ADVERTISEMENT

ಮೈಸೂರು ಭೂ ಹಗರಣ; ಸಿಬಿಐ ತನಿಖೆಗೆ ವಾಟಾಳ್ ಆಗ್ರಹ

ಸೈಕಲ್ ಏರಿ ವಿಶಿಷ್ಟವಾಗಿ ಪ್ರತಿಭಟನೆ; ಇಂಧನ ಬೆಲೆ ಇಳಿಕೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 14:04 IST
Last Updated 10 ಜೂನ್ 2021, 14:04 IST
ಮೈಸೂರಿನಲ್ಲಿ ನಡೆದಿರುವ ಭೂ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ವಾಟಾಳ್‌ ನಾಗರಾಜ್‌ ಅವರು ಗುರುವಾರ ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತದಲ್ಲಿ (ಹಾರ್ಡಿಂಜ್‌ ವೃತ್ತ) ಪ್ರತಿಭಟನೆ ನಡೆಸಿದರು
ಮೈಸೂರಿನಲ್ಲಿ ನಡೆದಿರುವ ಭೂ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ವಾಟಾಳ್‌ ನಾಗರಾಜ್‌ ಅವರು ಗುರುವಾರ ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತದಲ್ಲಿ (ಹಾರ್ಡಿಂಜ್‌ ವೃತ್ತ) ಪ್ರತಿಭಟನೆ ನಡೆಸಿದರು   

ಮೈಸೂರು: ಜಿಲ್ಲೆಯಲ್ಲಿ ನಡೆದಿರುವ ಭೂ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಒತ್ತಾಯಿಸಿದರು.

ವಿಜಯಭಾಸ್ಕರ್ ಅವರು ಭೂ ಹಗರಣ, ಒತ್ತುವರಿ ಕುರಿತು ಒಂದು ವರದಿ ಕೊಟ್ಟಿದ್ದರು. ಆ ವರದಿಯನ್ನು ಬಹಿರಂಗಪಡಿಸಬೇಕು. ಈ ಸಂಬಂಧ ತಪ್ಪಿತಸ್ಥರನ್ನು ಜೈಲಿಗೆ ಹಾಕಬೇಕು ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರೋಹಿಣಿ ಸಿಂಧೂರಿ ವರ್ಗಾವಣೆ ಹಿಂದೆ ಭಾರಿ ಪಿತೂರಿ ಅಡಗಿದೆ. ಭೂ ಹಗರಣಗಳಿಗೂ ಇವರ ವರ್ಗಾವಣೆಗೂ ಸಂಬಂಧ ಇದೆ. ಸರ್ಕಾರ ಕೂಡಲೇ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.

ADVERTISEMENT

ಸಂಸದರು ಏನು ಮಾಡುತ್ತಿದ್ದಾರೆ?

ಇಂಧನ ಬೆಲೆಯನ್ನು ಕೇಂದ್ರ ಸರ್ಕಾರ ನಿರಂತರವಾಗಿ ಹೆಚ್ಚಿಸುತ್ತಲೇ ಇದೆ. ಹೀಗಿದ್ದರೂ, ನಮ್ಮ ಸಂಸದರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಒಂದು ಕಡೆ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡುತ್ತದೆ. ಮತ್ತೊಂದು ಕಡೆ ಬೆಲೆ ಏರಿಕೆ ಮಾಡುತ್ತಿದೆ. ಬೆಲೆ ಏರಿಕೆಯು ಸಾಮಾನ್ಯ ಜನರ ಬೆನ್ನುಮೂಳೆಯನ್ನು ಮುರಿಯುತ್ತಿದೆ ಎಂದು ಕಿಡಿಕಾರಿದರು.

ಎಸ್ಸೆಸ್ಸೆಲ್ಸಿಯಿಂದ ಪದವಿವರೆಗಿನ ಎಲ್ಲ ಪರೀಕ್ಷೆಗಳನ್ನು ರದ್ದು ಮಾಡಬೇಕು ಎಂದು ಅವರು ಇದೇ ವೇಳೆ ಆಗ್ರಹಿಸಿದರು.

ಇದಕ್ಕೂ ಮುನ್ನ ಅವರು ಜಯಚಾಮರಾಜ ಒಡೆಯರ್ ವೃತ್ತದಲ್ಲಿ (ಹಾರ್ಡಿಂಜ್‌ ವೃತ್ತ) ಸೈಕಲ್ ಏರಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು. ಹೋರಾಟಗಾರರಾದ ತಾಯೂರು ವಿಠಲಮೂರ್ತಿ, ಮೂಗೂರು ನಂಜುಂಡಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.