
ಮೈಸೂರು: ಇಲ್ಲಿನ ಮಾನಸಗಂಗೋತ್ರಿಯ ಮೈಸೂರು ವಿಶ್ವವಿದ್ಯಾಲಯ ತಾಂತ್ರಿಕ ಶಾಲೆ (ಮೈಸೂರು ಯೂನಿವರ್ಸಿಟಿ ಸ್ಕೂಲ್ ಆಫ್ ಎಂಜಿನಿಯರಿಂಗ್) ವಿದ್ಯಾರ್ಥಿಗಳು ಫಲಿತಾಂಶ ವಿಳಂಬದಿಂದ ತೊಂದರೆಗೆ ಒಳಗಾಗಿದ್ದಾರೆ.
ಅಂತಿಮ ವರ್ಷದ ಪದವಿ ಪರೀಕ್ಷೆಗಳು ಮುಗಿದು 4 ತಿಂಗಳುಗಳು ಕಳೆದರೂ ವಿದ್ಯಾರ್ಥಿಗಳಿಗೆ ಸಂಪೂರ್ಣ ಫಲಿತಾಂಶ ದೊರಕಿಲ್ಲ. 2, 4 ಹಾಗೂ 6ನೇ ಸೆಮಿಸ್ಟರ್‌ಗಳ ಫಲಿತಾಂಶ ವಿಳಂಬವಾಗಿದ್ದು, ಬ್ಯಾಕ್‌ಲಾಗ್ ಉಳಿಸಿಕೊಂಡಿದ್ದ ಕೆಲವು ವಿದ್ಯಾರ್ಥಿಗಳನ್ನು ಸಮಸ್ಯೆಗೆ ದೂಡಿದೆ.
ಅಪೂರ್ಣ ಫಲಿತಾಂಶದಿಂದಾಗಿ ಉದ್ಯೋಗ ಹುಡುಕಲು, ಸಂದರ್ಶನಗಳನ್ನು ಎದುರಿಸಲು ಹಾಗೂ ಉನ್ನತ ಶಿಕ್ಷಣ ಸಾಧ್ಯತೆಗಳತ್ತ ತೆರಳುವುದಕ್ಕೂ ತೊಡಕಾಗಿದೆ. ವಿವಿಧ ಸೆಮಿಸ್ಟರ್‌ಗಳಲ್ಲಿ ಓದುತ್ತಿರುವವರ ಉತ್ಸಾಹವೂ ಕುಂದುತ್ತಿದೆ.
2020–21ನೇ ಸಾಲಿನಲ್ಲಿ ಎಂಜಿನಿಯರಿಂಗ್ ಕಾಲೇಜನ್ನು ಆರಂಭಿಸಿದ್ದ ವಿಶ್ವವಿದ್ಯಾಲಯವು ಕಂಪ್ಯೂಟರ್ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮಷಿನ್ ಲರ್ನಿಂಗ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಡಿಸೈನಿಂಗ್, ಬಯೋಮೆಡಿಕಲ್ ಆ್ಯಂಡ್ ರೊಬೊಟಿಕ್ಸ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್ ವಿಭಾಗಗಳನ್ನು ತೆರೆದಿದೆ.
ಡಾಟಾ ಎಂಟ್ರಿ ಸಮಸ್ಯೆ:
‘ಫಲಿತಾಂಶ ಪ್ರಕಟಿಸುವಂತೆ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಮಾಡುತ್ತಲೇ ಇದ್ದೇವೆ. ಡಾಟಾ ಎಂಟ್ರಿ ಸಮಸ್ಯೆಯಿಂದ ಫಲಿತಾಂಶ ಪ್ರಕಟಿಸಲಾಗುತ್ತಿಲ್ಲ, ಇನ್ನೆರಡು ದಿನಗಳಲ್ಲಿ ಫಲಿತಾಂಶ ಬರಲಿದೆ. ಸೋಮವಾರ ಬರಲಿದೆ. ಹೀಗೆ ಒಂದೊಂದು ಉತ್ತರ ನೀಡಲಾಗುತ್ತಿದೆ’ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ದೂರುತ್ತಿದ್ದಾರೆ.
‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಇತರ ಡೀಮ್ಡ್ ವಿಶ್ವವಿದ್ಯಾಲಯಗಳ ಎಂಜಿನಿಯರಿಂಗ್ ಕಾಲೇಜುಗಳ ಫಲಿತಾಂಶ ಪ್ರಕಟವಾಗಿ 2 ತಿಂಗಳುಗಳೇ ಕಳೆದಿದೆ. ನಮ್ಮಲ್ಲಿ ಮಾತ್ರ ವಿಳಂಬವಾಗಿದೆ. ಇದರಿಂದ ತುಂಬಾ ಸಮಸ್ಯೆಯಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿದ್ಯಾರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಕ್ಯಾಂಪಸ್ ಸೆಲೆಕ್ಷನ್ ನಡೆಸಿಲ್ಲ:
ಖಾಸಗಿ ಹಾಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ನಡೆಸುವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪ್ರತಿಷ್ಠಿತ ಎಂಎನ್‌ಸಿಗಳು ಸೇರಿದಂತೆ ಹಲವು ಕಂಪನಿಗಳನ್ನು ಆಹ್ವಾನಿಸಿ, ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದು ಅಗತ್ಯವಾಗಿದೆ. ಆದರೆ, ಈ ಕಾಲೇಜಿನಲ್ಲಿ ಈ ಪ್ರಕ್ರಿಯೆಯೇ ನಡೆಸಿಲ್ಲ. ತರಬೇತಿ ನೀಡುವಂತಹ ಎರಡು ಸಂಸ್ಥೆಗಳನ್ನು ಕರೆಸಲಾಗಿತ್ತು, ಅವು ಉದ್ಯೋಗ ನೀಡುವ ಕಂಪನಿಗಳಾಗಿರಲಿಲ್ಲ ಎಂದು ವಿದ್ಯಾರ್ಥಿಯೊಬ್ಬರು ದೂರಿದರು.
