ADVERTISEMENT

ಮೈಸೂರು ವಿಮಾನ ನಿಲ್ದಾಣ | ರನ್‌ ವೇ ವಿಸ್ತರಣೆಯಾದರೆ ಏರ್‌ ಬಸ್: ಆರ್‌.ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 15:30 IST
Last Updated 27 ಜುಲೈ 2022, 15:30 IST
ತಾಂತ್ರಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಮಾನ ನಿಲ್ದಾಣದ ನಿರ್ದೇಶಕ ಆರ್‌.ಮಂಜುನಾಥ್‌ ಮಾತನಾಡಿದರು – ಪ್ರಜಾವಾಣಿ ಚಿತ್ರ
ತಾಂತ್ರಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಮಾನ ನಿಲ್ದಾಣದ ನಿರ್ದೇಶಕ ಆರ್‌.ಮಂಜುನಾಥ್‌ ಮಾತನಾಡಿದರು – ಪ್ರಜಾವಾಣಿ ಚಿತ್ರ   

ಮೈಸೂರು: ‘ಮೈಸೂರು ವಿಮಾನ ನಿಲ್ದಾಣದಲ್ಲಿ ರನ್‌ ವೇ ವಿಸ್ತರಣೆ ಪೂರ್ಣಗೊಂಡ ಬಳಿಕ ದೊಡ್ಡದಾದ ವಿಮಾನ ‘ಏರ್ ಬಸ್–320’, ಕಾರ್ಗೋ ಮೊದಲಾದವುಗಳ ಕಾರ್ಯಾಚರಣೆ ನಡೆಸಬಹುದಾಗಿದೆ. ಇದರಿಂದ ಈ ಭಾಗದ ಆರ್ಥಿಕ ಅಭಿವೃದ್ಧಿಯೂ ಸಾಧ್ಯವಾಗಲಿದೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಆರ್‌.ಮಂಜುನಾಥ್‌ ತಿಳಿಸಿದರು.

ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಭಾರತೀಯ ಎಂಜಿನಿಯರ್‌ಗಳ‌ ಸಂಸ್ಥೆಯ ಮೈಸೂರು ಸ್ಥಳೀಯ ‌ಕೇಂದ್ರದಿಂದ ಬುಧವಾರ ಆಯೋಜಿಸಿದ್ದ ‌ತಾಂತ್ರಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರನ್‌ ವೇ ವಿಸ್ತರಣೆಗೆ ಸಂಬಂಧಿಸಿ 240 ಎಕರೆ ಸ್ವಾಧೀನಕ್ಕೆ ಅನುಮೋದನೆ ದೊರೆತಿದೆ. ಸರ್ಕಾರದಿಂದ ₹ 230 ಕೋಟಿ‌ ಅನುದಾನವನ್ನೂ ನೀಡಲಾಗಿದೆ. ಕೆಐಡಿಬಿಯಿಂದ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜಾಗವು ವಿಮಾನನಿಲ್ದಾಣ ಪ್ರಾಧಿಕಾರದ ಹೆಸರಿಗೆ ಬರುತ್ತಿದ್ದಂತೆಯೇ ರನ್‌ ವೇ ವಿಸ್ತರಣೆ ಕಾಮಗಾರಿ ಆರಂಭಿಸಲಾಗುತ್ತದೆ. ಮೈಸೂರು–ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್‌ಪಾಸ್ ಮಾಡಲಾಗುತ್ತದೆ. ಇದಕ್ಕೆ ಈಗಾಗಲೇ ಅನುಮೋದನೆಯೂ ದೊರೆತಿದೆ. ‘ಸ್ಫೋಟ ನಿರೋಧಕ ಅಂಡರ್‌ಪಾಸ್’ ಆಗಿ ವಿನ್ಯಾಸ ಮಾಡಲಾಗುತ್ತದೆ. ಇದು ಭಾರತದಲ್ಲೇ ಮೊದಲ‌ ಪ್ರಯತ್ನವಾಗಿದೆ. ಎಂದಿನಂತೆ ಸುರಕ್ಷತೆ ಮತ್ತು ಭದ್ರತೆಗೆ ಮೊದಲ ಆದ್ಯತೆ ಇರಲಿದೆ’ ಎಂದು ಹೇಳಿದರು.

ADVERTISEMENT

ವಿದೇಶದಲ್ಲಿ ಆ ರೀತಿ ಇದೆ:

‘ಹೆದ್ದಾರಿಯಲ್ಲಿ ಮಾರ್ಗ ಬದಲಾವಣೆ ಬದಲಿಗೆ, ಕೆಳಸೇತುವೆ ನಿರ್ಮಿಸಲಾಗುತ್ತಿದೆ. ವಿದೇಶದ ವಿವಿಧ ನಿಲ್ದಾಣಗಳಲ್ಲಿ ಈ ರೀತಿಯ ಕೆಳಸೇತುವೆ ನಿರ್ಮಿಸಲಾಗಿದೆ. ರನ್‌ವೇ ವಿಸ್ತರಣೆಯಾದಲ್ಲಿ ಅಂತರರಾಷ್ಟ್ರೀಯ ಸಂಪರ್ಕವೂ ಸಾಧ್ಯವಾಗಲಿದೆ’ ಎಂದರು.

