ADVERTISEMENT

ಮೈಸೂರು ದಸರಾ: ಗಜಪಡೆಗೆ ಭಾವಪೂರ್ಣ ಬೀಳ್ಕೊಡುಗೆ

ಎರಡು ತಿಂಗಳ ನಗರವಾಸದ ಬಳಿಕ ಕಾಡಿಗೆ ಮರಳಿದ ಆನೆಗಳು: ಕಣ್ಣೀರಿಟ್ಟ ಮಕ್ಕಳು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 5:13 IST
Last Updated 6 ಅಕ್ಟೋಬರ್ 2025, 5:13 IST
<div class="paragraphs"><p>ಮೈಸೂರಿನ ಅರಮನೆಯಲ್ಲಿ ಭಾನುವಾರ ಗಜಪಡೆಗೆ ಬೀಳ್ಕೊಡುಗೆಗೂ ಮುನ್ನ ಪೂಜೆ ಸಲ್ಲಿಸಲಾಯಿತು</p></div>

ಮೈಸೂರಿನ ಅರಮನೆಯಲ್ಲಿ ಭಾನುವಾರ ಗಜಪಡೆಗೆ ಬೀಳ್ಕೊಡುಗೆಗೂ ಮುನ್ನ ಪೂಜೆ ಸಲ್ಲಿಸಲಾಯಿತು

   

–ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.

ಮೈಸೂರು: ಕಳೆದೆರಡು ತಿಂಗಳಿಂದ ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿದ್ದ ಗಜಪಡೆಯು ಭಾನುವಾರ ಮರಳಿ ಕಾಡಿನತ್ತ ಪ್ರಯಾಣ ಬೆಳೆಸಿತು. ಸೊಂಡಿಲನ್ನೆತ್ತಿ ನಮಿಸುತ್ತ ‘ಮತ್ತೆ ಬರುವೆವು’ ಎನ್ನುತ್ತ ಹೊರಟಿತು.

ADVERTISEMENT

ಎರಡು ತಂಡಗಳಾಗಿ ಬಂದು, ಯಾವುದೇ ಗದ್ದಲವಿಲ್ಲದೆಯೇ ದಸರಾ ಜಂಬೂಸವಾರಿ ಯಶಸ್ವಿಗೊಳಿಸಿದ 14 ಆನೆಗಳಿಗೆ ಬೆಳಿಗ್ಗೆ ಅರಮನೆಯಲ್ಲಿನ ಆನೆ ಬಿಡಾರದಲ್ಲಿನ ಆವರಣದಲ್ಲಿ ಮಜ್ಜನ ನಡೆಯಿತು. ಸಾಲಾಗಿ ನಿಲ್ಲಿಸಿ ಪ್ರಹ್ಲಾದ ರಾವ್‌ ನೇತೃತ್ವದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ನಂತರದಲ್ಲಿ ಹಣ್ಣು ತಿನ್ನಿಸಲಾಯಿತು. ಹೊರಡುವ ಸೂಚನೆ ಸಿಗುತ್ತಿದ್ದಂತೆಯೇ ಆನೆಗಳೆಲ್ಲ ಒಟ್ಟಿಗೇ ಸೊಂಡಿಲನ್ನೆತ್ತಿ ನೆರೆದವರಿಗೆಲ್ಲ ನಮಿಸಿ, ನಗರದೊಳಗಿನ ಆತಿಥ್ಯಕ್ಕೆ ವಂದಿಸಿದವು.

ಆನೆಗಳನ್ನು ಬೀಳ್ಕೊಡಲೆಂದೇ ಬೆಳಿಗ್ಗೆಯಿಂದಲೇ ನೂರಾರು ಮಂದಿ ಅರಮನೆ ಅಂಗಳಕ್ಕೆ ಬಂದಿದ್ದರು. ಪೊಲೀಸರೂ ಯಾರಿಗೂ ತಡೆಯೊಡ್ಡದೆಯೇ ‘ಮುಕ್ತ ಪ್ರವೇಶ’ ನೀಡಿದ ಕಾರಣ ಕ್ರಮೇಣ ಗಜಪ್ರಿಯರ ಸಂಖ್ಯೆ ಏರುತ್ತಲೇ ಹೋಯಿತು. ಕೆಲವರಂತೂ ಆನೆಗಳನ್ನು ಮುಟ್ಟಿ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಾಗ ಮಾವುತರು– ಅರಣ್ಯ ಇಲಾಖೆ ಸಿಬ್ಬಂದಿ ಗದರಬೇಕಾಯಿತು.

‘ಪ್ರಶಾಂತ’, ‘ಗೋಪಿ’, ‘ಧನಂಜಯ’, ‘ಕಂಜನ್‌’, ‘ಸುಗ್ರೀವ’, ‘ಶ್ರೀಕಂಠ’, ‘ಏಕಲವ್ಯ’, ‘ಭೀಮ’ ಹೀಗೆ ಒಂದೊಂದೇ ಗಂಡಾನೆಗಳು ನಾಜೂಕಾಗಿ ಲಾರಿ ಏರಿದವು. ಹಿಂದಿನ ವರ್ಷದಂತೆ ಹೆಚ್ಚು ಹಟ ಮಾಡಲಿಲ್ಲ. ಕ್ಯಾಪ್ಟನ್‌ ‘ಅಭಿಮನ್ಯು’ ಸಹ ತನಗೆಂದೇ ಸಿದ್ಧಪಡಿಸಿದ್ದ ವಿಶೇಷ ವಾಹನ ಹತ್ತಿ, ಆಗಾಗ್ಗೆ ಸೊಂಡಿಲು ಈಚೆಗೆ ಇಳಿಬಿಟ್ಟು ಧನ್ಯವಾದ ಹೇಳಿದ. ಹೆಣ್ಣಾನೆಗಳ ಪೈಕಿ ‘ಕಾವೇರಿ’, ‘ರೂಪಾ’ ಸಲೀಸಾಗಿ ಲಾರಿ ಹತ್ತಿದರೆ ‘ಹೇಮಾವತಿ’ ಮಾತ್ರ ಕೊಂಚ ಮುನಿಸಿಕೊಂಡು ಲಾರಿ ಏರಲು ತುಸು ಹಟಮಾಡಿತು.

