ADVERTISEMENT

ಮೈಸೂರು | ಮನರೇಗಾ ಉಳಿವಿಗೆ ಅಹೋರಾತ್ರಿ ಧರಣಿ: ಉಗ್ರಪ್ಪ, ಎಚ್.ಸಿ.ಮಹದೇವಪ್ಪ ಭಾಗಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 4:28 IST
Last Updated 2 ಫೆಬ್ರುವರಿ 2026, 4:28 IST
ಮೈಸೂರಿನ ಪುರಭವನದ ಎದುರು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ’ ಮರುಸ್ಥಾಪನೆಗೆ ಒತ್ತಾಯಿಸಿ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ನೇತೃತ್ವದಲ್ಲಿ ಭಾನುವಾರ ಅಹೋರಾತ್ರಿ ಸತ್ಯಾಗ್ರಹ ನಡೆಸಿದರು –ಪ್ರಜಾವಾಣಿ ಚಿತ್ರ 
ಮೈಸೂರಿನ ಪುರಭವನದ ಎದುರು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ’ ಮರುಸ್ಥಾಪನೆಗೆ ಒತ್ತಾಯಿಸಿ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ನೇತೃತ್ವದಲ್ಲಿ ಭಾನುವಾರ ಅಹೋರಾತ್ರಿ ಸತ್ಯಾಗ್ರಹ ನಡೆಸಿದರು –ಪ್ರಜಾವಾಣಿ ಚಿತ್ರ    

ಮೈಸೂರು: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ’ ಮರುಸ್ಥಾಪನೆಗೆ ಒತ್ತಾಯಿಸಿ ಇಲ್ಲಿನ ಪುರಭವನದ ಎದುರು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ನೇತೃತ್ವದಲ್ಲಿ ಭಾನುವಾರ ಅಹೋರಾತ್ರಿ ಸತ್ಯಾಗ್ರಹ ನಡೆಸಿದರು. 

‘ಗ್ರಾಮೀಣರು, ಬಡವರು, ಗ್ರಾಮ ಸ್ವರಾಜ್ಯದ ಅಸ್ಮಿತೆಯಾಗಿದ್ದ ಯೋಜನೆ ಹೆಸರನ್ನು ‘ವಿಬಿ ಜಿ ರಾಮ್‌ಜಿ’ ಎಂದು ಬದಲಿಸುವ ಮೂಲಕ ಮಹಾತ್ಮ ಗಾಂಧೀಜಿ ಅವರಿಗೆ ಅವಮಾನ ಮಾಡಿದೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಮುಖಂಡರು ‘ವಂದೇ ಮಾತರಂ’ ಹಾಡಿ, ಸಂವಿಧಾನದ ಪ್ರಸ್ತಾವನೆ ಓದಿದರು. ‘ಮಹಾತ್ಮ ಗಾಂಧೀಜಿ ಚಿಂತನೆ, ಯೋಜನೆ ಚಿರಾಯುವಾಗಲಿ’ ಎಂಬ ಘೋಷಣೆ ಮೊಳಗಿಸಿದರು.

ADVERTISEMENT

ದಿಕ್ಸೂಚಿ ಭಾಷಣ ಮಾಡಿದ ವಿ.ಎಸ್.ಉಗ್ರಪ್ಪ, ‘2005ರಲ್ಲಿ ಮನಮೋಹನ್‌ ಸಿಂಗ್‌ ನರೇಗಾ ಯೋಜನೆ ಜಾರಿಗೊಳಿಸಿದ್ದರು. ಈಗ ಯೋಜನೆಯ ಹೆಸರನ್ನು ಬದಲಿಸಿರುವುದಷ್ಟೇ ಅಲ್ಲ. ನಿಯಮಗಳನ್ನು ಬದಲಿ ಗ್ರಾಮೀಣರ ಹಕ್ಕುಗಳನ್ನು ಕಸಿಯಲಾಗಿದೆ. ಉದ್ಯೋಗ ನೀಡುವುದನ್ನು ಇನ್ನು ಗ್ರಾಮ ಪಂಚಾಯಿತಿಗಳು ನಿರ್ಧರಿಸುವುದಿಲ್ಲ. ಎಲ್ಲವನ್ನೂ ಕೇಂದ್ರ ಸರ್ಕಾರವೇ ತೀರ್ಮಾನಿಸುತ್ತದೆ’ ಎಂದರು. 

‘ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಬೇಕಾದರೆ ಕೊಟ್ಟಂಥ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಆದರೆ, ಕಾಂಗ್ರೆಸ್‌ ಯೋಜನೆಗಳ ಹೆಸರನ್ನು ಬದಲಿಸಿದ್ದೆ ಅವರ ಸಾಧನೆಯಾಗಿದೆ. ಕಪ್ಪುಹಣ ತಂದು ₹ 15 ಲಕ್ಷ ಹಾಕುವ ಬದಲು 15 ಪೈಸೆ ಹಾಕಿಲ್ಲ. ಬೆಲೆ ಏರಿಕೆ ನಿಯಂತ್ರಿಸಲಿಲ್ಲ. ಎಲ್ಲ ಅಗತ್ಯ ವಸ್ತುಗಳ ತುಟ್ಟಿಯಾಗಿವೆ. ಡಾಲರ್ ಎದುರು ರೂಪಾಯಿ ಮೌಲ್ಯ ₹ 92ಕ್ಕೆ ಕುಸಿದಿದೆ’ ಎಂದು ದೂರಿದರು. 

