ADVERTISEMENT

ಮೈಸೂರು: ದಸರಾ ಮೆರುಗಿಗೆ ಕಾರ್ಮಿಕರು, ಕಲಾವಿದರ ‘ಶ್ರಮ’

ವಸ್ತುಪ್ರದರ್ಶನದಲ್ಲಿ ಮಳಿಗೆ, ಜಂಬೂಸವಾರಿಗಾಗಿ ಸ್ತಬ್ಧಚಿತ್ರದಲ್ಲಿ ‘ಕೈಚಳಕ’

ಎಂ.ಮಹೇಶ್
Published 27 ಸೆಪ್ಟೆಂಬರ್ 2025, 4:20 IST
Last Updated 27 ಸೆಪ್ಟೆಂಬರ್ 2025, 4:20 IST
ಮೈಸೂರಿನ ಬಂಡೀಪಾಳ್ಯದಲ್ಲಿ ಕಲಾವಿದರು ಹಾಗೂ ಕಾರ್ಮಿಕರು ಸ್ತಬ್ಧಚಿತ್ರ ತಯಾರಿಯಲ್ಲಿ ತೊಡಗಿದ್ದಾರೆ
ಮೈಸೂರಿನ ಬಂಡೀಪಾಳ್ಯದಲ್ಲಿ ಕಲಾವಿದರು ಹಾಗೂ ಕಾರ್ಮಿಕರು ಸ್ತಬ್ಧಚಿತ್ರ ತಯಾರಿಯಲ್ಲಿ ತೊಡಗಿದ್ದಾರೆ   

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಮೆರುಗು ಹೆಚ್ಚಿಸಲು ಕಲಾವಿದರ ಶ್ರಮದ ಕೊಡುಗೆಯೂ ಇದೆ.

ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಹಾಗೂ ಮೂರು ತಿಂಗಳವರೆಗೆ ನಡೆಯಲಿರುವ ‘ದಸರಾ ವಸ್ತುಪ್ರದರ್ಶನ’ದಲ್ಲಿ ಸರ್ಕಾರದ ವಿವಿಧ ಇಲಾಖೆಗಳ, ನಿಗಮಗಳ, ಮಂಡಳಿಗಳ ಮಳಿಗೆಗಳನ್ನು ಚಂದಗೊಳಿಸುವಲ್ಲಿ ಕಲಾವಿದರ ಸೃಜನಶೀಲತೆ ಕೆಲಸ ಮಾಡಿದೆ. ಜೊತೆಗೆ, ಅ.2ರ ವಿಜಯದಶಮಿಯಂದು ನಡೆಯಲಿರುವ ಜಂಬೂಸವಾರಿಯ ಸ್ತಬ್ಧಚಿತ್ರಗಳಿಗೆ ರೂಪ ಕೊಡುವುದಕ್ಕಾಗಿಯೂ ಕಲಾವಿದರು ಹಾಗೂ ನೂರಾರು ಶ್ರಮಿಕರು ಬೆವರು ಹರಿಸುತ್ತಿದ್ದಾರೆ.

ಇಲ್ಲಿನ ಬಂಡೀಪಾಳ್ಯದಲ್ಲಿರುವ ಎಪಿಎಂಸಿ ಆವರಣದಲ್ಲಿ ವಿವಿಧ ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳ ವತಿಯಿಂದ ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ವಿವಿಧ ಜಿಲ್ಲೆಗಳ ಕಲಾವಿದರ ದಂಡೇ ಇಲ್ಲಿಗೆ ಬಂದಿದೆ.

ADVERTISEMENT

‘ಜೀವ ತುಂಬಿದ ಸ್ತಬ್ಧಚಿತ್ರ’ಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಗಮನಸೆಳೆಯುವಂತೆ ಮಾಡುವುದಕ್ಕಾಗಿ ಸ್ತಬ್ಧಚಿತ್ರಗಳ ತಯಾರಿಯಲ್ಲಿ ಕಲಾವಿದರು ತೊಡಗಿದ್ದಾರೆ. ಹಲವು ದಿನಗಳಿಂದಲೂ ಇಲ್ಲಿ ತಂಗಿರುವ ಅವರು, ಅಂತಿಮ ರೂಪ ಕೊಡುವುದರಲ್ಲಿ ತಲ್ಲೀನರಾಗಿದ್ದಾರೆ. ಅವರಿಗೆ, ಹಲವು ಮಂದಿ ಕಾರ್ಮಿಕರು ಸಹಾಯ ಮಾಡುತ್ತಿದ್ದಾರೆ. ಇಲಾಖೆಗಳಿಂದ ನೀಡಿದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಅವರೆಲ್ಲರೂ ಶ್ರಮಿಸುತ್ತಿದ್ದಾರೆ.

ಚಂದದ ವಿನ್ಯಾಸಕ್ಕಾಗಿ: ವಿನೂತನ, ಆಕರ್ಷಕ ಹಾಗೂ ಯಶಸ್ಸಿನ ಕಥೆಗಳನ್ನು ಹೇಳುವ ವಿನ್ಯಾಸ ಹೊಂದಿರುವ ಸ್ತಬ್ಧಚಿತ್ರಗಳನ್ನು ತಯಾರಿಸುವಂತೆ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಈ ಬಾರಿ ಗಾಂಧಿ ಜಯಂತಿಯಂದೇ ಜಂಬೂಸವಾರಿ ನಡೆಯುತ್ತಿರುವುದರಿಂದ ‘ಗಾಂಧಿ ಪಥ’ವನ್ನು ಕಟ್ಟಿಕೊಡುವುದಕ್ಕೆ ಯೋಜಿಸಲಾಗಿದೆ. ಆ ಪರಿಕಲ್ಪನೆಯ ಮೇಲೆ ಕಲಾವಿದರು ಕೆಲಸ ಮಾಡುತ್ತಿದ್ದಾರೆ.

