ಶಾಸಕ ಟಿ.ಎಸ್.ಶ್ರೀವತ್ಸ ಸೇರಿ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿದರು
ಮೈಸೂರು: ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಿಸಲು ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿರುವ ಚಾಮುಂಡಿ ಬೆಟ್ಟ ಚಲೋಗೆ ಬೆಂಬಲಿಸಿ ಆಗಮಿಸಿದ ಶಾಸಕ ಟಿ.ಎಸ್.ಶ್ರೀವತ್ಸ ಸಹಿತ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿದರು.
ಕುರುಬಾರಹಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿದ ಶಾಸಕರು ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ‘ಯಾವುದೇ ಸೆಕ್ಷನ್ ಹಾಕದಿದ್ದರೂ ರಸ್ತೆ ಬದಿಯಲ್ಲಿದ್ದವರನ್ನು ಏಕೆ ಬಂಧಿಸುತ್ತಿದ್ದೀರಿ’ ಎಂದು ಪ್ರಶ್ನಿಸಿದರು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಸಂದೇಶ್ ಸ್ವಾಮಿ, ಸುಶ್ರುತ್ ಗೌಡ ಸೇರಿದಂತೆ ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿವಿಲ್, ನಗರ ಸಶಸ್ತ್ರ ಪಡೆ, ಕಮಾಂಡೋ ದಳ, ಚಾಮುಂಡಿ ಪಡೆಯ ಸುಮಾರು 500 ಪೊಲೀಸರನ್ನು ನಿಯೋಜಿಸಲಾಗಿದೆ.
ಹಿಂದೂ ಮುಖಂಡರು, ಕಾರ್ಯಕರ್ತರ ವಶ
ಮೈಸೂರು: ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಿಸಲು ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿರುವ ಚಾಮುಂಡಿ ಬೆಟ್ಟ ಚಲೋಗೆ ಗುಂಪು- ಗುಂಪಾಗಿ ಆಗಮಿಸಿದ ಹಿಂದೂ ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಸಿಎಆರ್ ಮೈದಾನಕ್ಕೆ ಕರೆದೊಯ್ದರು.
ಕುರುಬಾರಹಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ತಾವರೆ ಕೆರೆಯಲ್ಲಿ ಬಿಗಿ ಭದ್ರತೆ ಕೈಗೊಂಡ ಪೊಲೀಸರು ಪ್ರತಿಭಟನಾಕಾರರು ಗುಂಪು ಸೇರಿಸುತ್ತಿದ್ದಂತೆ ಬಂಧಿಸಿದರು.
ಕೇಸರಿ ಶಾಲು ಧರಿಸಿ ಚಾಮುಂಡೇಶ್ವರಿ ದೇವಿಗೆ ಜಯಘೋಷ ಹಾಕುತ್ತಾ ಚಾಮುಂಡಿ ಬೆಟ್ಟದ ಕಡೆ ನುಗ್ಗಲು ಯತ್ನಿಸಿದರು. ಪೊಲೀಸರು ತಡೆದಾಗ ರಸ್ತೆಯಲ್ಲೇ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. 'ಹಿಂದೂ ವಿರೋಧಿ ನೀತಿಗೆ ಧಿಕ್ಕಾರ', 'ಸಿದ್ದಾರಾಮುಲ್ಲಾಖಾನ್‌ಗೆ ಧಿಕ್ಕಾರ', 'ಜಿಹಾದಿ ಮನಸ್ಥಿತಿಗೆ ಧಿಕ್ಕಾರ', 'ನಮ್ಮದು ನಮ್ಮದು, ಚಾಮುಂಡಿ ನಮ್ಮದು' ಇತ್ಯಾದಿ ಘೋಷಣೆ ಕೂಗಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಎಲ್ಲರನ್ನೂ ಬಂಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.