
ಮೈಸೂರು: ಸಾಂಸ್ಕೃತಿಕ ನಗರಿಯು 2025ರಲ್ಲಿ ಹಲವು ಸಂಗೀತ ಕಛೇರಿಗಳು, ರಂಗೋತ್ಸವಗಳು, ಸಮಾವೇಶಗಳು, ಉತ್ಸವಗಳಿಗೆ ಸಾಕ್ಷಿಯಾಯಿತು.
‘ದಕ್ಷಿಣ ಪ್ರಯಾಗ’ ಖ್ಯಾತಿಯ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ 12 ವರ್ಷದ ನಂತರ ‘ಕುಂಭಮೇಳ’ ಅದ್ದೂರಿಯಾಗಿ ನಡೆಯಿತು. ‘ಆರತಿ’ ಕಾರ್ಯಕ್ರಮ ಭಕ್ತರನ್ನು ಆಕರ್ಷಿತು.
‘ಕರ್ನಾಟಕ ಗಾನಕಲಾ ಪರಿಷತ್’ನಿಂದ ‘ರಾಜ್ಯ ಸಂಗೀತ ಸಮ್ಮೇಳನ’, ಕೇಂದ್ರ ಸಂಸ್ಕೃತಿ ಸಚಿವಾಲಯದ ‘ದಾಸ ಪರಂಪರೆಯ ಸಂಗೀತೋತ್ಸವ– ಮೈಸೂರು ಸಂಗೀತ ಸುಗಂಧ’, ‘ಮೈಸೂರು ಸಾಹಿತ್ಯ ಸಂಭ್ರಮ’ ಎಲ್ಲರ ಮನಸೂರೆಗೊಂಡಿತು. ‘ನಾಡಗೀತೆಗೆ ನೂರರ ಸಂಭ್ರಮ, ಸಾವಿರ ಸ್ವರಗಳ ಸಂಗಮ’ ಅಪೂರ್ವ ದಾಖಲೆ ಬರೆಯಿತು.
ಸೆ.22ರಂದು ದಸರೆಯನ್ನು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಉದ್ಘಾಟಿಸಿದ್ದರು. ಅದಕ್ಕೆ ಪರ– ವಿರೋಧವೂ ವ್ಯಕ್ತವಾಗಿತ್ತು. ಹೈಕೋರ್ಟ್‌ನಲ್ಲಿ ಕೆಲವರು ಅವರಿಗೆ, ಉದ್ಘಾಟನೆಗೆ ಅನುಮತಿ ನೀಡದಂತೆ ಅರ್ಜಿ ಹಾಕಿದ್ದರು. ಹೈಕೋರ್ಟ್ ಅದನ್ನು ತಿರಸ್ಕರಿಸಿ ಸರ್ಕಾರದ ನಿರ್ಧಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು.
ಯುವ ದಸರಾ ಕಿಚ್ಚು: ‘ಯುವ ದಸರಾ’ದಲ್ಲಿ ಬಾಲಿವುಡ್ ಗಾಯಕಿ ಸುನಿಧಿ ಚೌಹಾಣ್ ಯುವಜನರ ಎದೆಯಲ್ಲಿ ಕಿಚ್ಚು ಹೊತ್ತಿಸಿದರು. ದೇವಿಶ್ರೀ ಪ್ರಸಾದ್, ಪ್ರೀತಂ ಚಕ್ರವರ್ತಿ, ಅರ್ಜುನ್ ಜನ್ಯ, ಜುಬಿನ್ ನೌಟಿಯಾಲ್ ಸಂಗೀತ ರಸದೌತಣ ನೀಡಿದರು.
ಬನ್ನಿಮಂಟಪದ ಮೈದಾನದಲ್ಲಿ ಡ್ರೋನ್ ಶೋ ಜಾದೂ ಮಾಡಿತು. 3 ಸಾವಿರ ಡ್ರೋನ್‌ಗಳು ಚಿತ್ತಾರ ಮೂಡಿಸಿದವು. ದಸರೆಯಲ್ಲಿ ವೈಮಾನಿಕ ಪ್ರದರ್ಶನ 2 ವರ್ಷದ ನಂತರ ನಡೆಯಿತು.
ಸೆ.23ರಂದು ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ ರಚನೆಯಾಗಿ 100 ವರ್ಷವಾದ ನಿಮಿತ್ತ ‘ಸಾವಿರಾರು ಸ್ವರಗಳ ಸಂಗಮ’ ನಡೆಯಿತು.
