ಮೈಸೂರು: 7 ಫಿರಂಗಿಗಳಿಂದ ಮೂರು ಸುತ್ತು ಸಿಡಿದ ಮದ್ದಿನ ಶಬ್ಧದ ಮೊರೆತಕ್ಕೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಹಾಗೂ ಅಶ್ವಪಡೆ ಬೆಚ್ಚದೆ ಧೈರ್ಯ ಪ್ರದರ್ಶಿಸಿದವು. ಇದೇ ಮೊದಲು ದಸರೆಗೆ ಬಂದಿರುವ ಆನೆಗಳಾದ ‘ಶ್ರೀಕಂಠ’, ‘ಹೇಮಾವತಿ’ ಹಾಗೂ ‘ರೂಪಾ’ ಆರಂಭದಲ್ಲಿ ಬೆಚ್ಚಿ ನಂತರ ಒಗ್ಗಿಕೊಂಡರು.
ನಗರದ ದಸರಾ ವಸ್ತುಪ್ರದರ್ಶನದ ವಾಹನ ನಿಲ್ದಾಣದ ಅಂಗಳದಲ್ಲಿ ಸೋಮವಾರ ಕುಶಾಲ ತೋಪು ಸಿಡಿಸಲು ಫಿರಂಗಿಗಳನ್ನು ಪೊಲೀಸರು ಅಣಿಗೊಳಿಸಿದ್ದರು. ಅಂಬಾರಿ ಆನೆ ಅಭಿಮನ್ಯು ನೇತೃತ್ವದ 14 ಆನೆಗಳು ಹಾಗೂ ಅಶ್ವಾರೋಹಿ ದಳದ 38 ಕುದುರೆಗಳು ಕುಶಾಲ ತೋಪಿನ ತಾಲೀಮಿನ ಅಂಗಳದತ್ತ ಹೆಜ್ಜೆ ಹಾಕಿದವು.
ಅರಮನೆ ಆನೆ ಬಿಡಾರದಿಂದ ಹೊರಟ ಗಜಪಡೆಯನ್ನು ಎರಡು ವರ್ಷದಿಂದ ಬರುತ್ತಿರುವ ‘ಏಕಲವ್ಯ’ ಮುನ್ನಡೆಸಿದರೆ, ಕೊನೆಯಲ್ಲಿ ಅಂಬಾರಿ ಆನೆ ‘ಅಭಿಮನ್ಯು’ ಇದ್ದು, ಬಲ ತುಂಬಿದನು. ಅಶ್ವದಳ ಪೊಲೀಸರು ಮೊದಲೇ ಫಿರಂಗಿಗಳ ಸುತ್ತ ನಡೆಸಿ ಧೈರ್ಯ ತಂದುಕೊಳ್ಳಲು ವಾಸನೆ ಆಘ್ರಾಣಿಸುವಂತೆ ತರಬೇತಿ ಕೊಟ್ಟರು.
ಏಕಲವ್ಯ, ಅಭಿಮನ್ಯು, ಸುಗ್ರೀವ, ಮಹೇಂದ್ರ, ಭೀಮ, ಕಂಜನ್, ಧನಂಜಯ, ಪ್ರಶಾಂತ, ಗೋಪಿ, ಶ್ರೀಕಂಠ, ಹೇಮಾವತಿ, ಕಾವೇರಿ, ರೂಪಾ, ಲಕ್ಷ್ಮಿ ಒಂದೇ ಸಾಲಿನಲ್ಲಿ ನಿಂತರು. ಸಿಡಿಮದ್ದು ಸಿಡಿಯುವುದಕ್ಕೂ ಮೊದಲು ಎರಡು ಬಾರಿ ಪಟಾಕಿ ಸಿಡಿಸಲಾಯಿತು. ಈ ವೇಳೆ ‘ಶ್ರೀಕಂಠ’, ‘ರೂಪಾ’ ಹಾಗೂ ‘ಹೇಮಾವತಿ’ ಬೆಚ್ಚಿದರು.
ಬೆನ್ನು ಮಾಡಿದ ಶ್ರೀಕಂಠ:
ಫಿರಂಗಿ ಶಬ್ದಕ್ಕೆ ಬೆದರುವ ಧನಂಜಯ, ಕಾವೇರಿ, ಹೇಮಾವತಿ, ಶ್ರೀಕಂಠ, ಸುಗ್ರೀವನ ಮುಂಗಾಲುಗಳಿಗೆ ಸರಪಳಿ ಕಟ್ಟಲಾಗಿತ್ತು. ಇದೇ ಮೊದಲ ಬಾರಿ ಬಂದಿರುವ ದೈತ್ಯ ‘ಶ್ರೀಕಂಠ’ ಪಟಾಕಿಗೆ ಬೆಚ್ಚಿ ಫಿರಂಗಿಗಳಿಗೆ ಬೆನ್ನು ಮಾಡಿ ನಿಂತನು. ಹೇಮಾವತಿಯೂ ಬೆಚ್ಚಿದಳು. ಇಬ್ಬರನ್ನೂ ನೇವರಿಸಲಾಯಿತು.
