ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆಯ ದರ್ಬಾರ್ ಅಂಗಳದಲ್ಲಿ ಸೋಮವಾರ ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು 11ನೇ ಬಾರಿ ಖಾಸಗಿ ದರ್ಬಾರ್ ನಡೆಸಿದರು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಅರಮನೆಯಲ್ಲಿ ನವರಾತ್ರಿಯ ಪೂಜಾ ವಿಧಾನಗಳು ಮುಂಜಾನೆ 5.30ರಿಂದಲೇ ಆರಂಭವಾದವು. 5.30ರಿಂದ 5.45ರ ವರೆಗೆ ಸಿಂಹಾಸನಕ್ಕೆ ಸಿಂಹದ ಮೂರ್ತಿ ಜೋಡಿಸಲಾಯಿತು.
ನಂತರ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಅವರಿಗೆ ಹಾಗೂ ವಾಣಿವಿಲಾಸ ದೇವರ ಮನೆಯಲ್ಲಿ ತ್ರಿಷಿಕಾ ಕುಮಾರಿ ದೇವಿ ಒಡೆಯರ್ ಅವರಿಗೆ ಬೆಳಿಗ್ಗೆ 9.55ರಿಂದ 10.15ರಲ್ಲಿ ‘ಕಂಕಣ ಧಾರಣೆ’ ಮಾಡಲಾಯಿತು.
ಪಟ್ಟದ ಆನೆ ‘ಶ್ರೀಕಂಠ’, ನಿಶಾನೆ ಆನೆ ‘ಏಕಲವ್ಯ’, ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಒಂಟೆಗೆ ಕೋಡಿ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಆನೆ ಬಾಗಿಲಿಗೆ ಕರೆ ತರಲಾಯಿತು. ನಂತರ ಅವುಗಳಿಗೆ ಸವಾರಿ ತೊಟ್ಟಿಯಲ್ಲಿ ಯದುವೀರ ಬೆಳಿಗ್ಗೆ 11.30ಕ್ಕೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಗಣಪತಿ, ಚಾಮುಂಡೇಶ್ವರಿ, ವಿಷ್ಣು, ಶಿವ, ಅಷ್ಟ ದಿಕ್ಪಾಲಕರ ಮತ್ತು ನವಗ್ರಹ ಪೂಜೆಯನ್ನು ನೆರವೇರಿಸಿದರು. ಕಳಶ ಪೂಜೆ ನಂತರ ಸಿಂಹಾಸನಕ್ಕೆ ಪೂಜೆ ಸಲ್ಲಿಸಲಾಯಿತು. ಸವಾರಿ ತೊಟ್ಟಿಯಿಂದ ಯದುವೀರ್ ‘ಬಹುಪರಾಕ್’ ಹೇಳಿ ಅವರನ್ನು ಸ್ವಾಗತಿಸಲಾಯಿತು.
ಪರಕಾಲ ಮಠ, ಶೃಂಗೇರಿ ಮಠ, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ, ನಂಜನಗೂಡು ಶ್ರೀಕಂಠೇಶ್ವರ, ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರಸುಂದರಿ ಹಾಗೂ ಅರಮನೆ ಕೋಟೆಯೊಳಗಿನ ದೇವಾಲಯಗಳು ಸೇರಿದಂತೆ 23 ದೇವಾಲಯಗಳಿಂದ ತಂದಿದ್ದ ತೀರ್ಥವನ್ನು ಅರ್ಚಕರು ಯದುವೀರ್ ಅವರಿಗೆ ಪ್ರೋಕ್ಷಿಸಿದರು.
ಮಧ್ಯಾಹ್ನ 12.42ರಿಂದ 12.58ರ ವರೆಗೆ ಯದುವೀರ್ ಸಿಂಹಾಸನಾರೋಹಣ ಮಾಡಿ ನಮಸ್ಕರಿಸಿದರು. ಸಂಸ್ಥಾನ ಗೀತೆ ‘ಕಾಯೌ ಶ್ರೀ ಗೌರಿ’ ವಾದ್ಯ ಸಂಗೀತ ನುಡಿಸಲಾಯಿತು. ರಾಜಮನೆತನದ ಸದಸ್ಯರು ವಂದನೆ ಸಲ್ಲಿಸಿದರು.
ಪ್ರಮೋದಾದೇವಿ ಒಡೆಯರ್ ಅವರಿಗೆ ಯದುವೀರ್ ತಲೆಬಾಗಿ ನಮಿಸಿದರು. ಬಳಿಕ ಯದುವೀರ್ ಅವರಿಗೆ ತ್ರಿಷಿಕಾ ಕುಮಾರಿ ಒಡೆಯರ್ ಆರತಿ ಬೆಳಗಿ, ಪಾದಪೂಜೆ ಸಲ್ಲಿಸಿದರು. ಪುತ್ರ ಆದ್ಯವೀರ್ ಪುಷ್ಪ ಸಲ್ಲಿಸಿದರು.
ಪಟ್ಟದಾನೆಯಾಗಿ ‘ಶ್ರೀಕಂಠ’ ಮೊಳಗಿದ ‘ಕಾಯೌ ಶ್ರೀ ಗೌರಿ’ ಯದುವೀರ್‌ಗೆ ಬಹುಪರಾಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.