ಭೈರಪ್ಪ ನಿಧನ: ಕಾದಂಬರಿಕಾರ ಪ್ರೊ.ಎಸ್.ಎಲ್.ಭೈರಪ್ಪ (91) ಹೃದಯಾಘಾತದಿಂದ ಬೆಂಗಳೂರಿನಲ್ಲಿ ಸೆ.24ರಂದು ನಿಧನರಾದರು. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮೈಸೂರಿನಲ್ಲೇ ನಡೆಯಿತು. ಜ.4ರಂದು ಚಿಂತಕ ಪ್ರೊ.ಮುಜಾಫರ್ ಅಸ್ಸಾದಿ, ಜುಲೈ 13ರಂದು ಪತ್ರಿಕೋದ್ಯಮಿ ಕೆ.ಬಿ.ಗಣಪತಿ (85), ಡಿ.17ರಂದು ಮೈಸೂರು ವಿಶ್ವವಿದ್ಯಾಲಯ ನಿವೃತ್ತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ (83) ನಿಧನರಾದರು.
ಪ್ರಶಸ್ತಿ ಗರಿ: ತಿ.ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿಯ ಜಾನಪದ ಕಲಾವಿದೆ ಸೋಬಾನೆ ಚನ್ನಾಜಮ್ಮ ಅವರಿಗೆ 2025ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಡಿ.13ರಂದು ಘೋಷಣೆಯಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಎನ್.ಎಸ್.ರಾಮೇಗೌಡ, ಕ್ರೀಡಾ ಕ್ಷೇತ್ರದಲ್ಲಿ ಹಿರಿಯ ಅಥ್ಲೀಟ್ ಎಂ.ಯೋಗೇಂದ್ರ, ಮಾಧ್ಯಮ ಕ್ಷೇತ್ರದಲ್ಲಿ ಅಂಶಿ ಪ್ರಸನ್ನಕುಮಾರ್, ಕರಕುಶಲ ಕ್ಷೇತ್ರದಲ್ಲಿ ಹೇಮಾ ಶೇಖರ್, ನೃತ್ಯ ಕ್ಷೇತ್ರದಲ್ಲಿ ರಾಮಮೂರ್ತಿರಾವ್, ಜನಪದ ಕ್ಷೇತ್ರದಿಂದ ನಂದಿಧ್ವಜ ಕಲಾವಿದ ಮಹದೇವಪ್ಪ ಉಡಿಗಾಲ, ರಂಗಾಯಣದ ನಿವೃತ್ತ ಕಲಾವಿದ ಮೈಮ್ ರಮೇಶ್ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದರು.
ವರ್ಷದ ಕೊನೆಯಲ್ಲಿ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ, ಸಂಗೀತ ಸಂಜೆ ಜನರನ್ನು ಆಕರ್ಷಿಸಿತು.
ಕುಂಭಮೇಳ; ಭಕ್ತಿಭಾವದ ಜಳಕ ‘ದಕ್ಷಿಣ ಪ್ರಯಾಗ’ ಎಂದೇ ಖ್ಯಾತಿ ಪಡೆದ ತಿ.ನರಸೀಪುರದಲ್ಲಿ ಫೆ.10ರಿಂದ 13ರವರೆಗೆ 13ನೇ ಕುಂಭಮೇಳ ನಡೆಯಿತು. ಕಾವೇರಿ ಕಪಿಲಾ ಹಾಗೂ ಗುಪ್ತಗಾಮಿನಿ ಸ್ಪಟಿಕ ನದಿ ಸಂಗಮದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿದ್ದ 1.5 ಲಕ್ಷ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿ ಪುನೀತರಾದರು. ಮೇಳದ 2ನೇ ದಿನ ಭಕ್ತ ಸಾಗರವು ‘ಕಾವೇರಿ ಆರತಿ’ಯ ಬೆಳಗಿಗೆ ಭಾವಪರವಶಗೊಂಡಿತು. ಆಗಸದಲ್ಲಿ ಬಾಣಬಿರುಸುಗಳ ಚಿತ್ತಾರವು ಸಂಭ್ರಮ ಹೆಚ್ಚಿಸಿತ್ತು.
