ADVERTISEMENT

ಮೈಸೂರು: ನಗರದ ವಿವಿಧೆಡೆ ಚಿನ್ನಾಭರಣ, ನಗದು ಕಳವು

ಖಾರದಪುಡಿ ಎರಚಿ ಮಹಿಳೆಯ ಮಾಂಗಲ್ಯ ಸರ ದೋಚಿದ ದುಷ್ಕರ್ಮಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 7:02 IST
Last Updated 20 ಅಕ್ಟೋಬರ್ 2025, 7:02 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಮೈಸೂರು: ನಗರದ ವಿವಿಧೆಡೆ ಸರಣಿ ಕಳವು ಪ್ರಕರಣಗಳು ನಡೆದಿವೆ. ದಿವಾನ್ಸ್‌ ರಸ್ತೆಯ ಮೆಡಿಕಲ್‌ ಸ್ಟೋರ್‌ಗಳಲ್ಲಿ ಸರಣಿ ಕಳ್ಳತನ ಮಾಡಿರುವ ಕಳ್ಳರು ₹ 9 ಲಕ್ಷ ಮೌಲ್ಯದ ಚಿನ್ನದ ಬಿಸ್ಕೆಟ್‌, ನಾಣ್ಯ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. 

ದಾಸೇಗೌಡ ಎಂಬುವರ ‘ಗೌಡ್ರು’ ವೆಟರ್ನರಿ ಮತ್ತು ಪೆಟ್ ಮೆಡಿಕಲ್ಸ್ ಹಾಗೂ  ಶ್ರೀನಿವಾಸ ಮೆಡಿಕಲ್ಸ್‌ನಲ್ಲಿ ಕಳವು ನಡೆದಿದೆ.

‘ಗೌಡ್ರು’ ಮೆಡಿಕಲ್ಸ್‌ನಲ್ಲಿ ವ್ಯವಹಾರದ ಉದ್ದೇಶಕ್ಕಾಗಿ ಕಂಪನಿಗಳು ನೀಡಿದ್ದ 55 ಗ್ರಾಂ. ಚಿನ್ನದ ಬಿಸ್ಕೆಟ್, 6 ಗ್ರಾಂ. ತೂಕದ ಚಿನ್ನದ ನಾಣ್ಯ, 66 ಗ್ರಾಂ ತೂಕದ ಬೆಳ್ಳಿ ನಾಣ್ಯ ಹಾಗೂ ₹ 1.8 ಲಕ್ಷ ನಗದು, ವಿವಿಧ ಬ್ಯಾಂಕ್‌ನ ಚೆಕ್, ಎಟಿಎಂ ಕಾರ್ಡ್ ದೋಚಲಾಗಿದೆ. 

ADVERTISEMENT

ಶ್ರೀನಿವಾಸ ಮೆಡಿಕಲ್ಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಡಿವಿಆರ್ ಕಳವು ಮಾಡಲಾಗಿದೆ ಎಂದು ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಗಳವು: ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಗಿರಿದರ್ಶಿನಿ ಬಡಾವಣೆ ಸೌಮ್ಯಾ (39) ಅವರಿಗೆ ಖಾರದಪುಡಿ ಎರಚಿ ಸರಗಳ್ಳರು 20 ಗ್ರಾಂ. ಚಿನ್ನದ ಸರ ಕದ್ದಿದ್ದಾರೆ. 

ಶನಿವಾರ ಮಕ್ಕಳನ್ನು ಶಾಲೆಗೆ ಬಿಟ್ಟು ಮನೆಗೆ ವಾಪಸಾಗುತ್ತಿದ್ದಾಗ ಆಲನಹಳ್ಳಿ ರಸ್ತೆಯಲ್ಲಿ ಖಾರದಪುಡಿ ಎರಚಿದ್ದಾನೆ. ಕೆಳಕ್ಕೆ ಬಿದ್ದ ಸೌಮ್ಯಾ ಅವರ ಮಾಂಗಲ್ಯ ಸರ ಕಸಿಯಲು ಯತ್ನಿಸಿದ್ದಾನೆ. ಪ್ರತಿರೋಧ ತೋರಿದ್ದರಿಂದ 45 ಗ್ರಾಂ ಸರದಲ್ಲಿ 20 ಗ್ರಾಂ ಸರ ಕಳ್ಳನ ಪಾಲಾಗಿದೆ. ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಚಿನ್ನಾಭರಣ ಕಳವು: ಅಶೋಕ ರಸ್ತೆಯ ಸೂರಜ್ ಚಿನ್ನಾಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ರಾಜಾಸ್ಥಾನದ ವಿನೋದ್ ಸಿಂಗ್ ಎಂಬುವರು ₹ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿ, ಪರಾರಿಯಾಗಿದ್ದಾರೆ ಎಂದು ಮಾಲೀಕ ಗೌತಮ್‌ಚಂದ್ ಮಂಡಿ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  

‘ಊರಿಗೆ ಹೋದವ ವಾಪಸ್‌ ಬಂದಿರಲಿಲ್ಲ. ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾನೆ. ಮಳಿಗೆಯ ದಾಸ್ತಾನು ಪರಿಶೀಲಿಸಿದಾಗ 5 ಚಿನ್ನದ ತಾಳಿ ನಾಪತ್ತೆಯಾಗಿದ್ದವು. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಆತನೇ ಕಳವು ಮಾಡಿದ್ದಾನೆ’ ಎಂದು ಗೌತಮ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.