ADVERTISEMENT

ಮೈಸೂರು | ಬಜೆಟ್ ‘ಗಾತ್ರ’: ಎಂಸಿಸಿಗೋ, ಬಿಎಂಸಿಸಿಗೋ?!

ಎಂ.ಮಹೇಶ್
Published 18 ಜನವರಿ 2026, 4:23 IST
Last Updated 18 ಜನವರಿ 2026, 4:23 IST
ಮೈಸೂರು ಮಹಾನಗರಪಾಲಿಕೆ
ಮೈಸೂರು ಮಹಾನಗರಪಾಲಿಕೆ   

ಮೈಸೂರು: ಇಲ್ಲಿನ ನಗರ ಸ್ಥಳೀಯ ಸಂಸ್ಥೆಯಾದ ಮೈಸೂರು ಮಹಾನಗರಪಾಲಿಕೆಯ 2026–27ನೇ ಸಾಲಿನ ಬಜೆಟ್‌ ‘ಸ್ವರೂಪ’ ಯಾವ ರೀತಿಯಲ್ಲಿರಲಿದೆ ಎಂಬುದು ಕುತೂಹಲ ಮೂಡಿಸಿದೆ. 

ಪ್ರಸಕ್ತ ಸಾಲಿನ ಬಜೆಟ್‌ ಮಂಡಿಸುವುದು ಮೈಸೂರು ಮಹಾನಗರಪಾಲಿಕೆ (ಎಂಸಿಸಿ)ಗೋ ಅಥವಾ ಇತ್ತೀಚೆಗೆ ಹೊಸದಾಗಿ ಘೋಷಣೆಯಾಗಿರುವ ಬೃಹತ್‌ ಮಹಾನಗರಪಾಲಿಕೆ (ಬಿಎಂಸಿಸಿ)ಗೋ ಎಂಬ ಪ್ರಶ್ನೆ ಎದುರಾಗಿದೆ. ಈ ವಿಷಯದಲ್ಲಿ ಸ್ಪಷ್ಟನೆ ಕೋರಿ ಪಾಲಿಕೆಯಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸ್ಥಳೀಯ ಸಂಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೇ ಎರಡು ವರ್ಷಗಳೇ ಉರುಳಿದ್ದು, ಅಧಿಕಾರಿಗಳ ಆಡಳಿತವಷ್ಟೆ ನಡೆಯುತ್ತಿದೆ. ಸದ್ಯಕ್ಕೆ ಆಡಳಿತಾಧಿಕಾರಿಯಾಗಿ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ‘ಪ್ರಭಾರ’ ವಹಿಸಿದ್ದಾರೆ. ಬಜೆಟ್‌ ತಯಾರಿಗೆ ಸಿದ್ಧತೆಯೂ ನಡೆಯುತ್ತಿದೆ. ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಜ.7ರಂದು ಬಜೆಟ್‌ ಪೂರ್ವಭಾವಿಯಾಗಿ ಮಾಜಿ ಮೇಯರ್‌ಗಳು, ಮಾಜಿ ಉಪಮೇಯರ್‌ಗಳು, ವಿವಿಧ ಕ್ಷೇತ್ರದ ಪ್ರಮುಖರು, ಸಂಘ–ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿ ಸಲಹೆ–ಸೂಚನೆಗಳನ್ನು ಸಂಗ್ರಹಿಸಲಾಗಿತ್ತು.  ಆಗ ಮೈಸೂರು ಮಹಾನಗರಪಾಲಿಕೆಯ ವ್ಯಾಪ್ತಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಕೇಳಲಾಗಿತ್ತು.

ADVERTISEMENT

ಹೆಚ್ಚಾದ ವ್ಯಾಪ್ತಿ: 