‘ಅಮೆರಿಕದಲ್ಲಿ ನೆಲೆಸಿರುವ ಮೈಸೂರಿಗರೊಬ್ಬರು ₹ 5 ಲಕ್ಷ ವೆಚ್ಚ ಮಾಡಿ, ವಿಮಾನನಿಲ್ದಾಣದಲ್ಲಿ ಸೆಲ್ಫಿ ಪಾಯಿಂಟ್ ಮಾಡಿ ಕೊಟ್ಟಿದ್ದಾರೆ. ಮೈಸೂರಿನ ಬ್ರ್ಯಾಂಡ್‌ ಆಗಿರುವ ಅಂಬಾರಿ ಹಿನ್ನೆಲೆಯ ಪಾಯಿಂಟ್ ಅದಾಗಿದೆ. ಬಹಳಷ್ಟು ಮಂದಿ ಅಲ್ಲಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಉಡಾನ್–3 ಯೋಜನೆ ಬಂದ ಮೇಲೆ ವಿಮಾನಗಳ ಕಾರ್ಯಾಚರಣೆ ಸುಧಾರಿಸುತ್ತಿದೆ. ಪ್ರಯಾಣಿಕರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ’ ಎಂದು ತಿಳಿಸಿದರು.

‘ಮೈಸೂರಿನಿಂದ ಸದ್ಯ ಅಲಯನ್ಸ್‌ ಕಂಪನಿಯು ಹೈದರಾಬಾದ್, ಗೋವಾ, ಬೆಂಗಳೂರು ಹಾಗೂ ಕೊಚ್ಚಿ ಮತ್ತು ಇಂಡಿಗೋ ಕಂಪನಿಯು ಹೈದರಾಬಾದ್, ಚೆನ್ನೈ ಮತ್ತು ಹುಬ್ಬಳ್ಳಿ ನಡುವೆ ವಿಮಾನಗಳ ಕಾರ್ಯಾಚರಣೆ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾರ್ಗಗಳಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ. ತಿರುಪತಿ, ಶಿರಡಿ, ಮಂಗಳೂರು, ಕಲಬುರಗಿ, ಅಹಮದಾಬಾದ್, ಪುಣೆ, ಕೋಲ್ಕತ್ತಾ, ಮುಂಬೈ, ದೆಹಲಿ, ತಿರುವನಂತಪುರಂ ಮೊದಲಾದ ಕಡೆಗಳಿಗೂ ಕಾರ್ಯಾಚರಣೆ ಆರಂಭಗೊಳ್ಳಬೇಕಿದೆ. ಪೈಲಟ್‌ಗಳನ್ನು ತಯಾರಿಸುವುದಕ್ಕಾಗಿ ಎಫ್‌ಟಿಎಸ್ (ಫ್ಲೈಯಿಂಗ್ ತರಬೇತಿ ಶಾಲೆ) ಬೇಕಾಗಿದೆ’ ಎಂದರು.

ಹೆಮ್ಮೆಯ ಸಂಗತಿ:

‘ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣಕ್ಕೆ ಸರ್ಕಾರವು ಈಚೆಗೆ ನಿರ್ಧರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಹೇಳಿದರು.

‘ವಿಮಾನನಿಲ್ದಾಣಗಳಲ್ಲಿ ಭವಿಷ್ಯದಲ್ಲಿ ಹೊಸ ತಂತ್ರಜ್ಞಾನವಾದ ‘ಫೇಸಿಯಲ್‌ ರೆಕಗ್ನಿಷನ್‌’ ಬಳಸಬಹುದು. ಇದರಿಂದ ಪ್ರಯಾಣಿಕರು ನಿಲ್ದಾಣದಲ್ಲಿ ತಪಾಸಣೆಗೆ, ದಾಖಲೆಗಳ ಪರಿಶೀಲನೆಗೆ ಒಳಗಾಗುವುದು ತಪ್ಪಲಿದೆ. ಆ ಪ್ರಕ್ರಿಯೆಗಳನ್ನು ಮುಂಚೆಯೇ ಆನ್‌ಲೈನ್‌ನಲ್ಲೇ ಮುಗಿಸಲಾಗಿರುತ್ತದೆ. ಸಾಮಗ್ರಿಗಳನ್ನು ಕೂಡ ಮುಂಚಿತವಾಗಿಯೇ ಮನೆಯಿಂದಲೇ ಸಂಗ್ರಹಿಸಿರಲಾಗಿರುತ್ತದೆ’ ಎಂದು ಹೇಳಿದರು.

‘ಮೈಸೂರು ವಿಮಾನನಿಲ್ದಾಣದಿಂದ ಈ ಭಾಗದ ಉತ್ಪನ್ನಗಳನ್ನು ಸಾಗಿಸಲು ಅನುವಾಗುವಂತೆ ಕಾರ್ಗೋ ಸೌಲಭ್ಯವೂ ಅವಶ್ಯವಾಗಿದೆ. ನಿಲ್ದಾಣದಲ್ಲಿ ಇಲ್ಲಿನ ಜಿಐ (ಜಿಯೋಗ್ರಾಫಿಕಲ್‌ ಇಂಡಿಕೇಷನ್‌) ಟ್ಯಾಗ್ ಪಡೆದಿರುವ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಅಗ್ನಿ ಸುರಕ್ಷತಾ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ.ಎನ್.ಸುರೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಭಾರತೀಯ ಎಂಜಿನಿಯರ್‌ಗಳ‌ ಸಂಸ್ಥೆಯ ಮೈಸೂರು ಸ್ಥಳೀಯ ‌ಕೇಂದ್ರದ ಅಧ್ಯಕ್ಷ ಬಿ.ಎಸ್.ಪ್ರಭಾಕರ್, ಗೌರವ ಕಾರ್ಯದರ್ಶಿ ಎಚ್.ಎಸ್.ಸುರೇಶ್ ಬಾಬು, ಕಾರ್ಯಕ್ರಮ ಸಂಚಾಲಕ ಎಂ.ಕೆ.ನಂಜಯ್ಯ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.