ಈ ಬಾರಿ ವಿಶೇಷವಾಗಿ, ಎಚ್‌ಎಎಲ್‌, ಎಚ್‌ಎಂಟಿ, ಏರ್‌ಫೋರ್ಸ್‌, ಮೈಸೂರು ಆಕಾಶವಾಣಿ– 90 ವರ್ಷದ ಸಂಭ್ರಮ ಬಿಂಬಿಸುವುದು, ರಾಜೀವ್‌ಗಾಂಧಿ ವಿಜ್ಞಾನಗಳ ವಿಶ್ವವಿದ್ಯಾಲಯ, ಕೆಎಂಎಫ್‌, ಸಿಎಸ್‌ಆರ್‌ಟಿಐ, ಆಯಿಷ್‌ ವಜ್ರ ಮಹೋತ್ಸವ, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕೆಎಸ್‌ಆರ್‌ಟಿಸಿ ಮೊದಲಾದವುಗಳು ಪಾಲ್ಗೊಳ್ಳುತ್ತಿದ್ದು, ಸಿದ್ಧತೆ ನಡೆಯುತ್ತಿದೆ. ಸಜ್ಜಾದ ಸ್ತಬ್ಧಚಿತ್ರಗಳು ರಾಜಮಾರ್ಗದಲ್ಲಿ ಸಾಗಲಿವೆ.

ಗದಗದ ಫಕೀರೇಶ ಕುಳಗೇರಿ ತಂಡದವರು ದಸರಾ ವಸ್ತುಪ್ರದರ್ಶನದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿರುವ ಗದಗ ಜಿಲ್ಲೆಯ ಲಕ್ಕುಂಡಿ ಮುಸುಕಿನಬಾವಿ ತಾಣವನ್ನು ಬಿಂಬಿಸುವ ಪ್ರತಿಕೃತಿಯನ್ನು ಸಿದ್ಧಪಡಿಸಿದ್ದಾರೆ. ಇದರೊಂದಿಗೆ, ಇಲಾಖೆಯ ಅಭಿವೃದ್ಧಿ ಯೋಜನೆಗಳ ಪ್ರದರ್ಶನವನ್ನೂ ಮಾಡಲಾಗಿದೆ. ಇದು ಸಂದರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ತಂಡ 25 ದಿನಗಳಿಂದ ಇದಕ್ಕಾಗಿ ಶ್ರಮಪಟ್ಟಿದೆ. ಫಕೀರೇಶ ಅವರೊಂದಿಗೆ ರವಿ ಶಿಶುವಿನಹಳ್ಳಿ, ಶಹಜಹಾನ್ ಮುದಕವಿ ಹಾಗೂ ಕಿರಣ ಓದುಗೌಡರ ಕೈಜೋಡಿಸಿದ್ದಾರೆ. ಒಟ್ಟು 30 ಮಂದಿಯನ್ನು ಒಳಗೊಂಡ ತಂಡ ಕೆಲಸ ನಿರ್ವಹಿಸಿದೆ.

ಈಗ, ಈ ತಂಡವು ಸ್ತಬ್ಧಚಿತ್ರ ತಯಾರಿಯಲ್ಲಿ ತೊಡಗಿದೆ. ಗದಗ ಜಿಲ್ಲಾ ‍‍ಪಂಚಾಯಿತಿ ವತಿಯಿಂದ ಆ ಜಿಲ್ಲೆಯ ರೋಣ ತಾಲ್ಲೂಕಿನ ಸೂಡಿಯ ಜೋಡುಕಳಸದ ಗುಡಿ (ನಾಗೇಶ್ವರ ದೇವಸ್ಥಾನ) ಮತ್ತು ಧಾರವಾಡ ಜಿಲ್ಲೆಯ ಗರಗದ ರಾಷ್ಟ್ರಧ್ವಜ ತಯಾರಿಕಾ ಕೇಂದ್ರ, ಕಲಘಟಗಿ ಮರದ ತೊಟ್ಟಿಲು, ನವಲಗುಂದ ಜಮಖಾನ, ಗಾಂಧಿ ಜಯಂತಿಯ ಪ್ರಯುಕ್ತ ಅವರನ್ನು ಬಿಂಬಿಸುವ ಪ್ರತಿಮೆಯನ್ನು ಒಳಗೊಂಡ ಸ್ತಬ್ಧಚಿತ್ರಕ್ಕೆ ರೂಪ ಕೊಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದರಂತೆಯೇ, ಹಲವು ತಂಡಗಳು ಕಾರ್ಯನಿರ್ವಹಿಸುತ್ತಿವೆ.

ನಾವು ಸೆ.23ರಿಂದಲೇ ಬಂಡೀಪಾಳ್ಯದಲ್ಲಿ ಸ್ತಬ್ಧಚಿತ್ರ ತಯಾರಿಯಲ್ಲಿ ತೊಡಗಿದ್ದೇವೆ. ಜಂಬೂಸವಾರಿಗೆ ಕೆಲವು ದಿನಗಳಿಗೆ ಮುನ್ನವೇ ಅಂತಿಮಗೊಳ್ಳಲಿದೆ.
-ಫಕೀರೇಶ ಕುಳಗೇರಿ, ಕಲಾವಿದ ಗದಗ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.