
ಮೈಸೂರು: ‘ಬೌದ್ಧಿಕ ಆಸ್ತಿ ಹಕ್ಕು ಹಾಗೂ ಹಕ್ಕುಸ್ವಾಮ್ಯವನ್ನು ಸಮುದಾಯದ ಹಿತಕ್ಕೆ ಬಳಸಬೇಕು’ ಎಂದು ನಿವೃತ್ತ ಕುಲಪತಿ ಪ್ರೊ.ಪಿ.ಈಶ್ವರ್ ಭಟ್ ಆಶಯ ವ್ಯಕ್ತಪಡಿಸಿದರು.
ಇಲ್ಲಿನ ಸಿದ್ಧಾರ್ಥನಗರದ ಟೆರೇಸಿಯನ್ ಕಾಲೇಜಿನಲ್ಲಿ ಐಕ್ಯುಎಸಿ ಹಾಗೂ ಟೆರೇಸಿಯನ್ ಕಾಲೇಜು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೌದ್ಧಿಕ ಆಸ್ತಿ ಹಕ್ಕು (ಐಪಿಆರ್) ಕುರಿತ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಾವು ಜ್ಞಾನ, ಸೌಲಭ್ಯ ಮೊದಲಾದವುಗಳನ್ನು ಸಮಾಜದಿಂದ ಪಡೆದುಕೊಂಡಿರುತ್ತೇವೆ. ಹೀಗಾಗಿ, ಮರಳಿ ಕೊಡಬೇಕು. ಅನ್ವೇಷಣೆಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಮಾಡುವಂತಿರಬೇಕು’ ಎಂದರು.
‘ಬೌದ್ಧಿಕ ಆಸ್ತಿ ಹಕ್ಕು ಆರ್ಥಿಕವಾಗಿ ಅಭಿವೃದ್ಧಿಗೂ ಸಹಕಾರ ನೀಡುತ್ತದೆ. ಇದೇ ವೇಳೆ, ಈಗಿರುವ ಕಾನೂನು ಎಲ್ಲ ಬೌದ್ಧಿಕ ಆಸ್ತಿ ಹಕ್ಕುದಾರರನ್ನು ರಕ್ಷಿಸುತ್ತಿದೆಯೇ ಎಂಬುದನ್ನೂ ನೋಡಬೇಕಾಗುತ್ತದೆ. ಈ ಹಕ್ಕಿನ ಕುರಿತು ಎಲ್ಲರೂ ತಿಳಿದುಕೊಳ್ಳಬೇಕಾಗುತ್ತದೆ. ಜ್ಞಾನ ವ್ಯವಸ್ಥೆಯ ಸುಧಾರಣೆಗಾಗಿ ಇದು ಅಗತ್ಯವಾಗಿದೆ’ ಎಂದು ಹೇಳಿದರು.
ಬಹಳ ಮುಖ್ಯ: ಉದ್ಘಾಟಿಸಿದ ನಿವೃತ್ತ ಕುಲಪತಿ ಪ್ರೊ.ಎಚ್. ರಾಜಶೇಖರ್ ಮಾತನಾಡಿ, ‘ಈಗಿನ ಡಿಜಿಟಲ್ ಯುಗದಲ್ಲಿ ಐಪಿಆರ್ ಬಹಳ ಮುಖ್ಯವಾಗಿದೆ. ನಕಲು ಮಾಡಿದರೆ ಹಕ್ಕುಸ್ವಾಮ್ಯ ಉಳ್ಳವರಿಗೆ ಮನ್ನಣೆ ಹಾಗೂ ಲಾಭ ದೊರೆಯುವುದಿಲ್ಲ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಸಿಸ್ಟರ್ ಸಹಾಯ ಮೇರಿ, ‘ಈಗಿನ ಸ್ಪರ್ಧಾತ್ಮಕ ಹಾಗೂ ಜಾಗತೀಕರಣದ ಯುಗದಲ್ಲಿ ಉಪಾಯಗಳು ಬಹಳ ಮುಖ್ಯವಾಗುತ್ತವೆ. ಹೀಗಾಗಿ ಬೌದ್ಧಿಕ ಆಸ್ತಿ ಅಗತ್ಯವಾಗುತ್ತದೆ. ನೈತಿಕ ವ್ಯಾಪಾರ ಅಭ್ಯಾಸಕ್ಕೂ ಸಹಕಾರಿಯಾಗಿದೆ. ಸುಸ್ಥಿರ ಹಾಗೂ ಸಮಗ್ರ ಅಭಿವೃದ್ಧಿಗೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಕ್ಷಿಸುವುದು ಅಗತ್ಯವಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ನಡೆದ ನಾಲ್ಕು ತಾಂತ್ರಿಕ ಅಧಿವೇಶನಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಎಂ.ಎನ್. ಭೀಮೇಶ್, ಸುನೇತ್ರಾ ಸುಧಾಕರ ದೆರೆಬೈಲ್, ಎಸ್.ನವೀನ್ ಹಾಗೂ ಕುಮಾರ ಎನ್.ಜೆ. ವಿಷಯ ಮಂಡಿಸಿದರು.
ಟೆರೇಸಿಯನ್ ಕಾಲೇಜು ಸಂಶೋಧನಾ ಕೇಂದ್ರದ ಸಂಶೋಧನಾ ನಿರ್ದೇಶಕಿ ವೀಣಾ ಎಂ.ಡಿ. ಆಲ್ಮೀಡಾ, ಐಕ್ಯುಎಸಿ ಸಂಯೋಜಕ ವಿವೇಕ್ ಚಾರ್ಲ್ಸ್, ಸಹಾಯಕ ಪ್ರಾಧ್ಯಾಪಕ ಪಿ.ಎಂ. ಶಿವಪ್ರಸಾದ್ ಪಾಲ್ಗೊಂಡಿದ್ದರು.
ಟೆರೇಷಿಯನ್ ಕಾಲೇಜಿನಲ್ಲಿ ಆಯೋಜನೆ ಸಂಪನ್ಮೂಲ ವ್ಯಕ್ತಿಗಳಿಂದ ವಿಷಯ ಮಂಡನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.