ADVERTISEMENT

ಮೈಸೂರು | ಸಾಲದ ಏರಿಕೆಯೇ ಕೇಂದ್ರದ ಸಾಧನೆ: ಎಂ. ಲಕ್ಷ್ಮಣ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 3:06 IST
Last Updated 5 ಫೆಬ್ರುವರಿ 2026, 3:06 IST
ಎಂ.ಲಕ್ಷ್ಮಣ
ಎಂ.ಲಕ್ಷ್ಮಣ   

ಮೈಸೂರು: ‘ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಒಂದು ದಶಕದಲ್ಲಿ ₹165 ಲಕ್ಷ ಕೋಟಿ ಸಾಲ ಮಾಡಿರುವುದೇ ನರೇಂದ್ರ ಮೋದಿ ಸಾಧನೆ. ಈ ಬಾರಿಯ ಕೇಂದ್ರ ಬಜೆಟ್‌ ಕೇವಲ ಕಾರ್ಪೋರೇಟ್ ವಲಯದ ಓಲೈಕೆಯ ಬಜೆಟ್’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಟೀಕಿಸಿದರು.

‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 9ನೇ ಬಜೆಟ್‌ ₹53.50 ಲಕ್ಷ ಕೊಟಿ ಗಾತ್ರದ್ದಾಗಿದ್ದು, ಕಳೆದ ವರ್ಷಕ್ಕಿಂತ 4 ಲಕ್ಷ ಕೋಟಿಯಷ್ಟು ಬಜೆಟ್ ಗಾತ್ರ ಹೆಚ್ಚಳ ಆಗಿದೆ. 1947ರಿಂದ 2014ರವರೆಗೆ ದೇಶದ ಸಾಲ ಒಟ್ಟು ₹53.2 ಲಕ್ಷ ಕೋಟಿ ಇತ್ತು. ಕಳೆದ 12 ವರ್ಷದಲ್ಲಿ ಇದು ₹218.6 ಲಕ್ಷ ಕೋಟಿಗೆ ಏರಿದೆ. ಇಷ್ಟೆಲ್ಲ ಸಾಲ ಮಾಡಿಯೂ ಎಷ್ಟು ಜನಪರ ಯೋಜನೆಗಳು ಜಾರಿಯಾಗಿವೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಕರ್ನಾಟಕಕ್ಕೆ ಈ ಬಾರಿಯ ಬಜೆಟ್‌ ಕೇವಲ ಖಾಲಿ ಚೆಂಬು, ತೆಂಗಿನ ಚಿಪ್ಪು ಕೊಟ್ಟಿದೆ’ ಎಂದು ಆರೋಪಿಸಿದರು.

ADVERTISEMENT

‘ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ನಂತರ ನಾವು 2ನೇ ಸ್ಥಾನದಲ್ಲಿದ್ದೇವೆ. ಪ್ರತಿ ವರ್ಷದ ರಾಜ್ಯದಿಂದ 9 ವಿಧವಾದ ತೆರಿಗೆಗಳ ಮೂಲಕ ₹5.26 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ಇದರಲ್ಲಿ ನೀತಿ ಆಯೋಗದ ಪ್ರಯೋಗದ ಪ್ರಕಾರ ಶೇ 41ರಷ್ಟು ಪಾಲನ್ನು ರಾಜ್ಯಕ್ಕೆ ಹಿಂತಿರುಗಿಸಬೇಕು. ₹2 ಲಕ್ಷ ಕೋಟಿ ಕೊಡುವ ಜಾಗದಲ್ಲಿ ₹60 ಸಾವಿರ ಕೋಟಿ ನೀಡುತ್ತಿದ್ದಾರೆ. ಆದರೆ, ಉತ್ತರಪ್ರದೇಶಕ್ಕೆ ₹2.18 ಲಕ್ಷ ಕೋಟಿ ಕೊಟ್ಟಿದ್ದಾರೆ. ವಾರ್ಷಿಕ ₹2.5 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುವ ಮಧ್ಯಪ್ರದೇಶಕ್ಕೆ ₹1.11 ಲಕ್ಷ ಕೋಟಿ ನೀಡುತ್ತಿದ್ದಾರೆ. ಕರ್ನಾಟಕವನ್ನು ಕಡೆಗಣಿಸಲಾಗಿದೆ’ ಎಂದು ದೂರಿದರು.