ಆನೆಗಳು ಹೊರಡುವ ಸಮಯವಾದಾಗ ಎಲ್ಲರ ಕಣ್ಣಾಲೆಗಳು ತುಂಬಿ ಬಂದವು. ಅದರಲ್ಲೂ ಕೆಲ ಮಕ್ಕಳು ಕಣ್ಣೀರಿಟ್ಟರು. ‘ಅಭಿಮನ್ಯು, ಭೀಮ ವಿ ಲವ್‌ ಯೂ’ ಎಂದು ಘೋಷಣೆ ಕೂಗಿದರು. ಕೆಲವರು ಬಾಳೆ–ಸೇಬು ಮೊದಲಾದ ಹಣ್ಣುಗಳನ್ನು ತಂದು ತಮ್ಮಿಷ್ಟದ ಆನೆಗಳಿಗೆ ನೀಡಿದರು. ಅಭಿಮನ್ಯುವಿನ ಜೊತೆಗಿದ್ದ ಕಾಡಿನ ಮಕ್ಕಳು ಆತನ ಸಾಹಸಗಾಥೆಯ ಕುರಿತ ಹಾಡು ಹಾಡುತ್ತಾ, ಕೈಯಲ್ಲಿ ಆನೆಯ ಚಿತ್ರಪಟ ಹಿಡಿದು ಬೀಸುತ್ತಿದ್ದರು. ಆನೆಗಳೊಟ್ಟಿಗೆ ಬಂದಿದ್ದ ಮಾವುತರು–ಕಾವಾಡಿಗಳು ಮತ್ತವರ ಕುಟುಂಬದವರೂ ಭಾರದ ಮನಸ್ಸಿನಿಂದಲೇ ಹೊರಟರು.

ಅರಮನೆ ಬಿಡಾರದಲ್ಲೇ ಕಾಯಂ ನೆಲೆಸಿರುವ ಹೆಣ್ಣಾನೆಗಳು ತಮ್ಮ ಸಂಗಾತಿಗಳನ್ನು ಬೀಳ್ಕೊಟ್ಟವು. ಜಯಮಾರ್ತಾಂಡ ದ್ವಾರದ ಮುಂಭಾಗವೂ ನೂರಾರು ಮಂದಿ ನಿಂತು ಆನೆಗಳಿಗೆ ಭಾವುಕ ವಿದಾಯ ಹೇಳಿದರು. ಅಲ್ಲಿಂದ ಗಜಪಡೆಯು ತಮ್ಮ ಶಿಬಿರಗಳಿಗೆ ಪ್ರಯಾಣಿಸಿತು.

ಯಾವ ಆನೆ ಎಲ್ಲಿಗೆ?

6ನೇ ಬಾರಿ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಎಲ್ಲರ ನೆಚ್ಚಿನ ಭೀಮ ಮಹೇಂದ್ರ ಹಾಗೂ ಖಾಸಗಿ ದರ್ಬಾರ್‌ನ ಪಟ್ಟದ ಆನೆ ಶ್ರೀಕಂಠ ಮತ್ತಿಗೋಡು ಆನೆ ಶಿಬಿರಕ್ಕೆ ವಾಪಸ್ ಆದವು. ನಿಶಾನೆ ಆನೆಯಾಗಿದ್ದ ಧನಂಜಯನ ಜೊತೆಗೆ ಗೋಪಿ ಕಂಜನ್‌ ಪ್ರಶಾಂತ ಸುಗ್ರೀವ ಹೆಣ್ಣಾನೆಗಳಾದ ಹೇಮಾವತಿ ಕಾವೇರಿ ದುಬಾರೆ ಶಿಬಿರಕ್ಕೆ ತಲುಪಿದವು. ಏಕಲವ್ಯ ದೊಡ್ಡಹರವೆ ಶಿಬಿರಕ್ಕೆ ಲಕ್ಷ್ಮಿ ಬಳ್ಳೆ ಶಿಬಿರಕ್ಕೆ ಹಾಗೂ ರೂಪಾ ಭೀಮನಕಟ್ಟೆ ಶಿಬಿರ ತಲುಪಿದವು. 

ಜಂಬೂಸವಾರಿಯಲ್ಲಿ ಪಾಲ್ಗೊಂಡ 14 ಆನೆಗಳನ್ನೂ ಬೀಳ್ಕೊಟ್ಟಿದ್ದು ಭಾನುವಾರ ಸಂಜೆ ವೇಳೆಗೆ ಶಿಬಿರ ತಲುಪಿದವು.
-ಪ್ರಭುಗೌಡ, ಡಿಸಿಎಫ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.