ತಾಂತ್ರಿಕ ಕಾರಣಗಳಿಂದ ಫಲಿತಾಂಶ ವಿಳಂಬವಾಗಿದ್ದು ಎರಡು ದಿನಗಳಲ್ಲಿ ಬಿಡುಗಡೆಯಾಗಲಿದೆ. ರಿಸೆಶನ್ (ಹಿಂಜರಿತ) ಕಾರಣದಿಂದ ಎಲ್ಲ ಕಡೆಯೂ ಕ್ಯಾಂಪಸ್ ಪ್ರಕ್ರಿಯೆ ಉತ್ತಮವಾಗಿ ನಡೆದಿಲ್ಲ. ಪದವಿ ಪ್ರಮಾಣಪತ್ರ ಶುಲ್ಕದ ಬಗ್ಗೆ ಮಾಹಿತಿಯಿಲ್ಲಎಂ.ಎಸ್.ಗೋವಿಂದೇಗೌಡ ಪ್ರಾಂಶುಪಾಲ ಮೈಸೂರು ವಿಶ್ವವಿದ್ಯಾಲಯ ತಾಂತ್ರಿಕ ಶಾಲೆ
‘ಎಂ.ಟೆಕ್ ಅವಕಾಶವೂ ಇಲ್ಲ’
‘ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹೆಚ್ಚಿನ ಶುಲ್ಕ ಪಾವತಿಸುವುದು ಕಷ್ಟ ಎಂದು ಮೈಸೂರು ವಿಶ್ವವಿದ್ಯಾಲಯದ ಹೆಸರು ನೋಡಿ ಪ್ರವೇಶ ಪಡೆದಿದ್ದೆ. ಈಗ ಪದವಿ ದೊರೆತರೆ ಸಾಕು ಎಂಬಂತಾಗಿದೆ’ ಎಂದು ವಿದ್ಯಾರ್ಥಿಯೊಬ್ಬರು ದೂರಿದರು. ‘8ನೇ ಸೆಮಿಸ್ಟರ್ ಫಲಿತಾಂಶದ ಪಟ್ಟಿಯನ್ನೂ ನೀಡಿಲ್ಲ. ತಾತ್ಕಾಲಿಕ ಪದವಿ ಪ್ರಮಾಣಪತ್ರವೂ ದೊರೆತಿಲ್ಲ. ಬ್ಯಾಕ್‌ಲಾಗ್ ವಿಷಯಗಳ ಫಲಿತಾಂಶ ಬರದಿರುವುದರಿಂದ ಎಂ.ಟೆಕ್ ಸೇರುವ ಅವಕಾಶವೂ ಕೈತಪ್ಪಿದೆ’ ಎಂದರು.
ಪದವಿ ಪ್ರಮಾಣಪತ್ರಕ್ಕೆ ₹12,405 ಶುಲ್ಕ
ಸಾಧಾರಣವಾಗಿ ಪದವಿ ಪ್ರಮಾಣಪತ್ರಕ್ಕೆ ವಿಟಿಯು ಕಾಲೇಜುಗಳಲ್ಲಿ ₹1200 ಖಾಸಗಿ ಕಾಲೇಜುಗಳಲ್ಲಿ ಸುಮಾರು ₹1300 ಆಸುಪಾಸಿನಲ್ಲಿ ಶುಲ್ಕ ವಿಧಿಸಲಾಗುತ್ತದೆ. ಆದರೆ ಇಲ್ಲಿ ಬರೋಬ್ಬರಿ ₹12405 ಶುಲ್ಕ ವಿಧಿಸಲಾಗಿದೆ. ‘ನಾವು ಇದನ್ನು ಸರ್ಕಾರಿ ಕಾಲೇಜು ಎಂದು ಸೇರಿದ್ದೆವು. ಆದರೆ ಇವರು ಅತ್ತ ಖಾಸಗಿಯೂ ಅಲ್ಲ ಇತ್ತ ಸರ್ಕಾರಿಯೂ ಅಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಎಲ್ಲೂ ಇಲ್ಲದ ಪ್ರಮಾಣದಲ್ಲಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇಷ್ಟು ಹಣ ಕಟ್ಟಿ ಪದವಿ ಪತ್ರ ಪಡೆಯುವುದಾದರೂ ಹೇಗೆ’ ಎಂದು ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.