‘ಬೆಂಗಳೂರಿನಿಂದ ಹೈದರಾಬಾದ್‌ವರೆಗೆ ಬಿಟ್ಟಿರುವುದು ಬುಲೆಟ್ ಟ್ರೈನ್ ಅಲ್ಲ, ಇದು ಕೇವಲ ಪುಂಗಿ ಊದುವ ವಿಚಾರ. ಈಗಿರುವ ರೈಲಿನ ವೇಗವನ್ನೇ ಹೆಚ್ಚಿಸಿ ಹೈಸ್ಪೀಡ್ ಎಂದು ಬದಲಿಸಲಾಗಿದೆ. ಇದರಿಂದ ಪ್ರಯಾಣದ ಅವಧಿ ಒಂದು ಗಂಟೆ ಕಡಿಮೆ ಆಗಬಹುದಷ್ಟೇ’ ಎಂದರು.

‘ಭ್ರದಾ ಮೇಲ್ದಂಡೆ, ಕೃಷ್ಣ ಮೇಲ್ದಂಡೆ, ಮೇಕೆದಾಟು, ಮಹದಾಯಿ ನೀರಾವರಿ ಯೋಜನೆಗಳಿಗೆ ನಯಾಪೈಸೆ ಕೊಡುತ್ತಿಲ್ಲ. ಅನುಮತಿಯನ್ನೂ ಕೊಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತ‍ಪಡಿಸಿದರು.

‘₹2 ಲಕ್ಷ ಕೋಟಿ ಬದಲಿಗೆ ₹63 ಸಾವಿರ ಕೋಟಿ ಕೊಟ್ಟರೂ ಅದನ್ನೇ ಸಾಧನೆ ಎನ್ನುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಚಿವರಾಗಿ ರಾಜ್ಯಕ್ಕೆ ಯಾವ ಕಾರ್ಖಾನೆ ತಂದಿದ್ದಿರಿ ಹೇಳಿ?’ ಎಂದು ಪ್ರಶ್ನಿಸಿದರು.

‘ಕೇಂದ್ರದ ಮಲತಾಯಿ ಧೋರಣೆಯನ್ನು ಮೀರಿಯೂ ರಾಜ್ಯ ಸರ್ಕಾರವು ಸಾವಿರಾರು ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸುವ ಮೂಲಕ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ’ ಎಂದರು.

ಕಾಂಗ್ರೆಸ್ ನಗರ ಜಿಲ್ಲಾ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ನಜ್ಮಾ ನಾಸೀರ್, ಗೋಪಿ, ಸಯ್ಯದ್ ಅಬ್ರಾರ್, ಕೆ. ಮಹೇಶ್, ಮಹದೇವ್, ಗಿರೀಶ್ ಉಪಸ್ಥಿತರಿದ್ದರು.

ಮೈಸೂರು-ಬೆಂಗಳೂರು ಹೆದ್ದಾರಿ ನಿರ್ಮಾಣ ತನ್ನ ಸಾಧನೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ ಖಾಸಗಿಯವರು ₹15 ಸಾವಿರ ಕೋಟಿ ಬಂಡವಾಳ ಹೂಡಿದ್ದು ಪ್ರಯಾಣಿಕರು ಪ್ರತಿ ಬಾರಿ ₹1 ಸಾವಿರ ಟೋಲ್ ಕಟ್ಟಬೇಕಿದೆ
ಎಂ. ಲಕ್ಷ್ಮಣ ಕೆಪಿಸಿಸಿ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.