ADVERTISEMENT

ಮೈಸೂರು ವಿವಿ ಘಟಿಕೋತ್ಸವ: ವಿದ್ಯಾರ್ಥಿನಿಯರೇ ಟಾಪರ್ಸ್‌; ಭೂಮಿಕಾಗೆ 18 ‘ಕನಕ’ ಪದಕ

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 11:30 IST
Last Updated 18 ಜನವರಿ 2025, 11:30 IST
<div class="paragraphs"><p>ಮೈಸೂರು ವಿಶ್ವವಿದ್ಯಾಲಯದ 105ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅತಿ ಹೆಚ್ಚು ಚಿನ್ನದ ಪದಕ ಪಡೆದ ಎಂ.ಆರ್. ಭೂಮಿಕಾ, ಯು.ಎ. ಕಾವ್ಯಶ್ರೀ, ಸೀಮಾ ಸಾಂಬಾ ಹೆಗಡೆ, ಸಿ ಕಾವ್ಯಾ ಹಾಗೂ ವಿವಿನಾ ಸ್ವೀಡಲ್ ಥೋರಸ್ ಸಂಭ್ರಮ.</p></div>

ಮೈಸೂರು ವಿಶ್ವವಿದ್ಯಾಲಯದ 105ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅತಿ ಹೆಚ್ಚು ಚಿನ್ನದ ಪದಕ ಪಡೆದ ಎಂ.ಆರ್. ಭೂಮಿಕಾ, ಯು.ಎ. ಕಾವ್ಯಶ್ರೀ, ಸೀಮಾ ಸಾಂಬಾ ಹೆಗಡೆ, ಸಿ ಕಾವ್ಯಾ ಹಾಗೂ ವಿವಿನಾ ಸ್ವೀಡಲ್ ಥೋರಸ್ ಸಂಭ್ರಮ.

   

ಪ್ರಜಾವಾಣಿ ಚಿತ್ರ

ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದಲ್ಲಿ ವಿವಿಧ ಪದವಿ, ಚಿನ್ನದ ಪದಕ, ನಗದು ಬಹುಮಾನ ಪಡೆಯುವಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಎಂ.ಆರ್. ಭೂಮಿಕಾ ಟಾಪರ್ಸ್‌ ಎನಿಸಿ ‘ಚಿನ್ನದ ಹುಡುಗಿ’ಯಾಗಿ ಕಂಗೊಳಿಸಿದರು.

ADVERTISEMENT

ಪದವಿ ಗಳಿಸಿದ 31,689 ಅಭ್ಯರ್ಥಿಗಳ ಪೈಕಿ 20,222 ಮಹಿಳೆಯರು. ಪಿಎಚ್‌ಡಿ ಪದವಿ ಹೊಂದಿದ 304 ಮಂದಿಯಲ್ಲಿ 139 ಮಹಿಳೆಯರೇ. ಒಟ್ಟು 413 ಚಿನ್ನದ ಪದಕ ಹಾಗೂ 208 ಬಹುಮಾನಗಳನ್ನು 216 ಮಂದಿ ಹಂಚಿಕೊಂಡರು. ಅದರಲ್ಲಿ ಹೆಚ್ಚಿನ ‘ಪಾಲು’ ತಮ್ಮದಾಗಿಸಿಕೊಂಡವರು 139 ವಿದ್ಯಾರ್ಥಿನಿಯರೆ.

ವಿಶ್ವವಿದ್ಯಾಲಯದ ಕ್ರಾಫರ್ಡ್‌ ಭವನದಲ್ಲಿ ಶನಿವಾರ ನಡೆದ 105ನೇ ಘಟಿಕೋತ್ಸವದಲ್ಲಿ ‘ಮಹಿಳಾ ಪ್ರಾಬಲ್ಯ’ ಕಂಡುಬಂದಿತು. ನೆರೆದಿದ್ದವರಿಂದ ಅವರಿಗೆ ಚಪ್ಪಾಳೆಗಳ ಪ್ರಶಂಸೆಯ ಸುರಿಮಳೆಯೂ ಆಯಿತು. ‘ಚಿನ್ನ ಎಂದಿಗೂ ಪುರುಷರ ಪಾಲಲ್ಲ ಎಂಬುದನ್ನು ಮಹಿಳೆಯರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಶ್ಲಾಘಿಸಿದರು.

