
ಮೈಸೂರು: ಇಲ್ಲಿನ ಮಹಾನಗರಪಾಲಿಕೆಯು ವರಮಾನ ಹೆಚ್ಚಿಸಿಕೊಳ್ಳಲು ಹಾಗೂ ಸಾರ್ವಜನಿಕರಿಗೆ ಮೂಲಸೌಲಭ್ಯ ಕಲ್ಪಿಸಲು ಕೈಗೊಳ್ಳಬಹುದಾದ ಹಲವು ಸಲಹೆಗಳನ್ನು ಮಾಜಿ ಮೇಯರ್‌ಗಳು, ಉಪಮೇಯರ್‌ಗಳು ಮತ್ತು ವಿವಿಧ ಕ್ಷೇತ್ರದ ಗಣ್ಯರು ನೀಡಿದರು.
2026–27ನೇ ಬಜೆಟ್ ಸಂಬಂಧ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಬುಧವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಗಣ್ಯರು ಮಾರ್ಗದರ್ಶನ ಮಾಡಿದರು. ನಿರ್ಲಕ್ಷ್ಯ ವಹಿಸುತ್ತಿರುವುದೆಲ್ಲಿ ಎಂಬ ಅಂಶಗಳನ್ನೂ ತಿಳಿಸಿ ಕಿವಿಹಿಂಡಿದರು. ಆಡಳಿತ ಬಿಗಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿದರು.
ಆಡಳಿತಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಮೊದಲಾದ ಅಧಿಕಾರಿಗಳು, ಹಿಂದಿನ ಜನಪ್ರತಿನಿಧಿಗಳ ಸಲಹೆ–ಸೂಚನೆಗಳನ್ನು ದಾಲಿಸಿಕೊಂಡರು.
ಜಾಲತಾಣದಲ್ಲೂ ತಿಳಿಸಿ: ‘ಮುಂದಿನ ಬಜೆಟ್ ಸಿದ್ಧಪಡಿಸಲು ಸಲಹೆ ಕೇಳಲಾಗಿದೆ. ಪಾಲಿಕೆ ಜಾಲತಾಣದಲ್ಲಿ ಹಾಕಲಾಗಿರುವ ಗೂಗಲ್‌ಫಾರ್ಮ್ ಆನ್‌ಲೈನ್‌ನಲ್ಲೇ ತುಂಬಿ ಸಲಹೆ ನೀಡಲು ಸಾರ್ವಜನಿಕರಿಗೆ ಅವಕಾಶವಿದೆ’ ಎಂದು ನಿತೇಶ್ ಪಾಟಲ ಹೇಳಿದರು.
‘ಪ್ರತಿ ವಾರ್ಡ್‌ನಲ್ಲೂ ಅತಿ ಹೆಚ್ಚು ತೆರಿಗೆ, ಕರ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಸಿದ್ಧಪಡಿಸಲಾಗಿದೆ. ವಸೂಲಾತಿಗೆ ಕ್ರಮ ವಹಿಸಲಾಗುವುದು. ಮಾಸ್ಟರ್ ಪ್ಲಾನ್ ಅನ್ನು ಇದೇ ಮೊದಲಿಗೆ ಜಾಲತಾಣದಲ್ಲಿ ಹಾಕಲಾಗಿದೆ. ಅದನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ’ ಎಂದು ಹೇಳಿದರು.
ತೆರಿಗೆ ಸರಿಯಾಗಿ ವಸೂಲಿ ಮಾಡಿ: ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಮಾತನಾಡಿ, ‘ಇಂದಿಗೂ ಹಲವು ಬಡಾವಣೆಗಳಲ್ಲಿ ಸರಿಯಾಗಿ ತೆರಿಗೆ ವಸೂಲಿ ಆಗುತ್ತಿಲ್ಲ. ಖಾತೆ, ಕಂದಾಯ ಆಂದೋಲನ ನಡೆಸಿದರೆ ವರಮಾನ ಏರಿಕೆ ಮಾಡಿಕೊಳ್ಳಬಹುದು. ನೀರಿನ ಕರ ವಸೂಲಾತಿಯಲ್ಲಿ ಅಧಿಕವಾದ ಬಡ್ಡಿ ಹಾಕಲಾಗಿದೆ. ಬಡ್ಡಿ ಮನ್ನಾ ಮಾಡಿದರೆ ಪಾವತಿಸುವುದಕ್ಕೆ ಬಹಳಷ್ಟು ಮಂದಿ ಸಿದ್ಧವಿದ್ದಾರೆ. ಇದರಿಂದಲೂ ವರಮಾನ ಬರುತ್ತದೆ’ ಎಂದು ತಿಳಿಸಿದರು.
