರುವ ‘ಮೈಸೂರು ಸೈನ್ಸ್‌ ಫೌಂಡೇಶನ್‌’ನ ವಿಜ್ಞಾನ ಪ್ರೀತಿಯನ್ನು ‘ಇಸ್ರೋ’ ವಿಜ್ಞಾನಿಗಳೇ ಮೆಚ್ಚಿಕೊಂಡಿದ್ದಾರೆ!

ವಿಜ್ಞಾನ ಜನಮುಖಿಯಾದರೆ ವೈಚಾರಿಕ ಚಿಂತನೆಗಳು ಗಟ್ಟಿಯಾಗಿ ನೆಲೆಯೂರುತ್ತವೆ. ವಿಜ್ಞಾನ ಹೃದ್ಯವಾಗಲು ‘ಕನ್ನಡ’ವೇ ಮಾಧ್ಯಮ ಆಗಿರಬೇಕು ಎಂಬ ದೃಢ ನಿಲುವು ಫೌಂಡೇಶನ್ನಿನ ಗೆಳೆಯರದ್ದು. ರಾಜ್ಯದ ಎಲ್ಲ ಜಿಲ್ಲೆಗಳ ಶಿಕ್ಷಕರಿಗೆ ಸರಳ ವಿಜ್ಞಾನ ಕಲಿಸುವ ಸಂಪನ್ಮೂಲ ವ್ಯಕ್ತಿಗಳೂ ಆಗಿರುವ ಅವರು, ಬೋಧನೆಯ ಸರಳ ದಾರಿ ತೋರಿದ ‘ಮಾರ್ಗಕಾರರು’!

ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿರುವ ಸಿ.ಕೃಷ್ಣೇಗೌಡ, ಟಿ.ಶಿವಲಿಂಗಸ್ವಾಮಿ, ಎಂಜಿಎನ್‌ ಪ್ರಸಾದ್‌, ಎಚ್‌.ವಿ.ಮುರುಳೀಧರ್‌, ಎಚ್‌.ಎಸ್‌.ಮಂಜುಳಾ, ಜಿ.ಕೆ.ಕಾಂತರಾಜು, ಸಿ.ಎನ್.ಗೀತಾ, ಬಿ.ಎಸ್‌.ಕೃಷ್ಣಮೂರ್ತಿ ಬಿಡುವಿನ ವೇಳೆಯನ್ನು ವಿಜ್ಞಾನಕ್ಕೇ ಮೀಸಲಿಟ್ಟಿದ್ದಾರೆ.

ADVERTISEMENT

2012ರಲ್ಲಿ ಸಂಸ್ಥೆಯನ್ನು ಸ್ಥಾಪಸಿದ ಅವರು, ಕ್ಲಿಷ್ಟಕರವಾದ ವಿಜ್ಞಾನದ ವ್ಯಾಖ್ಯೆಗಳನ್ನು ಸರಳ ಪ್ರಯೋಗದಲ್ಲಿ ಮನದಟ್ಟು ಮಾಡುತ್ತಾರೆ. ಅವರ ಕೌಶಲಕ್ಕೆ ಖಾಸಗಿ ಶಾಲೆಯ ಶಿಕ್ಷಕರೂ ತಲೆದೂಗುತ್ತಾರೆ.

ಜನಸಾಮಾನ್ಯರಿಗೆ ವಿಜ್ಞಾನ ಕಲಿಸಲು 2012ರಿಂದ ಪ್ರತಿ ತಿಂಗಳ ಎರಡನೇ ಶನಿವಾರ ‘ತಿಂಗಳ ವಿಜ್ಞಾನ ಉಪನ್ಯಾಸ ಮಾಲಿಕೆ’ ಆರಂಭಿಸಿದ್ದು, 85 ಉಪನ್ಯಾಸ ನಡೆದಿದೆ. 2019ರವರೆಗೂ ಕಲಾಮಂದಿರದ ಮನೆಯಂಗಳದಲ್ಲಿ ಹಾಗೂ ಕೋವಿಡ್‌ ನಂತರ ಆನ್‌ಲೈನ್‌ನಲ್ಲಿ ತಪ್ಪದೇ ನಡೆದಿದೆ. ಆಹಾರ ಕಲಬೆರಕೆ, ಖಗೋಳ ವಿಜ್ಞಾನ, ಪ್ರಾಕೃತಿಕ ವಿದ್ಯಾಮಾನ ಉಪನ್ಯಾಸದ ವಿಷಯಗಳು.

