ಮೈಸೂರು: ತ್ಯಾಜ್ಯಗಳಿಂದ ಕಲಾಕೃತಿ ನಿರ್ಮಾಣದ ಮೂಲಕ ದಸರೆಗೆ ಬರುವವರಲ್ಲಿ ಸ್ವಚ್ಛತೆ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಮೈಸೂರು ಅರಮನೆ, ಅಂಬಾರಿ ಮತ್ತು ಸ್ವಚ್ಛತೆಯ ಪ್ರತಿನಿಧಿಯಾದ ಪೌರ ಕಾರ್ಮಿಕ ಮಹಿಳೆಯ ಕಲಾಕೃತಿಗಳು ಮೂಡಿಬರಲಿವೆ.
ಪಾಲಿಕೆಯ ವಲಯ ಕಚೇರಿ 3ರ ಸಭಾಂಗಣದಲ್ಲಿ ಬುಧವಾರ ನಡೆದ ದಸರಾ ಸ್ವಚ್ಛತೆ ಸಂಬಂಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೃತ್ಯುಂಜಯ ಈ ವಿಷಯ ತಿಳಿಸಿದರು.
‘ದಸರೆಯ ಸಂದರ್ಭ ಸ್ವಚ್ಛತೆಗೆ ಆದ್ಯತೆ ನೀಡಲಿದ್ದು, ನಗರದ ಹೃದಯ ಭಾಗದಲ್ಲಿ ಕಲಾಕೃತಿಗಳ ಮೂಲಕ ಪ್ರವಾಸಿಗರ ಗಮನ ಸೆಳೆಯಲಾಗುವುದು. ಎಲ್ಲೆಂದರಲ್ಲಿ ಕಸ ಹಾಕದಂತೆ ಜನರಲ್ಲಿ ಅರಿವು ಮೂಡಿಸಲಾಗುವುದು’ ಎಂದರು.
‘ನಗರದಲ್ಲಿ ಉತ್ಪಾದನೆಯಾಗುವ ಒಣ ಕಸವನ್ನು ವಿಲೇವಾರಿ ಮಾಡಲು ಖಾಸಗಿ ಪಾನೀಯ ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದ್ದು, ಸಂಸ್ಥೆಯ ಸ್ವಯಂ ಸೇವಕರು ಒಣ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಿದ್ದಾರೆ’ ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ನಾನಾ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ದಸರಾ ವೇಳೆ ಮೈಸೂರು ನಗರದ ಸ್ವಚ್ಛತೆಗೆ ನಾನಾ ಸಲಹೆ ಸೂಚನೆಗಳನ್ನು ನೀಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ ದಂಡದ ಮೂಲಕ ಬಿಸಿ ಮುಟ್ಟಿಸಬೇಕು. ಸ್ವಚ್ಛತೆ ಸಂಬಂಧ ನಿರಂತರವಾಗಿ ಜಾಗೃತಿ ಅಭಿಯಾನ ನಡೆಸಬೇಕು ಎಂದರು.
ಸ್ವಚ್ಛತಾ ಪೋಸ್ಟರ್ ಅನ್ನು ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಬಿಡುಗಡೆ ಮಾಡಿದರು. ಪಾಲಿಕೆ ಉಪ ಆಯುಕ್ತ ದಾಸೇಗೌಡ, ಆರೋಗ್ಯಾಧಿಕಾರಿ ಡಾ. ನಾಗರಾಜು, ವಲಯ ಆಯುಕ್ತ ಸತ್ಯಮೂರ್ತಿ, ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಮೈಸೂರು ಗ್ರಾಹಕರ ಪರಿಷತ್‌ನ ಭಾಮಿ ಶೆಣೈ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು, ಆಮ್ ಆದ್ಮಿ ಪಾರ್ಟಿಯ ಮಾಳವಿಕಾ ಗುಬ್ಬಿವಾಣಿ, ಪಾರಂಪರಿಕ ತಜ್ಞ ಪ್ರೊ.ರಂಗರಾಜು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.