ಸಮರ್ಪಕವಾಗಿ ಆಗಬೇಕು: ‘ಪಾಲಿಕೆ ಆಸ್ತಿಗಳಲ್ಲಿ ಬಾಡಿಗೆ ವಸೂಲಾತಿ ಸಮರ್ಪಕವಾಗಿ ಆಗಬೇಕು. ಆಸ್ತಿಗಳನ್ನು ಅಧೀನಕ್ಕೆ ತೆಗೆದುಕೊಂಡು ಅಲ್ಲಿ ಕೈಗೆಟಕುವ ಬಾಡಿಗೆ ವಿಧಿಸಬಹುದಾಗಿದೆ. ಉದ್ಯಾನ ನಿರ್ವಹಣೆ ಖಾಸಗಿಯವರಿಗೆ ಕೊಡಬೇಕು. ಸಿಎಸ್‌ಆರ್ ನಿಧಿ ಬಳಸಿಕೊಂಡು ಮೈದಾನವನ್ನು ಅಭಿವೃದ್ಧಿಪಡಿಸಬೇಕು’ ಎಂದು ಸಲಹೆ ನೀಡಿದರು.
ಮಾಜಿ ಮೇಯರ್ ಲಿಂಗಪ್ಪ, ‘ದೇವರಾಜ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಖಾತೆ ಮಾಡಿಕೊಟ್ಟು ಬಾಡಿಗೆ ಪರಿಷ್ಕರಿಸಬೇಕು. ಇದರಿಂದ ವರಮಾನ ಕ್ರೋಢೀಕರಣಕ್ಕೆ ಸಹಾಯ ಆಗುತ್ತದೆ’ ಎಂದು ತಿಳಿಸಿದರು.
ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ‘ವಾರ್ಡ್ ನಂ. 43 ಹಾಗೂ 45ರಲ್ಲಿ ಸಮರ್ಪಕ ಒಳಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.
ಮಹಿಳೆಯರಿಗೆ ಆದ್ಯತೆ ಕೊಡಿ: ಮಾಜಿ ಉಪಮೇಯರ್‌ಗಳಾದ ಪುಷ್ಪವಲ್ಲಿ ಹಾಗೂ ರೂಪಾ, ‘ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷ ಯೋಜನೆ ರೂಪಿಸಬೇಕು. ಪಿಂಕ್ ಆಟೊರಿಕ್ಷಾ ಯೋಜನೆ ಆರಂಭಿಸಬೇಕು. ಸ್ವಾವಲಂಬಿ ಜೀವನ ಕಂಡುಕೊಳ್ಳಲು ಬೇಕಾದ ತರಬೇತಿಗಳನ್ನು ನೀಡಬೇಕು’ ಎಂದು ಕೋರಿದರು.
‘ದೇವರಾಜ ಮಾರುಕಟ್ಟೆಯಲ್ಲಿರುವ ಅವ್ಯವಸ್ಥೆ ಸರಿಪಡಿಸಬೇಕು’ ಎಂದು ಮಾಜಿ ಮೇಯರ್ ಮೋದಾಮಣಿ ಸಲಹೆ ನೀಡಿದರು.
ಮಾಜಿ ಮೇಯರ್‌ಗಳಾದ ಪಿ. ವಿಶ್ವನಾಥ್, ಮಹದೇವಪ್ಪ, ದಕ್ಷಿಣಾಮೂರ್ತಿ, ಉದ್ಯಮಿ ಸುರೇಶ್‌ಕುಮಾರ್ ಜೈನ್ ಸಲಹೆ ನೀಡಿದರು. ಮುಖ್ಯ ಲೆಕ್ಕಾಧಿಕಾರಿ ಶ್ವೇತಾ, ಅಧಿಕಾರಿಗಳಾದ ಕುಸುಮಾಕುಮಾರಿ, ಜಿ.ಸೋಮಶೇಖರ್ ಪಾಲ್ಗೊಂಡಿದ್ದರು.
