
ಮೈಸೂರು: ಗಂಗೋತ್ರಿ ಆವರಣದಲ್ಲೆಲ್ಲಾ ಪ್ರತಿಧ್ವನಿಸುತ್ತಿದ್ದ ಕನ್ನಡದ ಹಾಡುಗಳಿಗೆ ಯುವಕ, ಯುವತಿಯರು ಹುಚ್ಚೆದ್ದು ಕುಣಿದರು, ಕಲಾವಿದರ ನೃತ್ಯ ಭಂಗಿಗಳು ಸಂಭ್ರಮಕ್ಕೆ ಕಿಚ್ಚು ಹಚ್ಚಿತು.
ರಾಜ್ಯದ ವಿವಿಧ ಕಾಲೇಜುಗಳ 58 ತಂಡಗಳು ವಿಭಿನ್ನ ವಿಷಯದಲ್ಲಿ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಸಂಪಾದಿಸಿದರು. ತಮ್ಮಿಷ್ಟದ ನಟರ ಹಾಡು ಬರುತ್ತಿದ್ದಂತೆ ಪ್ರೇಕ್ಷಕರ ವರ್ಗದ ಕೂಗು ಮುಗಿಲು ಮುಟ್ಟಿತು. ಅಂಬೇಡ್ಕರ್, ಅರ್ಜುನ ಆನೆ, ಶ್ರೀ ಕೃಷ್ಣನ ಕಥೆಗಳು ನೃತ್ಯರೂಪಕಗಳಾಗಿ ವೇದಿಕೆಯಲ್ಲಿ ಅನಾವರಣಗೊಂಡಿತು. ಹಾಡಿನ ರಿದಂಗೆ ಸರಿಯಾಗಿ ಯುವ ಸಮೂಹ ಎರಡೂ ಕೈಗಳನ್ನೆತ್ತಿ ಕುಣಿಯಿತು. ಸಂತಸದ ಕ್ಷಣಗಳನ್ನು ಮೊಬೈಲ್ ಕ್ಯಾಮೆರಾಗಳು ಸೆರೆಹಿಡಿದವು.
ತಿಲಕ್ ನಗರದ ಅಂಧ ಮಕ್ಕಳ ಸರ್ಕಾರಿ ಪಾಠ ಶಾಲೆಯ ಮಕ್ಕಳು ‘ಅನುಕಂಪ ಬೇಡ, ಅವಕಾಶ ನೀಡಿ’ ವಿಷಯಾಧಾರಿತವಾಗಿ ಪ್ರದರ್ಶಿಸಿದ ನೃತ್ಯವು ನೆರೆದವರು ಮನಸ್ಸು ಗೆದ್ದಿತು. ‘ನೇತ್ರದಾನ ಮಹಾದಾನ’ ಎಂಬ ಬರಹವುಳ್ಳ ಫಲಕವನ್ನು ಹಿಡಿದಾಗ ಪ್ರೇಕ್ಷಕ ಸಮೂಹವು ಎದ್ದು ನಿಂತು ಚಪ್ಪಾಳೆಯ ಅಭಿನಂದನೆ ಸಲ್ಲಿಸಿತು. ಎಚ್.ಡಿ ಕೋಟೆ ತಾಲ್ಲೂಕಿನ ವಿದ್ಯಾ ಸಿಂಚನ ಕಾಲೇಜು ವಿದ್ಯಾರ್ಥಿಗಳ ಜಾನಪದ ವೈವಿಧ್ಯತೆ, ಹಾಸನದ ಹೊಳೆನರಸೀಪುರ ಎಚ್.ಡಿ.ದೇವೇಗೌಡ ಕಾಲೇಜು ವಿದ್ಯಾರ್ಥಿಗಳ ಶಿವ ತಾಂಡವ ಮನಗೆದ್ದಿತು.
ವಿದ್ಯಾವರ್ಧಕ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಹಾಡಿನ ಮೂಲಕ ಮೈಸೂರು ಸಂಸ್ಥಾನದ ಕೊಡುಗೆಗಳನ್ನು ನೆನೆದರು. ಕೊಡಗಿನ ಬಿಜಿಎಸ್ ಕಾಲೇಜು ವಿದ್ಯಾರ್ಥಿಗಳ ‘ಲೇಲೆಪಾಡಿ’ ಜಾನಪದ ಹಾಡು ಪ್ರೇಕ್ಷಕರ ಸಂತಸ ಇಮ್ಮಡಿಗೊಳಿಸಿತು. ‘ಏಳು ಮಳೆ ಮ್ಯಾಲೇರಿ, ನಿಂತಾನಮ್ಮ ಮಾದೇಶ’, ‘ಗೋವಿಂದ್ ಬೊಲೊ ಹರಿ ಗೋಪಾಲ್ ಬೊಲೊ’ ವಿವಿಧ ತಂಡಗಳ ಪ್ರದರ್ಶನದಲ್ಲಿ ಪುನರಾವರ್ತನೆಗೊಂಡಿತು. ‘ಕರುನಾಡೇ, ಕೈಚಾಚಿದೆ ನೋಡೆ’, ‘ಆಟ ಹುಡುಗಾಟವೂ ಪರಮಾತ್ಮನಾಟವೂ’ ಹಾಡಿಗೆ ನೆರೆದಿದ್ದವರೂ ಧ್ವನಿಗೂಡಿಸಿದರು.
ನಟ ನಟಿಯರ ಮೆರುಗು ಯುವ ಸಂಭ್ರಮದ ಎರಡನೇ ದಿನವೂ ಸ್ಯಾಂಡಲ್‌ವುಡ್ ನಟ ನಟಿಯರು ಸಂಭ್ರಮಕ್ಕೆ ಮೆರುಗು ತುಂಬಿದರು. ಏಳುಮಲೆ ಚಿತ್ರ ತಂಡವು ಮೈಸೂರಿನ ಪ್ರೀತಿ ಕಣ್ತುಂಬಿಕೊಂಡಿತು. ನಟರಾದ ತ್ರಿವಿಕ್ರಮ್ ರಾಣಾ ಮೈಸೂರಿನ ಪ್ರತಿಭೆಗಳಾದ ನಟಿ ಪ್ರಿಯಾಂಕ ಜಗಪ್ಪ ಮಾನಸ ಗಂಗೋತ್ರಿ ಹಳೆ ವಿದ್ಯಾರ್ಥಿ ನಿರ್ದೇಶಕ ಪುನೀತ್ ರಂಗಸ್ವಾಮಿ ಅಭಿಮಾನದ ಹೊಳೆಯಲ್ಲಿ ಮಿಂದೆದ್ದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗಮಿಸಿ ಶುಭಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.