‘ಗಾಂಧಿ ಹೆಸರನ್ನು ತೆಗೆದು ಹಾಕಿರುವ ಕೇಂದ್ರ ಸರ್ಕಾರವು ಈ ಯೋಜನೆಯನ್ನು ನಾಥೂರಾಮ್‌ ಗೋಡ್ಸೆ ಕಾಯ್ದೆಯಂತೆ ರೂಪಿಸಿದೆ. ಗ್ರಾಮ ಪಂಚಾಯಿತಿಗಳ ಸ್ವಾಯತ್ತತೆ ಕಿತ್ತುಕೊಂಡಿದ್ದಾರೆ. ಗಾಂಧಿ– ಅಂಬೇಡ್ಕರ್‌ ವಿಚಾರಧಾರೆ ಎದುರು ಗಾಂಧಿ ಕೊಂದ ಗೋಡ್ಸೆ ವಿಚಾರಧಾರೆಯನ್ನು ಬಿಜೆಪಿ ಜನರಿಗೆ ತಲುಪಿಸುತ್ತಿದೆ. ಮೋದಿ ಹೇಳುವ ಅಚ್ಚೇ ದಿನ್‌ ಯಾವಾಗ ಬರುತ್ತದೆ. ಉದ್ಯೋಗ ಕೇಳಿದರೆ ಪಕೋಡ ಮಾರಿ ಎಂಬ ಹೇಳಿಕೆ ನೀಡುವ ಅವರು ಎಲ್ಲ ಸಾರ್ವಜನಿಕ ಉದ್ಯಮಗಳನ್ನು ಮಾರಾಟ ಮಾಡುತ್ತಿದ್ದಾರೆ. ಶ್ರೀಮಂತರ ಹಿತ ಬಯಸುವ ಪ್ರಧಾನಿಯಾಗಿದ್ದಾರೆ’ ಎಂದು ಟೀಕಿಸಿದರು.   

ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಕೋಟೆ ಎಂ.ಶಿವಣ್ಣ, ಎಂ.ಕೆ.ಸೋಮಶೇಖರ್, ನಂಜುಂಡಸ್ವಾಮಿ, ನಾಗೇಶ್‌, ಈಶ್ವರ ಚಕ್ಕಡಿ, ರಮೇಶ್‌, ಶಿವಣ್ಣ, ರವಿಪ್ರಕಾಶ್‌, ಕೆ.ಮಹೇಶ್‌, ಗಿರೀಶ್‌ ಇದ್ದರು. 

ಧರಣಿ ನಿರತ ಮಹಿಳಾ ಮುಖಂಡರು 

‘ರಾವಣ ರಾಜ್ಯ ಮಾಡುತ್ತಿರುವ ಕೇಂದ್ರ’ 

ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ‘ಬಡವರು ಮಹಿಳೆಯರು ದಲಿತರು ಎಂದಿಗೂ ಶೋಷಣೆಗೆ ಒಳಗಾಗಿರಬೇಕು. ಶ್ರೀಮಂತರ ಅಧೀನದಲ್ಲಿರಬೇಕು ಎಂಬುದು ಬಿಜೆಪಿಯ ಹುನ್ನಾರವಾಗಿದೆ. ಜನರ ಉದ್ಯೋಗ ಕಸಿಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.  ‘ಕೆಲಸದ ದಿನಗಳನ್ನು 125ಕ್ಕೆ ಹೆಚ್ಚಿಸಿ ಹಣ ನೀಡುವ ಕಾಮಗಾರಿ ನಿರ್ಧರಿಸುವ ಕೆಲಸವನ್ನು ಕೇಂದ್ರ ಸರ್ಕಾರವೇ ಮಾಡುತ್ತದೆ. ಇದೊಂದು ರೀತಿ ಸನ್ಯಾಸಿ ವೇಷದಲ್ಲಿ ಬಂದ ರಾವಣನು ಸೀತೆಯನ್ನು ಅಪಹರಿಸಿದಂತೆ ಕೇಂದ್ರವು ಕೆಲಸ ಮಾಡಿದೆ. ರಾಮನ ಹೆಸರಿನಲ್ಲಿ ರಾವಣ ರಾಜ್ಯ ಮಾಡುತ್ತಿದೆ. ಬಿಜೆಪಿಯು ಬಡವರ ಮೇಲೆ ನಡೆಸುತ್ತಿರುವ ಅನ್ಯಾಯವನ್ನು ಕಾಂಗ್ರೆಸ್‌ ಕಾರ್ಯಕರ್ತರು ಹಗಲಿರುಳೆನ್ನೆದೆ ಪ್ರತಿಭಟಿಸಲಿದ್ದಾರೆ’ ಎಂದರು. ‌‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.