ADVERTISEMENT

ಪಾಲಿಕೆ ಮೇಯರ್ ಚುನಾವಣೆಯಲ್ಲಿ ‘ಮೈತ್ರಿ’ಗೆ ಬಿಜೆಪಿ, ಕಾಂಗ್ರೆಸ್ ನಿರಾಸಕ್ತಿ!

ಕುತೂಹಲ ಕೆರಳಿಸಿರುವ ಜೆಡಿಎಸ್ ನಡೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 15:37 IST
Last Updated 3 ಸೆಪ್ಟೆಂಬರ್ 2022, 15:37 IST

ಮೈಸೂರು: ಇಲ್ಲಿನ ಮಹಾನಗರಪಾಲಿಕೆಯಲ್ಲಿ ಸೆ.6ರಂದು ನಡೆಯಲಿರುವ ಮೇಯರ್–ಉಪ ಮೇಯರ್ ಚುನಾವಣೆಯಲ್ಲಿ ಸ್ವತಂತ್ರವಾಗಿ ಕಣಕ್ಕಿಳಿಯುವ ನಿರ್ಧಾರವನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಮಾಡಿವೆ. ಜೆಡಿಎಸ್‌ನ ನಿಲುವು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ, ಕೊನೆ ಕ್ಷಣದ ಬದಲಾವಣೆಗಳು ಕುತೂಹಲ ಕೆರಳಿಸಿವೆ.

ಶನಿವಾರ ಪ್ರತ್ಯೇಕವಾಗಿ ಸಭೆ ನಡೆಸಿದ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು, ತಾವಾಗಿಯೇ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದಿರಲು ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ. ವಿಧಾನಸಭೆ ಚುನಾವಣೆಯ ವರ್ಷವಾದ್ದರಿಂದ ‘ಅನಗತ್ಯ ಸಂದೇಶ’ಗಳಿಗೆ ಅವಕಾಶ ಕೊಡದಿರಲು ಉದ್ದೇಶಿಸಲಾಗಿದೆ ಎನ್ನಲಾಗಿದೆ.

ಹೋದ ಬಾರಿ ಚುನಾವಣೆಯಲ್ಲಿ ಮೇಯರ್ ಸ್ಥಾನ ಪಡೆದುಕೊಂಡಿದ್ದ ಬಿಜೆಪಿಯು, ಈ ಬಾರಿ ಜೆಡಿಎಸ್‌ ಜೊತೆಗೆ ಅಧಿಕೃತವಾಗಿ ಮೈತ್ರಿ ಮಾಡಿಕೊಳ್ಳಲು ನಿರಾಸಕ್ತಿ ತೋರಿದೆ. ಸ್ವತಂತ್ರವಾಗಿ ಅಭ್ಯರ್ಥಿ ಕಣಕ್ಕಿಳಿಸುವ ನಿರ್ಧಾರ ಕೈಗೊಂಡಿದೆ. ಸಂಖ್ಯಾಬಲದ ಆಧಾರದ ಮೇಲೆ ಚುನಾವಣೆ ಎದುರಿಸಲು ಪ್ರಮುಖರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸ್ಪಷ್ಟ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರಾದ ನಿರ್ಮಲಕುಮಾರ್ ಸುರಾನ, ಎಂ.ರಾಜೇಂದ್ರ, ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್, ಮೇಯರ್‌ ಸುನಂದಾ ಫಾಲನೇತ್ರ ಸಮ್ಮುಖದಲ್ಲಿ ಸಭೆ ನಡೆದಿದೆ. ನಗರಪಾಲಿಕೆಯ ಬಿಜೆಪಿ ಸದಸ್ಯರು ಸಮಾಲೋಚನೆಯಲ್ಲಿ ಭಾಗವಹಿಸಿದ್ದರು. ಸ್ವಂತ ಬಲದ ಮೇಲೆ ಪ್ರಯೋಗಕ್ಕೆ ಹೆಚ್ಚಿನ ಒಲವು ವ್ಯಕ್ತವಾಗಿದೆ. ವರಿಷ್ಠರ ಗಮನಕ್ಕೆ ತಂದು ಅಂತಿಮ ನಿರ್ಧಾರ ಕೈಗೊಳ್ಳುವ ತೀರ್ಮಾನಕ್ಕೆ ಸಭೆ ಬಂದಿತು ಎಂದು ಗೊತ್ತಾಗಿದೆ.