ಪರಿಷ್ಕರಣೆಗೆ ಕ್ರಮ ವಹಿಸಿ: ಸಂದೇಶ್ ಸ್ವಾಮಿ
ಮಾಜಿ ಮೇಯರ್ ಸಂದೇಶ್ ಸ್ವಾಮಿ, ‘ಪಾಲಿಕೆಗೆ ಸೇರಿದ ಎರಡೂವರೆ ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ಬಾಡಿಗೆಗೆ ಕೊಡಲಾಗಿದೆ. ಅವುಗಳ ಬಾಡಿಗೆ ಪರಿಷ್ಕರಣೆ ಆಗಿಲ್ಲ. ಕೆಲವೆಡೆ ಸಂಗ್ರಹಿಸುತ್ತಲೂ ಇಲ್ಲ. ಇದರಿಂದ ವರಮಾನಕ್ಕೆ ತೊಡಕಾಗುತ್ತಿದೆ’ ಎಂದು ದೂರಿದರು.
‘ಸ್ವಚ್ಛತೆಯ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಏಕೆ? ವರ್ತುಲ ರಸ್ತೆ ಬದಿಯಲ್ಲಿ ಸ್ವಚ್ಛತೆ ಸರಿಯಾಗಿ ಆಗುತ್ತಿಲ್ಲ. ಇದರಿಂದ ಮೈಸೂರಿಗೆ ಕೆಟ್ಟ ಹೆಸರು ಬರುತ್ತಿದೆ. ಸಂಪನ್ಮೂಲ ಸಂಗ್ರಹಿಸಲು ಆದ್ಯತೆ ಕೊಡಬೇಕು. ಖಾತೆ ಮಾಡಿಕೊಡಲು ₹20ಸಾವಿರ, ₹ 30ಸಾವಿರ ಲಂಚ ಕೇಳುವ ದೂರುಗಳಿವೆ. ಇದಕ್ಕೆ ಕಡಿವಾಣ ಹಾಕಬೇಕು. ನರಸಿಂಹರಾಜ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಇಂದೋರ್ ಮಾದರಿ ಅನುಸರಿಸಿ: ಶಿವಕುಮಾರ್
ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ‘ಮೈಸೂರನ್ನು ನಂ.1 ಸ್ವಚ್ಛ ನಗರಿಯಾಗಿಸಲು ಕ್ರಮ ಕೈಗೊಳ್ಳಬೇಕು. ಇಂದೋರ್ ಮಾದರಿಯಲ್ಲಿ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ನಿರ್ಮಾಣ, ನಿರ್ವಹಣೆಗೆ ಕ್ರಿಯಾತ್ಮಕ ಕಾರ್ಯಗಳನ್ನು ಅಳವಡಿಸಿಕೊಳ್ಳಬೇಕು. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಮನ್ವಯ ಮಾಡಬಹುದು. ಮಾಹಾರಾಜರ ಕಾಲದಿಂದಲೂ ಮೈಸೂರು ಮಾದರಿ ನಗರವಾಗಿದೆ. ಸ್ವಚ್ಛತೆಗೆ ಆದ್ಯತೆ ಕೊಡಬೇಕು’ ಎಂದು ಕೋರಿದರು.
‘ಪಾರಂಪರಿಕ ಸ್ವಾಗತ ಕಮಾನು, ಕಟ್ಟಡಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಂ ಮಾಡಬೇಕು. ರೋಡ್ ಹಿಸ್ಟರಿ ಸಿದ್ಧಪಡಿಸಬೇಕು. ಯುಜಿಡಿ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು. ಇದಕ್ಕಾಗಿ ಸೂಪರ್ ಸಕ್ಕಿಂಗ್ ಯಂತ್ರಗಳನ್ನು ತರಿಸಬೇಕು’ ಎಂದು ಸಲಹೆ ನೀಡಿದರು.