ಐಎಎಸ್‌ ಅಧಿಕಾರಿಯಾಗುವ ಕನಸು:

ಎಂ.ಎಸ್ಸಿ. ರಸಾಯನ ವಿಜ್ಞಾನದಲ್ಲಿ ಮಾನಸಗಂಗೋತ್ರಿಯ ಎಂ.ಆರ್. ಭೂಮಿಕಾ 18 ಚಿನ್ನದ ಪದಕ, 4 ನಗದು ತಮ್ಮದಾಗಿಸಿಕೊಂಡು ಗಮನಸೆಳೆದರು. ‘ತಾಯಿ ಜ್ಞಾನ ಕಲಿಸಿದರೆ, ತಂದೆ ಜೀವನದ ಮೌಲ್ಯಗಳನ್ನು ಕಲಿಸಿದರು. ಮಗಳು ಕ್ರಾಫರ್ಡ್‌ ಭವನದಲ್ಲಿ ಸನ್ಮಾನಿತೆ ಆಗುವುದನ್ನು ನೋಡಬೇಕು ಎಂದು ಅಪ್ಪ ಕನಸು ಕಂಡಿದ್ದರು. ಅದನ್ನು ನನಸು ಮಾಡಿದ್ದೇನೆ. ಆದರೆ, ಆ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಈಗ ಅವರಿಲ್ಲ’ ಎಂದು ಭೂಮಿಕಾ ಹೇಳಿದರು.

ಹೆಬ್ಬಾಳು 2ನೇ ಹಂತದ ನಿವಾಸಿಯಾದ ಎಚ್.ಎ.ನೇತ್ರಾವತಿ–ಲೇ. ಬಿ.ಎನ್.ರವಿಕುರ್ಮಾ ಪುತ್ರಿಯಾದ ಅವರು, ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ. ಮದ್ರಾಸ್‌ನ ಐಐಟಿಯಲ್ಲಿ ಪಿಎಚ್.ಡಿ ಮಾಡಬೇಕು, ಐಎಎಸ್‌ ಅಧಿಕಾರಿ ಆಗಬೇಕೆಂಬ ಆಸೆ ಇದೆ ಎಂದು ಹಂಚಿಕೊಂಡರು.

ಚಿನ್ನದ ‘ಕಾವ್ಯಶ್ರೀ’:

ಮಂಗಳೂರಿನ ಯು.ಎ.ಕಾವ್ಯಶ್ರೀ ಸ್ನಾತಕೋತ್ತರ ಪದವಿಯ ಅರ್ಬನ್ ಅಂಡ್ ರೀಜನಲ್ ಪ್ಲಾನಿಂಗ್ ವಿಷಯದಲ್ಲಿ 16 ಚಿನ್ನದ ಪದಕಗಳನ್ನು ಪಡೆದರು. ಪದವಿಯಲ್ಲೂ ಚಿನ್ನದ ಪದಕ ಬೇಟೆಯಾಡಿದ್ದರು.

‘‍‍ಪಿಎಚ್‌ಡಿ ಮಾಡುತ್ತಿದ್ದೇನೆ. ನಗರಾಭಿವೃದ್ಧಿ ವಿಷಯದಲ್ಲಿ ಸಾಧಿಸುವ ಹಂಬಲವಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಕ್ಕೆ ಹಾಗೂ ಚಿನ್ನದ ಪದಕಗಳನ್ನು ಗಳಿಸಿದ್ದಕ್ಕೆ ಹೆಮ್ಮೆ ಇದೆ. ಎಲ್ಲ ತರಗತಿಗಳಲ್ಲೂ ಹಾಜರಾಗುತ್ತಿದ್ದೆ. ಉಪನ್ಯಾಸಕರ ಪಾಠವನ್ನು ಶ್ರದ್ಧೆಯಿಂದ ಕೇಳುತ್ತಿದ್ದೆ. ಇದರಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಯಿತು’ ಎಂದು ಕಾವ್ಯಶ್ರೀ ತಿಳಿಸಿದರು.

ವಿವಿನಾ ಸಾಧನೆ:

ಎಂ.ಎಸ್ಸಿ. (ಸಸ್ಯವಿಜ್ಞಾನ)ಯಲ್ಲಿ 10 ಚಿನ್ನದ ಪದಕ ಹಾಗೂ 2 ನಗದು ಬಹುಮಾನ ತಮ್ಮದಾಗಿಸಿಕೊಂಡ ವಿವಿನಾ ಸ್ವೀಡಲ್‌ ಥೋರಸ್, ಇಲ್ಲಿನ ಸಿದ್ಧಾರ್ಥನಗರದ ಟೆರೇಷಿಯನ್ ಕಾಲೇಜಿನ ವಿದ್ಯಾರ್ಥಿನಿ. ಕೊಡಗು ಜಿಲ್ಲೆಯ ಗೋಣಿಕೊಪ್ಪದವರು. ‘ಪಿಎಚ್‌.ಡಿ ಪದವಿ ಪಡೆಯಬೇಕು. ಶಿಕ್ಷಕಿಯಾಗಬೇಕು. ಅದರ ಮೂಲಕ ಬಡ ಮಕ್ಕಳ ಸೇವೆ ಮಾಡಬೇಕು’ ಕನಸಿದ ಎಂದು ಹೇಳಿದರು.

