ADVERTISEMENT

ಗಂಗೋತ್ರಿಗೆ ಸಾರ್ವಜನಿಕರ ವಾಹನ ನಿಷೇಧ

ವಿವಿ ಅಧಿಕಾರಿಗಳು– ಪೊಲೀಸರ ಸಮನ್ವಯ ಸಭೆಯಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 5:13 IST
Last Updated 21 ಡಿಸೆಂಬರ್ 2025, 5:13 IST
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್‌ ಅಧ್ಯಕ್ಷತೆಯಲ್ಲಿ ಶನಿವಾರ ಸಮನ್ವಯ ಸಭೆ ನಡೆಯಿತು
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್‌ ಅಧ್ಯಕ್ಷತೆಯಲ್ಲಿ ಶನಿವಾರ ಸಮನ್ವಯ ಸಭೆ ನಡೆಯಿತು   

ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಕ್ಯಾಂಪಸ್‌ಗೆ ಸಾರ್ವಜನಿಕರ ವಾಹನಗಳನ್ನು ನಿಷೇಧಿಸುವ ಬಗ್ಗೆ ಚರ್ಚೆ ನಡೆದಿದೆ. ಸಿಂಡಿಕೇಟ್‌ನಲ್ಲಿ ಮಂಡಿಸಿ ಅನುಷ್ಠಾನಕ್ಕೆ ತರಲು ಉದ್ದೇಶಿಸಲಾಗಿದೆ.

ಮಾನಸಗಂಗೋತ್ರಿ, ಯುವರಾಜ ಹಾಗೂ ಮಹಾರಾಜ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಾತಾವರಣ ಸೃಷ್ಟಿಸುವ ಮತ್ತು ಕಾನೂನು–ಸುವ್ಯವಸ್ಥೆ ಕಾಪಾಡುವ ಸಂಬಂಧ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್‌ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ವಿಶ್ವವಿದ್ಯಾಲಯದ ಹಾಗೂ ಪೊಲೀಸ್ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಸಮಾಲೋಚಿಸಲಾಯಿತು. 

ಅನಧಿಕೃತ ವಿದ್ಯಾರ್ಥಿ ಸಂಘಟನೆಗಳನ್ನು ನಿಷೇಧಿಸುವುದು ಅಥವಾ ನಿಯಂತ್ರಣದಲ್ಲಿ ಇಡುವುದು, ಹೊರಗಿನ ವ್ಯಕ್ತಿಗಳು ಮತ್ತು ಸಂಘಟನೆಗಳಿಗೆ ವಿಶ್ವವಿದ್ಯಾಲಯದ ಕ್ಯಾಂಪಸ್‌ ಪ್ರವೇಶ ನಿಷೇಧಿಸುವುದು, ಮಾನಸಗಂಗೋತ್ರಿ ಆವರಣದಲ್ಲಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಬಗ್ಗೆ ಚರ್ಚೆ ನಡೆಯಿತು.

ADVERTISEMENT

ಚಿಕ್ಕಪುಟ್ಟ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ಮಾಡುವುದು ಮತ್ತು ಸಣ್ಣಪುಟ್ಟ ಲೋಪಗಳಿಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ವಿ.ವಿಯ ಘನತೆಗೆ ಕುಂದುಂಟಾಗುವುದನ್ನು ತಡೆಯಲು ಚರ್ಚಿಸಲಾಯಿತು.

ವಿದ್ಯಾರ್ಥಿ ಸಂಘಟನೆಗಳು ನಿಯಮಾನುಸಾರ ತಮ್ಮ ಶೈಕ್ಷಣಿಕ ಅಗತ್ಯದ ಬೇಡಿಕೆಗಳಿಗೆ ಪ್ರತಿಭಟನೆ ಅಥವಾ ಮುಷ್ಕರವನ್ನು ಹೂಡದೇ ಲಿಖಿತವಾಗಿ ಸಂಬಂಧಪಟ್ಟ ಮುಖ್ಯಸ್ಥರ ಮೂಲಕ ಮನವಿ ಸಲ್ಲಿಸಬೇಕು ಎಂದು ಸೂಚಿಸಲಾಯಿತು.

ವಿ.ವಿ. ಆವರಣದಲ್ಲಿ ಶಿಸ್ತಿನಿಂದ ಇರಲು ಹಾಗೂ ವ್ಯಸನಮುಕ್ತ ಕ್ಯಾಂಪಸ್ ನಿರ್ಮಾಣಕ್ಕೆ ಆಗಾಗ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು. ಗಂಗೋತ್ರಿ ಕ್ಯಾಂಪಸ್‌ ಸುರಕ್ಷತೆ ಹಾಗೂ ವಿದ್ಯಾರ್ಥಿನಿಲಯಗಳ ಮೇಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೀವ್ರ ನಿಗಾ ಇಡುವ ಬಗ್ಗೆ ಕ್ರಮ ವಹಿಸಲು ಕೋರಲಾಯಿತು.

ಕ್ಯಾಂಪಸ್‌ನಲ್ಲಿ ಅನಧಿಕೃತ ಮಳಿಗೆ ತೆರವುಗೊಳಿಸಬೇಕು, ಕಾನೂನು ಬಾಹಿರ ವಸ್ತುಗಳ ಮೂಲವನ್ನು ನಿಷೇಧಿಸಬೇಕು, ಬೋಧಕರು, ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಪ್ರಕರಣ ದಾಖಲಾಗುತ್ತಿರುವುದಕ್ಕೆ ತಡೆ ನೀಡಬೇಕು ಎಂದು ಚರ್ಚೆಯಾಯಿತು.

ಕುಲಸಚಿವರಾದ ಎಂ.ಕೆ. ಸವಿತಾ, ಪ್ರೊ.ಎನ್. ನಾಗರಾಜ್‌ (ಪರೀಕ್ಷಾಂಗ), ಹಣಕಾಸು ಅಧಿಕಾರಿ ಕೆ.ಎಸ್. ರೇಖಾ, ಜಯಲಕ್ಷ್ಮೀಪುರಂ ಠಾಣೆ ಇನ್‌ಸ್ಪೆಕ್ಟರ್ ಕುಮಾರ್, ಲಕ್ಷ್ಮೀಪುರಂ ಠಾಣೆ ಇನ್‌ಸ್ಪೆಕ್ಟರ್ ರವಿಶಂಕರ್‌ ಬಿ.ಎಸ್., ಸರಸ್ವತಿಪುರಂ ಠಾಣೆ ಎಸ್‌ಐ ಭವ್ಯಾ, ವಿವಿಯ ಆಡಳಿತಾಧಿಕಾರಿಗಳು, ನಿರ್ದೇಶಕರು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳು, ಡೀನರು, ಪ್ರಾಂಶುಪಾಲರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.