ಪ್ರತಿ ವರ್ಷ ಅಕ್ಟೋಬರ್‌, ನವೆಂಬರ್‌ನಲ್ಲಿ ನೊಬೆಲ್‌ ಪ್ರಶಸ್ತಿ ಪಡೆದ ವಿಜ್ಞಾನಿಗಳು ಹಾಗೂ ಸಂಶೋಧನೆ ಕುರಿತು ಸಂವಾದ ಏರ್ಪಡಿಸುತ್ತಿದೆ. ಖಗೋಳ ವೀಕ್ಷಣೆ, ನಕ್ಷತ್ರ ಪುಂಜಗಳ ವಿವರಣೆಯನ್ನು ಆಕಾಶವಾಣಿಯು ನೇರ ಪ್ರಸಾರ ಮಾಡಿದೆ. ವೈಜ್ಞಾನಿಕ ಮನೋಭಾವದ ಸಮಾಜ ನಿರ್ಮಿಸುವ ಸಂಸ್ಥೆಯ ಘೋಷ ವಾಕ್ಯ– ‘ವಿಜ್ಞಾನ ಹಂಚೋಣ, ಮೌಢ್ಯ ರಹಿತ ಸಮಾಜ ಕಟ್ಟೋಣ’.

ಕೆಸ್‌ಒಯು 105.6 ಜ್ಞಾನವಾಣಿ ಆಕಾಶವಾಣಿಯಲ್ಲಿ ‘ಪವಾಡ ರಹಸ್ಯ ಬಯಲು’ ಕುರಿತು 12 ಕಂತುಗಳಲ್ಲಿ ಉಪನ್ಯಾಸ ನೀಡಿರುವುದಷ್ಟೇ ಅಲ್ಲ. ಹಳ್ಳಿಗಳಲ್ಲೂ ಪವಾಡ ಬಯಲು ಮಾಡಿದ್ದಾರೆ.

‘ವಿಜ್ಞಾನವನ್ನು ಮಾತೃಭಾಷೆಯಲ್ಲಿ ಕಲಿತಾಗ ಕಷ್ಟವೆನಿಸದು. ಅಭಿವ್ಯಕ್ತಿಗೆ ಇಂಗ್ಲಿಷ್‌ ಒಂದು ಭಾಷೆಯಷ್ಟೇ. ಕನ್ನಡ ಮಾಧ್ಯಮದಲ್ಲಿ ಕಲಿತವರೇ ಇಸ್ರೋ, ನಾಸಾದಲ್ಲಿ ವಿಜ್ಞಾನಿಗಳಾಗಿದ್ದಾರೆ. ಕುತೂಹಲಿಗಳಾದರೆ ಎಲ್ಲ ಜ್ಞಾನಶಾಖೆಗಳೂ ಸುಲಭ’ ಎಂದು ಸಂಸ್ಥೆಯ ಕಾರ್ಯದರ್ಶಿ ಜಿ.ಬಿ.ಸಂತೋಷ್‌ ಕುಮಾರ್ ಹೇಳಿದರು. ಸಂಸ್ಥೆಯ ಕಾರ್ಯಗಳಿಗೆ ಇಸ್ರೋ ವಿಜ್ಞಾನಿಗಳಾದ ಸಿ.ಆರ್‌.ಸತ್ಯ, ಸುರೇಶ್‌ ಬೆಂಬಲ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.