ಮೈಸೂರು: ಇಲ್ಲಿನ ಚಾಮುಂಡಿ ಬೆಟ್ಟದಲ್ಲಿ ಜೂನ್ 27ರಿಂದ ತಿಂಗಳ ಕಾಲ ಆಷಾಢ ಶುಕ್ರವಾರ ಆಚರಣೆ ನಡೆಯಲಿದ್ದು, ಆ ಅವಧಿಯಲ್ಲಿ ಬೆಟ್ಟದಲ್ಲಿ ‘ವಿಶೇಷ ದರ್ಶನ’ ಟಿಕೆಟ್ ದರವನ್ನು ₹300 ಹಾಗೂ ₹2 ಸಾವಿರಕ್ಕೆ ನಿಗದಿಪಡಿಸಲಾಗಿದೆ. ಇದಕ್ಕೆ ಭಕ್ತರಿಂದ ಆಕ್ಷೇಪವೂ ವ್ಯಕ್ತವಾಗಿದೆ.
ಈ ಮೊದಲು ವಿಶೇಷ ದರ್ಶನ ಟಿಕೆಟ್‌ಗೆ ₹300 ಮಾತ್ರ ಶುಲ್ಕವಿತ್ತು. ಈ ವರ್ಷದಿಂದ ₹ 2 ಸಾವಿರದ ಇನ್ನೊಂದು ವಿಶೇಷ ಟಿಕೆಟ್ ಸೌಲಭ್ಯವನ್ನೂ ಸೇರಿಸಲಾಗಿದೆ. ಅದನ್ನು ಪಡೆದರೆ ಪ್ರತ್ಯೇಕ ಸಾಲಿನಲ್ಲಿ ದರ್ಶನ, ಬೆಟ್ಟಕ್ಕೆ ಎ.ಸಿ. ಬಸ್ ವ್ಯವಸ್ಥೆ ಇರಲಿದೆ. ಜೊತೆಗೆ ಅರಿಶಿನ–ಕುಂಕುಮ, ಲಡ್ಡು, ನೀರಿನ ಬಾಟಲ್ ಹಾಗೂ ಪುಟ್ಟ ಸ್ಮರಣಿಕೆಯುಳ್ಳ ಬಟ್ಟೆ ಬ್ಯಾಗ್ ನೀಡಲಾಗುತ್ತದೆ.
‘ನಾಲ್ಕೂ ವಾರ, ಶುಕ್ರವಾರದಿಂದ ಭಾನುವಾರದವರೆಗೆ ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ಲಲಿತಮಹಲ್ ಮೈದಾನದಿಂದ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಇರಲಿದೆ. ಭಕ್ತರಿಗೆಂದು ಈ ಬಾರಿ ವಿಶೇಷ ಸಾಲಿನ ವ್ಯವಸ್ಥೆ ಮಾಡಿದ್ದು, ಸಾಮಾನ್ಯ ದರ್ಶನಕ್ಕೆ ಶುಲ್ಕವಿರುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಬೆಟ್ಟಕ್ಕೆ ಬರುವ ಸಾವಿರಾರು ವಿಐಪಿ–ವಿವಿಐಪಿಗಳಿಗೆ ಈ ವರ್ಷದಿಂದ ಪಾಸ್ ಮೂಲಕ ಉಚಿತ ಪ್ರವೇಶ ನೀಡುವುದಿಲ್ಲ. ಅವರು ₹ 2 ಸಾವಿರದ ಟಿಕೆಟ್ ಪಡೆದು ದರ್ಶನ ಪಡೆಯಬಹುದು. ಇದರಿಂದ ದೇಗುಲದ ಆದಾಯವೂ ಹೆಚ್ಚಲಿದೆ’ ಎಂದು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.
ಆಕ್ಷೇಪ: ‘ ₹2 ಸಾವಿರ ಕೊಟ್ಟರೂ ಎಷ್ಟು ನಿಮಿಷಕ್ಕೆ ದರ್ಶನ ಸಿಗುತ್ತದೆಯೋ ಗೊತ್ತಿಲ್ಲ. ಭಕ್ತಿಯನ್ನು ವ್ಯಾಪಾರ ಮಾಡಿಕೊಳ್ಳುವುದು ಸರಿಯಲ್ಲ. ದರ ಏರಿಕೆಗೆ ಮೊದಲು ಅಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಬೇಕು. ವಿಐಪಿಗಳ ಓಡಾಟಕ್ಕೆ ಕಡಿವಾಣ ಹಾಕಬೇಕು’ ಎಂದು ಸ್ಥಳೀಯರಾದ ಶ್ಯಾಮಸುಂದರ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.