ಮೈಸೂರು ಸಾಹಿತ್ಯ ಸಂಭ್ರಮ ‘ಸಂಗೀತ ಸುಗಂಧ’ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ ಜುಲೈ 5 6ರಂದು ‘ಮೈಸೂರು ಸಾಹಿತ್ಯ ಸಂಭ್ರಮ–2025’ ನಡೆಯಿತು. ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅನುವಾದಕಿ ದೀಪಾ ಭಾಸ್ತಿ ಉತ್ಸವಕ್ಕೆ ಮೆರುಗು ಹೆಚ್ಚಿಸಿದರು. ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು 2ನೇ ಆವೃತ್ತಿಯ ‘ಮೈಸೂರು ಸಂಗೀತ ಸುಗಂಧ–2025’ ರಾಷ್ಟ್ರೀಯ ಸಂಗೀತ ಉತ್ಸವವನ್ನು ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಅ.11 ಮತ್ತು 12ರಂದು ಆಯೋಜಿಸಿತು.
ರಾಜ್ಯ ಸಂಗೀತ ಸಮ್ಮೇಳನ ಬೆಂಗಳೂರಿನ ಕರ್ನಾಟಕ ಗಾನಕಲಾ ಪರಿಷತ್‌ನಿಂದ ನ.5ರಿಂದ 9ರವರೆಗೆ ಗಾನಭಾರತೀ ರಮಾಗೋವಿಂದ ಕಲಾ ವೇದಿಕೆಯಲ್ಲಿ 54ನೇ ಹಿರಿಯ ಸಂಗೀತ ವಿದ್ವಾಂಸರ ಹಾಗೂ 36ನೇ ಯುವ ಸಂಗೀತ ವಿದ್ವಾಂಸರ ರಾಜ್ಯ ಸಂಗೀತ ಸಮ್ಮೇಳನ. ಡಾ.ಸಿ.ಎ.ಶ್ರೀಧರ ಮತ್ತೂರು ಆರ್.ಶ್ರೀನಿಧಿ ಸಮ್ಮೇಳನಾಧ್ಯಕ್ಷರಾಗಿದ್ದರು. ಸುಗಮ ಸಂಗೀತ ಸಮ್ಮೇಳನ: ಆ.2 3ರಂದು ಕಲಾಮಂದಿರದಲ್ಲಿ ‘ಕರ್ನಾಟಕ ಸುಗಮ ಸಂಗೀತ ಪರಿಷತ್’ ‘ಗೀತೋತ್ಸವ– ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನ’ ಆಯೋಜಿಸಿತು.
ಪಾರಂಪರಿಕ ಸಂಗೀತೋತ್ಸವ ಆ.27ರಿಂದ ಸೆ.8ರವರೆಗೆ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ಶ್ರೀ ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್ (ಎಸ್‌ಪಿವಿಜಿಎಂಸಿ) 64ನೇ ‘ಪಾರಂಪರಿಕ ಸಂಗೀತೋತ್ಸವ’ ನಡೆಯಿತು. ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ನಡೆದ 13 ದಿನಗಳ ಉತ್ಸವಕ್ಕೆ ಸಹೃದಯರು ಸಾಕ್ಷಿಯಾದರು.
ಸಾಹಿತ್ಯ– ಸಂಗೀತ– ಸಮಾವೇಶಗಳು
ಜ.6: ‘ದೇಸಿರಂಗ ಸಾಂಸ್ಕೃತಿಕ’ ಟ್ರಸ್ಟ್‌ನಿಂದ ನಗರದ ಕಿರು ರಂಗಮಂದಿರದಲ್ಲಿ ಜ.6ರಿಂದ 8ರವರೆಗೆ ದೇಸಿರಂಗ ನಾಟಕೋತ್ಸವ.
ಜ.13: ‘ರಂಗಾಯಣ’ದ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಜ.19ರವರೆಗೆ ನಡೆಯಿತು. ‘ಬಿಡುಗಡೆ: ಸಾಮಾಜಿಕ ನ್ಯಾಯ– ಚಳವಳಿಗಳು ಮತ್ತು ರಂಗಭೂಮಿ’ ಪರಿಕಲ್ಪನೆಯಲ್ಲಿ ಜರುಗಿತು.
ಜ.20: ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ‘ಮೈಸೂರು ಲಿಟ್ರರಿ ಅಸೋಸಿಯೇಷನ್’ ವತಿಯಿಂದ 6ನೇ ಆವೃತ್ತಿಯ ‘ಮೈಸೂರು ಸಾಹಿತ್ಯ ಉತ್ಸವ’.
ಜ.26–31: ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ. * ಫೆ.15–17: ಕಿರುರಂಗಮಂದಿರದಲ್ಲಿ ‘ಕದಂಬ ರಂಗಹಬ್ಬ’ ನಡೆಯಿತು.