ಫಿರಂಗಿಗಳಲ್ಲಿ ಮೊದಲ ಸುತ್ತಿನ ಸಿಡಿಮದ್ದು ಸಿಡಿಸುತ್ತಿದ್ದಂತೆ, ಕೆಲವು ಆನೆಗಳು ಬೆದರಿ ಹಿಂದೆ ಮುಂದೆ ಚಲಿಸಲಾರಂಭಿಸಿದವು. ಈ ವೇಳೆ ಮಾವುತರು ಹಾಗೂ ಕಾವಾಡಿಗಳು ಕೆನ್ನೆ ಹಾಗೂ ಸೊಂಡಿಲು ನೇವರಿಸಿ, ಕಬ್ಬು, ಬೆಲ್ಲದ ಹುಲ್ಲು ನೀಡಿ ಸಮಾಧಾನ ಪಡಿಸಿದರು. ‘ಶ್ರೀಕಂಠ’ ಏಕಲವ್ಯ ಹಾಗೂ ಅಭಿಮನ್ಯು ಮಧ್ಯೆ ನಿಂತು ಎರಡನೇ ಸುತ್ತು ಮದ್ದು ಸಿಡಿಸುವ ವೇಳೆಗೆ ಶಬ್ದಕ್ಕೆ ಒಗ್ಗಿಕೊಂಡನು.
ಹಿರಿಯ ಸದಸ್ಯ ‘ಕ್ಯಾಪ್ಟನ್’ ಅಭಿಮನ್ಯು, ಏಕಲವ್ಯ, ಮಹೇಂದ್ರ, ಪ್ರಶಾಂತ ಕೊಂಚವೂ ಬೆದರದೇ ಧೈರ್ಯ ಪ್ರದರ್ಶಿಸಿದರು. ಸಿಡಿಮದ್ದು ತಾಲೀಮಿನ ವೇಳೆ ಆನೆಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಎಡಭಾಗದಲ್ಲಿ ಅಶ್ವದಳದ ಕುದುರೆ ನಿಲ್ಲಿಸಲಾಗಿತ್ತು. ಸಿಡಿಮದ್ದು ಮೊರೆಯುವ ವೇಳೆ ಅಶ್ವದಳದ ಕೆಲ ಕುದುರೆಗಳು ಗಾಬರಿಯಾಗಿ ಕೆನೆದವು. ಮೂರನೇ ಸುತ್ತಿನ ವೇಳೆಗೆ ಶಬ್ದಕ್ಕೆ ಹೊಂದಿಕೊಂಡ ಆನೆಗಳು ಫಿರಂಗಿಯತ್ತ ಹೆಜ್ಜೆ ಹಾಕಿ ಧೈರ್ಯ ಪ್ರದರ್ಶಿಸಿದವು.
ಗಜಪಡೆಗೆ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಪೂಜೆ ಸಲ್ಲಿಸಿದರು. ಪ್ರಾಧಿಕಾರದ ಸಿಇಒ ಕೆ.ರುದ್ರೇಶ್, ಡಿಸಿಪಿಗಳಾದ ಆರ್.ಎನ್.ಬಿಂದುಮಣಿ, ಕೆ.ಎಸ್.ಸುಂದರರಾಜು ಪಾಲ್ಗೊಂಡಿದ್ದರು.