ಕಾಂಗ್ರೆಸ್ ಬೆಳವಣಿಗೆ:

ಕಾಂಗ್ರೆಸ್‌ ಕೂಡ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಿದೆ. ಮೇಯರ್‌–ಉಪಮೇಯರ್‌ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ವಿರೋಧಪಕ್ಷದಲ್ಲಿ ಕಾರ್ಯನಿರ್ವಹಿಸಲು ಸಿದ್ಧ ಎಂಬ ಸಂದೇಶವನ್ನು ಮುಖಂಡರು ರವಾನಿಸಿದ್ದಾರೆ.

ನಗರಪಾಲಿಕೆಯ ವಿರೋಧ ಪಕ್ಷದ ನಾಯಕ ಅಯೂಬ್ ಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಶಾಸಕ ತನ್ವೀರ್‌ಸೇಠ್, ಮುಖಂಡರಾದ ಎಂ.ಕೆ.ಸೋಮಶೇಖರ್, ವಾಸು, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ ಭಾಗವಹಿಸಿದ್ದರು. ಚುನಾವಣೆಗೆ ಸಿದ್ಧವಾಗುವಂತೆ ಸದಸ್ಯರಿಗೆ ಸೂಚಿಸಿದರು.

ಈ ನಡುವೆ, ಪಾಲಿಕೆಯಲ್ಲಿ ಮತದಾನದ ಹಕ್ಕಿಗಾಗಿ ಮಂಡ್ಯದ ವಿಧಾನಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಮೊರೆ ಹೋಗಿದ್ದಾರೆ. ಚುನಾವಣಾ ತಂತ್ರದ ಭಾಗವಾಗಿ ಕಾಂಗ್ರೆಸ್ ಈ ದಾಳ ಉರುಳಿಸಿದೆ.

ಹಕ್ಕಿನ ನೋಂದಣಿಗೆ ತಕರಾರು

ಮಂಡ್ಯದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾಗಿರುವ ವಿಧಾನಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ ಅವರ ಹೆಸರನ್ನು ಮೇಯರ್‌ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸೇರಿಸಿ ಹಕ್ಕಿನ ನೋಂದಣಿ ನೀಡಿರುವುದಕ್ಕೆ ಜೆಡಿಎಸ್‌ನಿಂದ ತರಕಾರು ಅರ್ಜಿಯನ್ನು ಪ್ರಾದೇಶಿಕ ಆಯುಕ್ತರಿಗೆ ಶನಿವಾರ ಸಲ್ಲಿಸಲಾಗಿದೆ.

‘ದಿನೇಶ್ ವಿಧಾನಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಬೆಂಗಳೂರಿನ ಯಶವಂತಪುರ ನಿವಾಸಿ, ಅಲ್ಲಿ ಮತದಾರ ಹಾಗೂ ಸ್ವಂತ ವಿಳಾಸವು ಮದ್ದೂರು ತಾಲ್ಲೂಕು ಎಂದು ತಿಳಿಸಿದ್ದರು. ಅವರು ಪ್ರತಿನಿಧಿಸುವ ಕ್ಷೇತ್ರವು ಮಂಡ್ಯ ವ್ಯಾಪ್ತಿಯಲ್ಲಿದೆ. ಅವರಿಗೆ ಮೈಸೂರು ಮಹಾನಗರಪಾಲಿಕೆಯಲ್ಲಿ ಮತದಾನದ ಹಕ್ಕು ಕೊಡಲು ಹೇಗೆ ಸಾಧ್ಯ?’ ಎಂದು ಜೆಡಿಎಸ್ ಮುಖಂಡ ಹಾಗೂ ವಕೀಲ ಎನ್.ಆರ್.ರವಿಚಂದ್ರೇಗೌಡ ಮನವಿಯಲ್ಲಿ ಕೇಳಿದ್ದಾರೆ.

‘ಜನಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಬಾರದು’ ಎಂದು ಕೋರಿದ್ದಾರೆ.

ಮುಖಂಡ ವಿ.ಶೈಲೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.