ADVERTISEMENT

ಮೈಸೂರು ದಸರಾ | ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಹಾರದ ಘಮ

ಶುಚಿತ್ವ ಕಾಪಾಡಿ, ಗುಣಮಟ್ಟದ ಆಹಾರ ನೀಡಿ: ಆಹಾರ ಮೇಳ ಉದ್ಘಾಟಿಸಿದ ಸಚಿವ ವಿ.ಸೋಮಣ್ಣ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 16:22 IST
Last Updated 29 ಸೆಪ್ಟೆಂಬರ್ 2019, 16:22 IST
ಆಹಾರ ಮೇಳದಲ್ಲಿ ಬಂಬೂ ಬಿರಿಯಾನಿ ತಯಾರಿಸಿದ್ದನ್ನು ಸಚಿವ ವಿ.ಸೋಮಣ್ಣ ವೀಕ್ಷಿಸಿದರು. ಶಾಸಕ ನಾಗೇಂದ್ರ, ರಾಜೀವ್,ಮಂಜುನಾಥ್‌ ಇತರರು ಇದ್ದರು
ಆಹಾರ ಮೇಳದಲ್ಲಿ ಬಂಬೂ ಬಿರಿಯಾನಿ ತಯಾರಿಸಿದ್ದನ್ನು ಸಚಿವ ವಿ.ಸೋಮಣ್ಣ ವೀಕ್ಷಿಸಿದರು. ಶಾಸಕ ನಾಗೇಂದ್ರ, ರಾಜೀವ್,ಮಂಜುನಾಥ್‌ ಇತರರು ಇದ್ದರು   

ಮೈಸೂರು: ದಸರಾ ಉತ್ಸವ ನೋಡಲು ಬರುವ ಲಕ್ಷಾಂತರ ಪ್ರವಾಸಿಗರು‌ ಆಹಾರ ಮೇಳದ ಒಂದಲ್ಲ ಒಂದು ಮಳಿಗೆಯಲ್ಲಿ ಖಾದ್ಯಗಳ ರುಚಿ ನೋಡುತ್ತಾರೆ. ಅವರು ಮತ್ತೆ ಆಹಾರ ಮೇಳದತ್ತ ಬರುವಂತಾಗಲು ಗುಣಮಟ್ಟದ ಆಹಾರ ನೀಡಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಿದ್ದ ದಸರಾ ಆಹಾರ ಮೇಳ ಉದ್ಘಾಟಿಸಿದ ಅವರು, ಆಹಾರ ಮೇಳ ಎಂದರೆ ಅತಿ‌ ಹೆಚ್ಚಿನ ಸಂಖ್ಯೆಯ ಜನರು ಸೇರುವ ಸ್ಥಳ‌. ಅನ್ನ ನೀಡುವುದು ಪವಿತ್ರ ಕಾಯಕ. ಹಾಗಾಗಿ ಆಹಾರ ಸಮಿತಿಯವರು ಕಲಬೆರಕೆ ಆಹಾರ ನೀಡದಂತೆ ಎಚ್ಚರವಹಿಸಿ, ಶುಚಿ–ರುಚಿಯಾದ ಊಟ– ಉಪಾಹಾರವನ್ನು ಕಡಿಮೆ ಬೆಲೆಯಲ್ಲಿ ನೀಡಿ ಎಂದು ಸಲಹೆ ನೀಡಿದರು.

12 ದಿನ ನಡೆಯುವ ಈ ಕಾರ್ಯಕ್ರಮ ನಗರದ ಭಾರತ್ ಸ್ಕೌಡ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಸುಮಾರು 90 ಮಳಿಗೆಗಳು ಮತ್ತು ಲಲಿತ ಮಹಲ್ ಹತ್ತಿರದ ಮುಡಾ ಮೈದಾನದಲ್ಲಿ 70 ಮಳಿಗೆಗಳು ಸ್ಥಾಪಿಸಲಾಗಿದ್ದು, ವಿಭಿನ್ನ‌ ಆಹಾರ ನೀಡಲಾಗುವುದು ಎಂದರು.

ADVERTISEMENT

ಮಳಿಗೆಯವರು ಗ್ರಾಹಕರೊಂದಿಗೆ ಸಂಯಮದಿಂದ ವರ್ತಿಸಿ, ಸಮಸ್ಯೆಗಳು ಉಂಟಾಗದಂತೆ ಎಚ್ಚರವಹಿಸಿ. ಪ್ರವಾಸಿಗರ ಮನಸೆಳೆಯುವಂತೆ ಆಹಾರ ನೀಡಿ. ಮಾಂಸಾಹಾರಿಗಳು ಬಂಬೂ ಬಿರಿಯಾನಿ, ಸಸ್ಯಾಹಾರಿಗಳು ಬಿದರಕ್ಕಿ ಪಾಯಸ ರುಚಿ ನೋಡಿ. ಇದು ಇಲ್ಲಿಯ ವಿಶೇಷ ಎಂದರು.

ಮಕ್ಕಳಿಗೆ ಹಾಲೂಡಿಸುವ ಕೇಂದ್ರ ಹಾಗೂ ಆಸ್ಪತ್ರೆಯನ್ನು ಉದ್ಘಾಟಿಸಿ, ವಿವಿಧ ಮಳಿಗೆಗಳನ್ನು ‌ವೀಕ್ಷಿಸಿದರು.

ಶಾಸಕ ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಮ್, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ‌ಕಾಳಮ್ಮ‌ ಕೆಂಪರಾಮಯ್ಯ, ಮುಡಾ ಆಯುಕ್ತ ಪಿ.ಎಸ್.ಕಾಂತರಾಜ್, ಆಹಾರ ಸಮಿತಿ ಕಾರ್ಯದರ್ಶಿ ಶಿವಣ್ಣ, ನಾರಾಯಣಗೌಡ, ಉಮೇಶ, ಶಂಭು, ರಾಜೀವ್, ಮಂಜುನಾಥ್, ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.