Highlights - ಫಿರಂಗಿಗೆ ಬೆನ್ನುಮಾಡಿ ನಿಂತ ಶ್ರೀಕಂಠ ಕಾವೇರಿ ಜೊತೆಯಾದ ಹೇಮಾವತಿ ಮೊದಲನೇ ಕುಶಾಲತೋಪು ತಾಲೀಮು ಯಶಸ್ವಿ
Quote - ಕುಶಾಲತೋಪು ಅಭ್ಯಾಸದಲ್ಲಿ ಕುದುರೆ ಆನೆಗಳು ಧೈರ್ಯ ಪ್ರದರ್ಶಿಸಿವೆ. ಇನ್ನು ಎರಡು ಅಭ್ಯಾಸಗಳಿದ್ದು ಆ ವೇಳೆಗೆ ಮತ್ತಷ್ಟು ಹೊಂದಿಕೊಳ್ಳಲಿವೆ ಸೀಮಾ ಲಾಟ್ಕರ್ ನಗರ ಪೊಲೀಸ್ ಆಯುಕ್ತೆ
Cut-off box - 10 ಸೆಕೆಂಡ್‌ಗೆ ಒಂದು ಸುತ್ತು! ಜಂಬೂಸವಾರಿ ವೇಳೆ ರಾಷ್ಟ್ರಗೀತೆ ಕೇಳಿಬರುವ 53 ಸೆಕೆಂಡುಗಳಲ್ಲಿ 21 ಬಾರಿ ಕುಶಾಲತೋಪು ಸಿಡಿಸಲಾಗುತ್ತದೆ. 4 ಲಾಂಗ್ ಬ್ಯಾರೆಲ್ ಹಾಗೂ 3 ಶಾರ್ಟ್ ಬ್ಯಾರೆಲ್ ಫಿರಂಗಿಗಳ ಮೂಲಕ 3 ಸುತ್ತಿನಂತೆ ಒಟ್ಟು 21 ಬಾರಿ ಕುಶಾಲತೋಪು ಸಿಡಿಯುತ್ತದೆ. ಗನ್‌ಪೌಡರ್ ಸಿಡಿದ ನಂತರ ಬ್ಯಾರೆಲ್‌ಗೆ ಸಿಂಬವನ್ನು ತೂರಿಸಿ ಬೆಂಕಿ ಕಿಡಿ ಹಾಗೂ ಮದ್ದಿನ ಚೂರನ್ನು ಸ್ವಚ್ಛಗೊಳಿಸುವುದು ಹಾಗೂ ಮದ್ದು ತುಂಬಿದ ಚೀಲವನ್ನು ಹೆಗಲಿಗೆ ಹಾಕಿಕೊಂಡು ಫಿರಂಗಿ ಪಾಯಿಂಟ್‌ಗೆ ಇಡುವ ಕೆಲಸವನ್ನು ಕೆಲವೇ ಸೆಕೆಂಡ್‌ಗಳಲ್ಲಿ 30 ಸಿಬ್ಬಂದಿ ಮಾಡಿದರು. 10 ಸೆಕೆಂಡ್‌ನಲ್ಲಿ ಒಂದು ಸುತ್ತಿನ ಸಿಡಿತ ನಡೆಯಿತು. ಅತ್ಯಂತ ಕಠಿಣ ಹಾಗೂ ಸವಾಲಿನ ಕೆಲಸವಾಗಿದ್ದು ಬ್ಯಾರೆಲ್ ಒಳಗೆ ಒಂದು ಸಣ್ಣ ಕಿಡಿ ಉಳಿದುಕೊಂಡರೂ ಗನ್‌ಪೌಡರ್ ಹಾಕಿದ ತಕ್ಷಣವೇ ಸ್ಫೋಟಗೊಳ್ಳುವ ಸಂಭವ ಇರುತ್ತದೆ. ಹೀಗಾಗಿಯೇ ಭಾಗವಹಿಸುವ ಎಲ್ಲ ಸಿಬ್ಬಂದಿಗೂ ನಗರ ಸಶಸ್ತ್ರ ಮೀಸಲು ದಳ ವಿಶೇಷ ವಿಮೆ ಮಾಡಿಸಿತ್ತು ಕೈಗವಸು ವಿಶೇಷ ಸಮವಸ್ತ್ರ ನೀಡಿತ್ತು.
Cut-off box - ಉತ್ತಮವಾಗಿ ಸ್ಪಂದಿಸಿವೆ: ಪ್ರಭುಗೌಡ ‘ಅರಣ್ಯ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಮೊದಲನೇ ಹಂತದ ಕುಶಾಲತೋಪು ತಾಲೀಮು ಮಾಡಿಸಿದ್ದು ಯಶಸ್ವಿಯಾಗಿದೆ. 14 ಆನೆಗಳೂ ಉತ್ತಮ ರೀತಿಯಲ್ಲಿ ಸ್ಪಂದಿಸಿ ಗಾಬರಿಯಾಗದೇ ಧೈರ್ಯ ಪ್ರದರ್ಶಿಸಿವೆ’ ಎಂದು ಡಿಸಿಎಫ್ ಐ.ಬಿ.ಪ್ರಭುಗೌಡ ಹೇಳಿದರು. ‘ಮೊದಲು ಸಿಡಿದಾಗ ಶ್ರೀಕಂಠ ಹೇಮಾವತಿ ರೂಪಾ ಸ್ವಲ್ಪ ಬೆಚ್ಚಿದರು. ಶ್ರೀಕಂಠ ಶಬ್ದವಾದಾಗಲೆಲ್ಲ ಬೆನ್ನುಮಾಡಿ ನಿಲ್ಲುವುದು ಅವನ ಹವ್ಯಾಸ. ಹೇಮಾವತಿಯು ಕಾವೇರಿಗೆ ಜೊತೆಯಾಗಿ ನಿಂತು ಸಾವರಿಸಿಕೊಂಡಳು. ಇನ್ನೂ ಎರಡು ಹಂತದಲ್ಲಿ ಕುಶಾಲತೋಪು ನಡೆಯಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.