ADVERTISEMENT

Dasara 2025: ಜಂಬೂಸವಾರಿಗೆ ಭರದ ತಯಾರಿ

ಎಂ.ಮಹೇಶ
Published 1 ಅಕ್ಟೋಬರ್ 2025, 0:01 IST
Last Updated 1 ಅಕ್ಟೋಬರ್ 2025, 0:01 IST
   

ಮೈಸೂರು: 11 ದಿನ ಸಂಭ್ರಮದ ಹೊನಲು ಹರಿಸಿದ ನಾಡಹಬ್ಬ ‘ಮೈಸೂರು ದಸರಾ’ ಮಹೋತ್ಸವದ ಪ್ರಮುಖ ಆಕರ್ಷಣೆ ‘ಜಂಬೂಸವಾರಿ’ಯು ವಿಜಯದಶಮಿಯ ದಿನವಾದ ಗುರುವಾರ (ಅ.2) ನಡೆಯಲಿದ್ದು, ಜಿಲ್ಲಾಡಳಿತ ಅಂತಿಮ ಹಂತದ ತಯಾರಿ ನಡೆಸಿದೆ. 

ಅರಮನೆ ನಗರಿಯ ರಾಜಮಾರ್ಗದಲ್ಲಿ ಸಾಗುವ ‘ಪರಂಪರೆಯ ರಥ’ವನ್ನು ವೀಕ್ಷಿಸಲು ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಸಂಪ್ರದಾಯ ಬಿಂಬಿಸುವ ಮೆರವಣಿಗೆ ವೀಕ್ಷಿಸಲು ದೇಶ–ವಿದೇಶಗಳ ಪ್ರವಾಸಿಗರು ಉತ್ಸುಕರಾಗಿದ್ದಾರೆ. ಹಲವು ರೀತಿಯಲ್ಲಿ ‘ತಾಲೀಮು’ ನಡೆಸಿ ಸಜ್ಜಾಗಿರುವ ಗಜಪಡೆಯು ಮೆರವಣಿಗೆಯ ಮೆರುಗು ಹೆಚ್ಚಿಸಲಿದೆ. ಸಾಂಸ್ಕೃತಿಕ ವೈಭವ ಬಿಂಬಿಸಲು ಕಲಾತಂಡಗಳು ಹಾಗೂ ರಾಜ್ಯದ ಸಾಧನೆ–ಸೌಹಾರ್ದದ ಸಂದೇಶ ಸಾರಲು ಸ್ತಬ್ಧಚಿತ್ರಗಳು ಸಜ್ಜಾಗಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಮಧ್ಯಾಹ್ನ 1ರಿಂದ 1.18ರವರೆಗೆ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನೆರವೇರಿಸಿ ಚಾಲನೆ ನೀಡುವರು. ಸಂಜೆ 4.42ರಿಂದ 5.06ರವರೆಗೆ ಅಂಬಾವಿಲಾಸ ಅರಮನೆ ಆವರಣದಲ್ಲಿ ಗಜಪಡೆಯ ಕ್ಯಾಪ್ಟನ್‌ ‘ಅಭಿಮನ್ಯು’ ಹೊರಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನ ಚಾಮುಂಡೇಶ್ವರಿದೇವಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವರು.

ADVERTISEMENT

ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಕೆ.ವೆಂಕಟೇಶ್ ಹಾಗೂ ಶಿವರಾಜ್ ಎಸ್.ತಂಗಡಗಿ ಪಾಲ್ಗೊಳ್ಳಲಿದ್ದಾರೆ.

ಆಸನಗಳು ಕಡಿತ, ನಿರ್ಬಂಧ

ಅರಮನೆ ಆವರಣದಲ್ಲಿ, ಅತಿ ಗಣ್ಯರು, ಗಣ್ಯರು, ‘ಗೋಲ್ಡ್‌ ಕಾರ್ಡ್’ ಹಾಗೂ ಟಿಕೆಟ್ ಉಳ್ಳವರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದ ಪರಿಣಾಮ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅರಮನೆ ಆವರಣದಲ್ಲಿ ಆಸನಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. 11 ಸಾವಿರ ಕುರ್ಚಿಗಳು ಕಡಿಮೆಯಾಗಿವೆ. ‘ಪಾಸ್‌ ಇಲ್ಲದವರಿಗೆ ಪ್ರವೇಶ ನೀಡುವುದಿಲ್ಲ’ ಎಂದು ಪೊಲೀಸ್ ಇಲಾಖೆ ತಿಳಿಸಿದ್ದು, ಕಟ್ಟಡಗಳು ಮತ್ತು ಮರಗಳ ಮೇಲೇರಿ ವೀಕ್ಷಿಸುವುದಕ್ಕೂ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ.

ಮೆರವಣಿಗೆಯು ಐದು ಕಿ.ಮೀ. ಅಂತರ ಕ್ರಮಿಸಿ ಬನ್ನಿಮಂಟಪ ತಲುಪಲಿದೆ. ಸಂಜೆ 7ಕ್ಕೆ ಪಂಜಿನ ಕವಾಯತು ನಡೆಯಲಿದ್ದು, ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಗೌರವವಂದನೆ ಸ್ವೀಕರಿಸುವರು. ಈ ಪ್ರದರ್ಶನದೊಂದಿಗೆ ನಾಡಹಬ್ಬಕ್ಕೆ ತೆರೆ ಬೀಳಲಿದೆ.

ಅರಮನೆಯಲ್ಲಿ, ಯದುವಂಶದ ಸಂಪ್ರದಾಯದಂತೆ ‘ಖಾಸಗಿ ದರ್ಬಾರ್’ ನಡೆಸುತ್ತಿರುವ ರಾಜವಂಶಸ್ಥ ಯದುವೀರ್ ಬುಧವಾರ ಆಯುಧಪೂಜೆ ಹಾಗೂ ಗುರುವಾರ ವಿಜಯದಶಮಿ ಮೆರವಣಿಗೆ ನಡೆಸುವರು. ವಜ್ರಮುಷ್ಠಿ ಕಾಳಗವೂ ನಡೆಯಲಿದೆ.  

ಅಂಬಾವಿಲಾಸ ಅರಮನೆ ಆವರಣದಲ್ಲಿ ಮಂಗಳವಾರ ‘ಅಂತಿಮ ಹಂತದ ಜಂಬೂಸವಾರಿ ತಾಲೀಮು’ ಯಶಸ್ವಿಯಾಗಿ ನಡೆಯಿತು ಗಜಪಡೆ, ಅಶ್ವಾರೋಹಿದಳ, ಪೊಲೀಸ್ ತುಕಡಿಗಳು ಪಾಲ್ಗೊಂಡವು. ಅ.2ರ ಮೆರವಣಿಗೆಗೆ ಪೂರ್ವಭಾವಿಯಾಗಿ ಈ ಅಭ್ಯಾಸ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.