
ಕುವೆಂಪು ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಂಪಾದಕತ್ವದಲ್ಲಿ ಪ್ರಕಟವಾಗಿದ್ದ ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’
ಮೈಸೂರು: ಕುಮಾರವ್ಯಾಸ ಮಹಾಕವಿಯ ಜನಪ್ರಿಯ ‘ಕರ್ಣಾಟ ಭಾರತ ಕಥಾಮಂಜರಿ’ ಕಾವ್ಯ ಕೃತಿಯನ್ನು 38 ವರ್ಷಗಳ ನಂತರ ಮೈಸೂರುವಿಶ್ವವಿದ್ಯಾಲಯದ ಪ್ರಸಾರಾಂಗವು ದಾನಿಗಳ ನೆರವಿನಿಂದ ಪ್ರಕಟಿಸಿದೆ. ಸುದೀರ್ಘ ಅವಧಿಯ ಬಳಿಕ ಈ ಕೃತಿಯು 4ನೇ ಮುದ್ರಣ ಕಾಣುತ್ತಿದೆ.
1958ರಲ್ಲಿ ಮೈಸೂರು ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ಮೂಲಕ ಮೊದಲ ಮುದ್ರಣ ಕಂಡಾಗ ಈ ಕೃತಿಯ ಬೆಲೆ ಕೇವಲ ₹2. ನಂತರ 1974, 1988ರಲ್ಲಿ ಪ್ರಸಾರಾಂಗವೇ ಮುದ್ರಿಸಿತ್ತು.
ಈಗ 740 ಪುಟಗಳ, 8,500 ಷಟ್ಪದಿಗಳಿರುವ ಈ ಕೃತಿಯ ಬಿಡುಗಡೆ ಕಾರ್ಯಕ್ರಮ ಮಾರ್ಚ್ 5ರಂದು ಪ್ರಸಾರಾಂಗದಲ್ಲೇ ನಡೆಯಲಿದೆ. ₹150 ಮುಖಬೆಲೆಯ ಕೃತಿಯು ಅಂದು ₹120ಕ್ಕೆ ಸಿಗಲಿದೆ. ಕಾವ್ಯವನ್ನು ಹಲವರು ಸಂಪಾದಿಸಿ ಪ್ರಕಟಿಸಿದ್ದರೂ ಈ ಕೃತಿಗೆ ಅವೆಲ್ಲಕ್ಕಿಂತ ಹೆಚ್ಚಿನ ಬೇಡಿಕೆ ಇದೆ.
ಪ್ರಸಾರಾಂಗದ ಮುದ್ರಣಾಲಯದಲ್ಲೇ ಉಳಿದಿದ್ದ ಕೃತಿಯ ಕರಡನ್ನು ಪ್ರೊ.ಕೃಷ್ಣಮೂರ್ತಿ ಹನೂರು ತಿದ್ದಿದ್ದಾರೆ. ನ್ಯೂಯಾರ್ಕ್‌ನ ಸ್ಟೋನಿಬ್ರೂಕ್ ವಿ.ವಿಯ ಭಾರತೀಯ ಅಧ್ಯಯನ ಕೇಂದ್ರದ ಮುಖ್ಯಸ್ಥ ಎಸ್.ಎನ್. ಶ್ರೀಧರ ಅವರು ಆರ್ಥಿಕ ನೆರವು ನೀಡಿದ್ದಾರೆ. ನಗರದ ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ ಮುದ್ರಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರೊ.ಹನೂರು, ‘1850ರಿಂದ 1990ರವರೆಗೆ ಕುಮಾರವ್ಯಾಸನ ಕಾವ್ಯದ ಭಾಗಗಳು ದೇಶಿ, ವಿದೇಶಿ ವಿದ್ವಾಂಸರಿಂದ ಇಡಿಯಾಗಿ, ಬಿಡಿಬಿಡಿಯಾಗಿ 50ಕ್ಕೂ ಹೆಚ್ಚು ಆವೃತ್ತಿಗಳಲ್ಲಿ ಪ್ರಕಟವಾಗಿವೆ. ಈ ಆವೃತ್ತಿಗಳ ನಡುವೆ ಕುವೆಂಪು–ಮಾಸ್ತಿ ಸಂಪಾದಿಸಿದ ಭಾರತ ಕಥಾಮಂಜರಿ ಪಠ್ಯವು ಪ್ರಕಟವಾದ ಬಳಿಕ ಜನಪ್ರಿಯ ಆವೃತ್ತಿಯಾಗಿ ಹೆಚ್ಚಿನ ಓದುಗರನ್ನು ತಲುಪುವಂತಾಯಿತು’ ಎಂದು ಹೇಳಿದರು.
‘ಪ್ರಸಾರಾಂಗದ ಮಹತ್ವದ ಕೃತಿಗಳಲ್ಲಿ ಕರ್ಣಾಟ ಭಾರತ ಕಥಾಮಂಜರಿಯೂ ಒಂದು. ಈಗ ವಿಶ್ವವಿದ್ಯಾಲಯದ ಉತ್ತೇಜನ ಹಾಗೂ ದಾನಿಗಳಿಂದ ನೆರವು ಸಿಕ್ಕಿದ್ದು ಮರುಮುದ್ರಣ ಮಾಡಲಾಗಿದೆ. ಪ್ರೊ.ಸಿಪಿಕೆ ಲೋಕಾರ್ಪಣೆ ಮಾಡಲಿದ್ದಾರೆ’ ಎಂದು ಪ್ರಸಾರಾಂಗದ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು ಅವರು ತಿಳಿಸಿದರು.
‘ಕರ್ಣಾಟ ಭಾರತ ಕಥಾಮಂಜರಿ’ ಕೃತಿಯು ಮರುಮುದ್ರಣ ಹೆಮ್ಮೆಯ ಸಂಗತಿ. ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದುಪ್ರೊ.ನಂಜಯ್ಯ ಹೊಂಗನೂರು, ನಿರ್ದೇಶಕರು, ಪ್ರಸಾರಾಂಗ, ಮೈಸೂರು ವಿ.ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.