ಇದಾದ ಎರಡೇ ದಿನಗಳಲ್ಲಿ ಅಂದರೆ ಜ.9ರಂದು, ಮೈಸೂರು ಜಿಲ್ಲೆಯ 341.44 ಚದರ ಕಿ.ಮೀ. ವ್ಯಾಪ್ತಿಯೊಳಗೆ ಬರುವ ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳನ್ನು ಮೈಸೂರು ಮಹಾನಗರ ಪಾಲಿಕೆಗೆ ಸೇರ್ಪಡೆಗೊಳಿಸಿ ‘ಬೃಹತ್‌ ಮೈಸೂರು ಮಹಾನಗರ ಪಾಲಿಕೆ’ ಎಂದು ಮರುನಾಮಕರಣ ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯಪತ್ರದಿಂದ ಪ್ರಕಟವಾದ ದಿನದಿಂದಲೇ ಇದು ಅನ್ವಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಈವರೆಗೆ 86.31 ಚದರ ಕಿ.ಮೀ.ನಷ್ಟಿದ್ದ ಮಹಾನಗಗರಪಾಲಿಕೆಯ ವ್ಯಾಪ್ತಿಯನ್ನು 341.44 ಚದರ ಕಿ.ಮೀ.ಗೆ ಹಿಗ್ಗಿಸಲಾಗಿದೆ. ಇದರಿಂದಾಗಿ 11.46 ಲಕ್ಷದಷ್ಟಿದ್ದ ಜನಸಂಖ್ಯೆ ಜೊತೆಗೆ ಪಾಲಿಕೆ ವ್ಯಾಪ್ತಿಗೆ ಹೆಚ್ಚುವರಿಯಾಗಿ ₹ 2.7 ಲಕ್ಷ ಜನರು ಸೇರ್ಪಡೆಯಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.‌ ಇದಕ್ಕೆ ತಕ್ಕಂತೆ ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ ಸಿದ್ಧಪಡಿಸಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ತಗಲುವ ವೆಚ್ಚಕ್ಕೆ ಅನುದಾನವನ್ನೂ ಸರಿಹೊಂದಿಸಬೇಕಾಗುತ್ತದೆ. ಹೊರವಲಯದ ಬಹಳಷ್ಟು ಬಡಾವಣೆಗಳು ಬಿಎಂಸಿಸಿಗೆ ಬರುವುದರಿಂದ ಅಲ್ಲಿಗೆ ಕುಡಿಯುವ ನೀರು, ಸ್ವಚ್ಛತೆ, ಬೀದಿದೀಪ, ರಸ್ತೆ ಮೊದಲಾದ ನಿರ್ವಹಣೆ ಮತ್ತಿತರ ಕೆಲಸಗಳಿಗೆ ಹೆಚ್ಚಿನ ಅನುದಾನ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಆಯುಕ್ತರು ಹೇಳುವುದೇನು?: 

ಈ ಬಗ್ಗೆ ಪ್ರತಿಕ್ರಿಯಿಸಿದ ಮಹಾನಗರಪಾಲಿಕೆ ಆಯುಕ್ತ ಶೇಖ್‌ ತನ್ವೀರ್‌ ಆಸೀಫ್‌, ‘ನಾವು ಎಂಸಿಸಿ ವ್ಯಾಪ್ತಿಗೆಂದು ಬಜೆಟ್‌ ತಯಾರಿ ಆರಂಭಿಸಿದ್ದೆವು. ಸರ್ಕಾರವು ಬಿಎಂಸಿಸಿ ರಚಿಸಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಅಂತಿಮ ಅಧಿಸೂಚನೆ ಇನ್ನಷ್ಟೆ ಆಗಬೇಕಿದೆ. ಮಾರ್ಚ್‌ವರೆಗೆ ಅಂತಿಮ ಅಧಿಸೂಚನೆ ಹೊರಬಿದ್ದರೆ, ಬಿಎಂಸಿಸಿಯ ಬಜೆಟ್‌ ಸಿದ್ಧಪಡಿಸುತ್ತೇವೆ. ಇಲ್ಲದಿದ್ದರೆ ಪರಿಷ್ಕೃತ ಬಜೆಟ್‌ ಮಂಡಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸ್ಪಷ್ಟನೆ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

‘ಮುಖ್ಯ ಲೆಕ್ಕಾಧಿಕಾರಿ ಕಚೇರಿಯ ವಿಭಾಗದಿಂದ ಬಿಎಂಸಿಸಿಗೆ ಸಂಬಂಧಿಸಿದಂತೆ ವೆಚ್ಚ–ಆದಾಯದ ಮಾಹಿತಿ ಸಿದ್ಧಪಡಿಸಲಾಗುತ್ತಿದೆ. ಎಂಸಿಸಿ ಹಾಗೂ ಬಿಎಂಸಿಸಿ ವ್ಯಾಪ್ತಿ ಎರಡಕ್ಕೆ ಸಂಬಂಧಿಸಿದಂತೆಯೂ ಅಂದಾಜುಪಟ್ಟಿ ಸಿದ್ಧಪಡಿಸಿಕೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

2025–26ನೇ ಸಾಲಿನ ಬಜೆಟ್‌ ಆಗಿನ ಪ್ರಾದೇಶಿಕ ಆಯುಕ್ತ ಡಿ.ಎಸ್. ರಮೇಶ್‌ ಅಧ್ಯಕ್ಷತೆಯಲ್ಲಿ ಮಂಡನೆಯಾಗಿತ್ತು. ಒಟ್ಟು ₹ 1,228.72 ಕೋಟಿ ಗಾತ್ರದ ಬಜೆಟ್‌ ಅದಾಗಿತ್ತು. ಇದರಲ್ಲಿ ₹1,219.09 ಕೋಟಿ ಪಾವತಿಯಾಗಲಿದ್ದು, ₹ 9.70 ಕೋಟಿ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿತ್ತು. ಈ ಬಾರಿ, ಬಿಎಂಸಿಸಿಗೆ ತಕ್ಕಂತೆ ‘ಬಜೆಟ್‌ ಗಾತ್ರ’ ಹೆಚ್ಚಾಗುವ ಸಾಧ್ಯತೆ ಇದೆ.