ಮಾರ್ಚ್ 1: ‘ನಗಾರಿ ಮಂಜು’ ಎಂದೇ ಹೆಸರು ಗಳಿಸಿರುವ ಸಿ.ಮಂಜುನಾಥ್ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನ.
ಕಿರುರಂಗಮಂದಿರದಲ್ಲಿ ಮಾರ್ಚ್ 3ರಿಂದ 5ರವರೆಗೆ ‘ನಾದರಂಗ’ ಸಂಸ್ಥೆಯಿಂದ ‘ರಂಗಸಂಭ್ರಮ ನಾಟಕೋತ್ಸವ’.
ಮಾರ್ಚ್ 7: ಕಿರುರಂಗಮಂದಿರದಲ್ಲಿ ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್‌ನಿಂದ ಜಾನಪದ ಸಂಭ್ರಮ ಮತ್ತು ನಾಟಕೋತ್ಸವ.
ಮಾರ್ಚ್ 9: ಸ್ವರಸಂಕುಲ ಸಂಗೀತ ಸಭಾದಿಂದ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ‘ಗಾನಯೋಗಿ ಪಂಚಾಕ್ಷರಿ– ಪುಟ್ಟರಾಜ ಸಂಗೀತೋತ್ಸವ’.
ರಂಗಾಯಣ ಮತ್ತು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯಿಂದ ಮಾರ್ಚ್ 22ರಿಂದ 27ರವರೆಗೆ ‘ವಿಶ್ವ ರಂಗ ಸಂಭ್ರಮ– 2025’.
ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ‘ಕೇಂದ್ರ ಸಂಗೀತ ನಾಟಕ ಅಕಾಡೆಮಿ’ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿ.ವಿಯಿಂದ ಏ.29ರಿಂದ 5 ದಿನಗಳ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಸಂಗೀತ ಮತ್ತು ನೃತ್ಯೋತ್ಸವ.
ಜೂನ್ 2: ಎಸ್‌ಜೆಸಿಇನಲ್ಲಿ ‘ಜೆಸಿಯಾನ’ ಉತ್ಸವ.
ಜೂನ್ 22: ಕಿರುರಂಗಮಂದಿರದಲ್ಲಿ ನಿರ್ದಿಗಂತ ರಂಗತಂಡದ 2ನೇ ವರ್ಷದ ಕಾರ್ಯಕ್ರಮ.
ಆ.11: ನಾದಬ್ರಹ್ಮ ಸಂಗೀತ ಸಭಾದಲ್ಲಿ ‘ರಾ.ಸತ್ಯನಾರಾಯಣ ಸಂಸ್ಮರಣ ಉತ್ಸವ’. * ಆ.4: ನಾಡಹಬ್ಬ ಮೈಸೂರು ದಸರೆಗಾಗಿ ‘ಗಜಪಯಣ’ಕ್ಕೆ ವೀರನಹೊಸಹಳ್ಳಿಯಲ್ಲಿ ಚಾಲನೆ.
ಅ.2: ಲಕ್ಷಾಂತರ ಜನರ ಸಂಭ್ರಮದ ನಡುವೆ ದಸರಾ ಜಂಬೂಸವಾರಿ.
ನ.1: ‘ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ’ಕ್ಕೆ 105 ಮಂದಿ ಭಾಜನ.
ನ.3: ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ 2018 ಮತ್ತು 2019ನೇ ಸಾಲಿನ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ. ಸಿಎಂ ಭಾಗಿ.
ನ.22ರಿಂದ 5 ದಿನ ಶ್ರೀರಾಮಕೃಷ್ಣ ಆಶ್ರಮದ ಶತಮಾನೋತ್ಸವ.
ನ.23: ಕುವೆಂಪುನಗರದ ಗಾನಭಾರತೀ ವೀಣೆಶೇಷಣ್ಣ ಭವನದಲ್ಲಿ ‘67ನೇ ಆಕಾಶವಾಣಿ ಸಂಗೀತ ಸಮ್ಮೇಳನ’.
ಡಿ.2–6: ವಿದುಷಿ ಟಿ.ಎಸ್. ಸತ್ಯವತಿ ಅಧ್ಯಕ್ಷತೆಯಲ್ಲಿ 30ನೇ ಜೆಎಸ್‌ಎಸ್ ಸಂಗೀತ ಸಮ್ಮೇಳನ.
ಡಿ.17ರಿಂದ 5 ದಿನ ಕಿರುರಂಗಮಂದಿರದಲ್ಲಿ ನಿರಂತರ ಫೌಂಡೇಷನ್‌ನಿಂದ ‘ನಿರಂತರ ರಂಗ ಉತ್ಸವ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.