ಜನಸ್ನೇಹಿ ಪಾಲಿಕೆಯನ್ನಾಗಿಸಿ: ಅಯೂಬ್
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ, ಮಾಜಿ ಮೇಯರ್ ಅಯೂಬ್ ಖಾನ್ ಮಾತನಾಡಿ, ‘ಜನಸ್ನೇಹಿ ಪಾಲಿಕೆಯಾಗಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರವು ಮೈಸೂರನ್ನು ಗ್ರೇಡ್–1 ಮಹಾನಗರಪಾಲಿಕೆಯನ್ನಾಗಿ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಬಹುದು. ಆಗ, ಪಾಲಿಕೆಯ ವಿಸ್ತೀರ್ಣವು 338 ಚ.ಕಿ.ಮೀ. ಆಗುತ್ತದೆ. ಹೀಗಿರುವಾಗ, ನೀವು ಬಜೆಟ್ ಸಿದ್ಧಪಡಿಸುತ್ತಿರುವುದು ಈಗಿನ ಪಾಲಿಕೆಗೋ, ಗ್ರೇಡ್–1 ಪಾಲಿಕೆಗೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದರು.
ಲೋಕಾಯುಕ್ತ ದಾಳಿ ಬಗ್ಗೆ ಪ್ರಸ್ತಾಪಿಸಿದ ಅವರು, ‘ಪಾಲಿಕೆ ಅಧಿಕಾರಿಗಳ ಕಾರ್ಯವೈಖರಿ ಕುರಿತು ಲೋಕಾಯುಕ್ತ ಪೊಲೀಸರು ಬಂದು ಹೇಳಿಕೊಡುವಂತಹ ಪರಿಸ್ಥಿತಿ ಬಂದಿದೆ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಅಭಿವೃದ್ಧಿಗೆ ಅನುದಾನದ ಸುರಿಮಳೆ ಮಾಡಿದ್ದಾರೆ. ಅದನ್ನು ಬಳಸಿಕೊಳ್ಳಬೇಕು. ಒಂದೇ ದಿನದಲ್ಲೇ ಖಾತೆ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
‘ಗ್ರೇಟರ್ ಅಲ್ಲ, ಗ್ರೇಡ್–1 ಮಹಾನಗರಪಾಲಿಕೆ’
ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ‘ಚುನಾಯಿತ ಪ್ರತಿನಿಧಿಗಳು ಇಲ್ಲದಿರುವ ಕಾರಣ 15ನೇ ಹಣಕಾಸು ಆಯೋಗದಿಂದ ತಲಾ ₹63 ಕೋಟಿ ಅನುದಾನ ಎರಡು ವರ್ಷಗಳಿಂದ ಬಂದಿಲ್ಲ’ ಎಂದು ಪ್ರತಿಕ್ರಿಯಿಸಿದರು.
‘ಗ್ರೇಟರ್ ಮೈಸೂರು ರಚಿಸಲಾಗುತ್ತದೆ ಎಂದು ಪ್ರಚಾರ ಆಗಿದೆ. ಆದರೆ, ಮಾಡುತ್ತಿರುವುದು ಗ್ರೇಡ್–1 ಮೈಸೂರು ಮಹಾನಗರಪಾಲಿಕೆ’ ಎಂದು ಸ್ಪಷ್ಟಪಡಿಸಿದರು.
‘ನಗರದಲ್ಲಿ ಪೊಲೀಸ್ ಇಲಾಖೆಯ 50 ಸಿಸಿ ಟಿವಿ ಕ್ಯಾಮೆರಾ ಇವೆ. ಪಾಲಿಕೆಯಿಂದ ಮತ್ತೆ 50 ಅಳವಡಿಸಿದರೆ, ತ್ಯಾಜ್ಯ ಚೆಲ್ಲುವವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ವೈಟ್ ಟಾಪಿಂಗ್ ರಸ್ತೆ ನಿರ್ಮಾಣಕ್ಕೆಂದು ₹ 400 ಕೋಟಿ, ವಿಶೇಷ ಅನುದಾನವಾಗಿ ₹ 250 ದೊರೆತಿದೆ’ ಎಂದು ತಿಳಿಸಿದರು.