ಕೇರಳದ ಕಾಸರಗೋಡಿನ ಸೀಮಾ ಹೆಗಡೆ ಸಂಸ್ಕೃತದಲ್ಲಿ 13 ಚಿನ್ನದ ಪದಕ ಮತ್ತು 1 ನಗದು ಬಹುಮಾನ ಗಳಿಸಿದ್ದಾರೆ. ಭಗವದ್ಗೀತೆ ಹಾಡುಗಾರ್ತಿಯೂ ಹೌದು. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕು ಕಳಚೆ ಗ್ರಾಮದ ಕೃಷಿಕ ಶ್ಯಾಮ ಹೆಗಡೆ–ಶಿಲ್ಪಾ ಹೆಗಡೆ ದಂಪತಿಯ ಪುತ್ರಿ. ಪ್ರೌಢ ಶಿಕ್ಷಣದಿಂದಲೂ ಸಂಸ್ಕೃತ ಅಭ್ಯಾಸ ಮಾಡಿದ್ದಾರೆ. ಕಾಸರಗೋಡಿನ ರಂಜಿತ್ ಅವರನ್ನು ವಿವಾಹವಾಗಿದ್ದಾರೆ. ‘ಶಿಕ್ಷಕಿಯಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಗುರಿ ಇದೆ’ ಎಂದು ತಿಳಿಸಿದರು.

ಸಾಧನೆಗೆ ಅಡ್ಡಿಯಾಗದ ದೃಷ್ಟಿದೋಷ:

ಬಸಮ್ಮ ಮಠದ

ಅಂಕ ಗಳಿಕೆಗೆ ದೃಷ್ಟಿ ದೋಷ ಅಡ್ಡಿಯಾಗದು ಎಂಬುದನ್ನು ಬೆಳಗಾವಿಯ ಆಂಜನೇಯನಗರದ ಯುವತಿ ಬಸಮ್ಮ ಗುರಯ್ಯ ಮಠದ ಸಾಬೀತುಪಡಿಸಿದ್ದಾರೆ. ಸ್ನಾತಕೋತ್ತರ ಪದವಿ (ರಾಜ್ಯಶಾಸ್ತ್ರ)ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಚಿನ್ನದ ಪದಕ ಪಡೆದಿದ್ದಾರೆ.

‘ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದೇಶಾಂಗ ವ್ಯವಹಾರಗಳ ವಿಷಯದಲ್ಲಿ ಪಿಎಚ್‌.ಡಿ ಪದವಿ ಪಡೆಯಬೇಕೆಂಬ ಬಯಕೆ ಇದೆ. ನೆಟ್, ಕೆ–ಸೆಟ್‌ ಪಾಸಾಗಿದ್ದೇನೆ. ಈಗ ಚಿನ್ನದ ಪದಕ ಪಡೆದಿರುವುದಕ್ಕೆ ಸಂತೋಷವಾಗಿದೆ. ನ್ಯೂನತೆ ಇದ್ದವರು ಕೂಡ ಏನಾದರೂ ಸಾಧನೆ ಮಾಡಬಹುದು ಎಂಬ ಅಮ್ಮನ ಮಾತುಗಳು ನನ್ನ ಸಾಧನೆಗೆ ಸ್ಫೂರ್ತಿಯಾದವು’ ಎನ್ನುತ್ತಾರೆ ಅವರು. ‘ತರಗತಿಗಳಲ್ಲಿ ಬೋಧಕರು ಮಾಡುವ ಪಾಠವನ್ನು ಗಮನವಿಟ್ಟು ಕೇಳಿಕೊಳ್ಳಬೇಕು. ಅದು ಪರೀಕ್ಷೆಯಲ್ಲಿ ಬಹಳ ಸಹಾಯಕ್ಕೆ ಬರುತ್ತದೆ’ ಎನ್ನುವ ಸಲಹೆ ಅವರದು.