86.31 ಚ.ಕಿ.ಮೀ.ನಿಂದ 341.44 ಚ.ಕಿ.ಮೀ.ಗೆ ಹಿಗ್ಗಿದ ವ್ಯಾಪ್ತಿ ಹೋದ ವರ್ಷದ ಬಜೆಟ್‌ ಗಾತ್ರ ₹ 1,228.72 ಕೋಟಿ ಈ ಬಾರಿಯೂ ಅಧಿಕಾರಿಗಳಿಂದಲೇ ಬಜೆಟ್

ರಾಜ್ಯ ಬಜೆಟ್‌ ನಂತರ ನಮ್ಮ ಪಾಲಿಕೆಯ ಬಜೆಟ್‌ ಮಂಡಿಸಲಾಗುವುದು. ಸರ್ಕಾರದಿಂದ ಬರುವ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು
ಶೇಖ್‌ ತನ್ವೀರ್‌ ಆಸೀಫ್‌ ಆಯುಕ್ತ ಮಹಾನಗರಪಾಲಿಕೆ ಮೈಸೂರು
ಸರ್ಕಾರವು ಬಿಎಂಸಿಸಿಗೆ ತಕ್ಕಂತೆ ಅನುದಾನವನ್ನು ಒದಗಿಸಬೇಕು. ಬಜೆಟ್‌ ಮಂಡನೆಯೊಳಗೆ ಈ ಕೆಲಸವಾಗಬೇಕು. ಇಲ್ಲದಿದ್ದರೆ ಘೋಷಣೆಯಷ್ಟೇ ಆಗಲಿದೆ
ಶಿವಕುಮಾರ್‌ ಮಾಜಿ ಮೇಯರ್

ಬಿಎಂಸಿಸಿ ವ್ಯಾಪ್ತಿ ಎಷ್ಟು?: ಬೃಹತ್‌ ಮೈಸೂರು ಮಹಾನಗರಪಾಲಿಕೆ (ಬಿಎಂಸಿಸಿ)ಯಲ್ಲಿ ಮೈಸೂರು ಮಹಾನಗರಪಾಲಿಕೆ ಹೂಟಗಳ್ಳಿ ನಗರಸಭೆ ಶ್ರೀರಾಂಪುರ ರಮ್ಮನಹಳ್ಳಿ ಕಡಕೊಳ ಬೋಗಾದಿ ಪಟ್ಟಣ ಪಂಚಾಯಿತಿಗಳು ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ (ಪೂರ್ಣ) ಆಲನಹಳ್ಳಿ ಗ್ರಾಮ ಪಂಚಾಯಿತಿಯ ಆಲನಹಳ್ಳಿ ಮತ್ತು ಲಲಿತಾದ್ರಿಪುರ ಗ್ರಾಮಗಳು ಸಿದ್ದಲಿಂಗಪುರ ಗ್ರಾಮ ಪಂಚಾಯಿತಿಯ ಸಿದ್ದಲಿಂಗಪುರ ಬೆಲವತ್ತ ಕೆಸರೆ ಮೇಟಗಳ್ಳಿ ಗ್ರಾಮಗಳು. ಇಲವಾಲ ಗ್ರಾಮ ಪಂಚಾಯಿತಿಯ ಇಲವಾಲ ಕರಕನಹಳ್ಳಿ ಮೈದನಹಳ್ಳಿ ಮೇಗಳಾಪುರ ಗ್ರಾಮಗಳು ಧನಗಳ್ಳಿ ಗ್ರಾಮ ಪಂಚಾಯಿತಿಯ ಧನಗಳ್ಳಿ ಯಡಹಳ್ಳಿ ಕೆಂಚಲಗೂಡು ಹಾಲಾಳು ಚೌಡಹಳ್ಳಿ (ಕೋಟೆಹುಂಡಿ) ಗ್ರಾಮಗಳು. ಮಲ್ಲಹಳ್ಳಿ (ಬೀರಿಹುಂಡಿ) ಗ್ರಾಮ ಪಂಚಾಯಿತಿಯ ಮಲ್ಲಹಳ್ಳಿ–ಬೀರಿಹುಂಡಿ ಗೋಹಳ್ಳಿ ಕುಮಾರಬೀಡು ಬಲ್ಲಹಳ್ಳಿ ಗ್ರಾಮಗಳು ನಾಗನಹಳ್ಳಿ ಗ್ರಾಮ ಪಂಚಾಯಿತಿಯ ಶ್ಯಾದನಹಳ್ಳಿ ಮತ್ತು ನಾಗವಾಲ ಗ್ರಾಮ ಪಂಚಾಯಿತಿಯ ನಾಗವಾಲ ಬೊಮ್ಮನಹಳ್ಳಿ ಹುಯಿಲಾಳು ಗ್ರಾಮಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.