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಕುಣಿಗಲ್ ಗ್ರಾಮದ ಕೂಲಿ ಕೆಲಸಗಾರ ಚಿಕ್ಕನಾಯಕ–ದೇವಾಲಮ್ಮ ಪುತ್ರಿ ಸಿ.ಕಾವ್ಯಾ (ಎಂ.ಎ.– ಕನ್ನಡ) 11 ಪದಕ ಹಾಗೂ 5 ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

‘ನೆಟ್, ಕೆ-ಸೆಟ್ ಪಾಸ್ ಮಾಡಿದ್ದೇನೆ. ಶಿಕ್ಷಕಿ ಆಗಬೇಕೆಂಬ ಗುರಿ ಇದೆ. ತಂದೆ–ತಾಯಿ ಕಷ್ಟಪಟ್ಟು ನನ್ನನ್ನು ಓದಿಸಿದ್ದಾರೆ. ಅವರಿಗೆ ಒಳ್ಳೆಯ ಹೆಸರು ತರಬೇಕು. ಪ್ರಾಥಮಿಕ ಶಾಲಾ ಶಿಕ್ಷಕರು ನನಗೆ ಸ್ಫೂರ್ತಿಯಾದರು’ ಎಂದು ಸಂತಸ ಹಂಚಿಕೊಂಡರು.

ಸಂಗೀತ ವಿ.ವಿ; 3 ಘಟಿಕೋತ್ಸವ ಸಂಭ್ರಮ

ಸಂಗೀತ ವಿಶ್ವವಿದ್ಯಾಲಯದಲ್ಲಿ ಮೂರು ಶೈಕ್ಷಣಿಕ ವರ್ಷಗಳ (2021–2024) ಘಟಿಕೋತ್ಸವಗಳು ಒಟ್ಟಿಗೇ ನಡೆದಿದ್ದು, 27 ವಿದ್ಯಾರ್ಥಿಗಳು 69 ಚಿನ್ನದ ಪದಕಗಳೊಂದಿಗೆ ಸಂಭ್ರಮಿಸಿದರು. 8 ಮಂದಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. 7,8, ಹಾಗೂ 9ನೇ ಘಟಿಕೋತ್ಸವದಲ್ಲಿ ಒಟ್ಟು 540 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.

ಇದೇ ವೇಳೆ 14 ಮಂದಿಗೆ ಡಿ.ಲಿಟ್‌ ಪದವಿ ಪ್ರದಾನ ಮಾಡಲಾಯಿತು. ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ಘಟಿಕೋತ್ಸವ ಭಾಷಣ ಮಾಡಿದರು. ಸಂಗೀತ ವಿ.ವಿ. ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಜೊತೆಗಿದ್ದರು.

ವಿದೇಶಿ ಶಿಕ್ಷಣ ವ್ಯವಸ್ಥೆ ಅಳವಡಿಕೆ ಎಷ್ಟು ಸರಿ?

‘ನಮ್ಮ ದೇಶದ ಶಿಕ್ಷಣದಲ್ಲಿ ವಿದೇಶಗಳ ವ್ಯವಸ್ಥೆಯನ್ನು ಅಳವಡಿಸುವುದು ಎಷ್ಟು ಸರಿ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿ, ‘ವಿದೇಶದ್ದನ್ನು ಇಲ್ಲಿಗೆ ತಂದು ಹೇರುವುದು ಫ್ಯಾಷನ್ ಆಗಿ ಹೋಗಿದೆ’ ಎಂದು ಟೀಕಿಸಿದರು.

‘ನಮ್ಮಲ್ಲಿ ಮೂಲಸೌಕರ್ಯಗಳು ಹಾಗೂ ಬೋಧಕರ ಕೊರತೆಯಿಂದ ಅತಿಥಿ ಉಪನ್ಯಾಸಕರನ್ನೇ ನೆಚ್ಚಿಕೊಳ್ಳಬೇಕಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸದೇ ವಿದೇಶಗಳ ಶಿಕ್ಷಣ ವ್ಯವಸ್ಥೆ ಅಳವಡಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿಯಾಗುತ್ತದೆ ಎಂಬುದನ್ನು ಅವಲೋಕಿಸಬೇಕು’ ಎಂದರು.

‘ವಿಶ್ವವಿದ್ಯಾಲಯಗಳ ಬೆಳವಣಿಗೆಗೆ ರಾಜ್ಯ ಸರ್ಕಾರದ ಪಾಲೆಷ್ಟು, ಜವಾಬ್ದಾರಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹಲವು ವಿಷಯಗಳಲ್ಲಿ ರಾಜ್ಯ ಸರ್ಕಾರದ ಅಧಿಕಾರ ಮೊಟಕುಗೊಳಿಸಲಾಗುತ್ತಿದೆ. ದಿಢೀರನೆ ಬದಲಾವಣೆಗಳನ್ನು ತರುವ ಪ್ರಯತ್ನಗಳು ನಡೆದಿವೆ. ಅವುಗಳಿಗೆ ರಾಜ್ಯ ಸರ್ಕಾರವೇ ಉತ್ತರ ಕೊಡಬೇಕಾದ ಪರಿಸ್ಥಿತಿ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.