ಅಮಾನತು
ಮೈಸೂರು: ನಗರದ ಬನ್ನಿಮಂಟಪದ ವರ್ತುಲ ರಸ್ತೆಯ ಕಾರ್ ಗ್ಯಾರೇಜ್‌ನ ಪಕ್ಕದ ಜಾಗದ ಶೆಡ್‌ನಲ್ಲಿ 61 ಕೆ.ಜಿ ಮಾದಕ ವಸ್ತು (ಎಂಡಿಎಂಎ) ಪತ್ತೆಯಾದ ಪ್ರಕರಣದಲ್ಲಿ, ಕರ್ತವ್ಯ ಲೋಪದ ಮೇಲೆ ನರಸಿಂಹರಾಜ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಲಕ್ಷ್ಮಿಕಾಂತ ಕೆ.ತಳವಾರ ಅವರನ್ನು ಅಮಾನತು ಮಾಡಲಾಗಿದೆ.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ತಳವಾರ್ ಅವರ ಇಲಾಖೆ ವಿಚಾರಣೆ ಬಾಕಿ ಇರುವಂತೆ ಅಮಾನತುಗೊಳಿಸಿ ಭಾನುವಾರ ಆದೇಶ ಹೊರಡಿಸಿದ್ದಾರೆ. ತೆರವಾದ ಹುದ್ದೆಗೆ ನಗರ ಅಪರಾಧ ಪತ್ತೆ ವಿಭಾಗದ (ಸಿಸಿಬಿ) ಶಬ್ಬೀರ್ ಹುಸೇನ್ ಅವರನ್ನು ನಿಯೋಜಿಸಿದ್ದಾರೆ.
ದ್ರವರೂಪದಲ್ಲಿ ಪತ್ತೆ: ಆರೋಪಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಎಂಡಿಎಂಎ ತಯಾರಿಕಾ ಘಟಕದ ಮೇಲೆ ಸ್ಥಳೀಯ ಪೊಲೀಸರ ನೆರವಿನಿಂದ ಮಹಾರಾಷ್ಟ್ರ ಪೊಲೀಸರು ದಾಳಿ ಮಾಡಿದ್ದರು. ಪುಡಿಯ ರೂಪದಲ್ಲಿದ್ದ 11 ಕೆ.ಜಿ ಎಂಡಿಎಂಎ ಮತ್ತು ದ್ರವರೂಪದಲ್ಲಿ ಸಂಸ್ಕರಣೆಯಾಗುತ್ತಿದ್ದ 50 ಕೆ.ಜಿಯಷ್ಟು ಎಂಡಿಎಂಎ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಮಾಹಿತಿಯೇ ಇರದೇ ಕರ್ತವ್ಯ ಲೋಪ ಎಸಗಿದ್ದ ಕಾರಣಕ್ಕೆ ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ.
4 ಮಂದಿ ಬಂಧನ: ‘ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರ ಪೊಲೀಸರು, ಕಾರ್ ಮೆಕ್ಯಾನಿಕ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಮುಂಬೈನ ಅಂಧೇರಿಯ ಫಿರೋಜ್ ಮೌಲಾ ಶೇಕ್ (28), ಗುಜರಾತ್‌ನ ಸೂರತ್ ನಿವಾಸಿ ಶೇಕ್ ಆದಿಲ್ ಬಿನ್ ಜುಬೀರ್ (23), ಗುಜರಾತ್‌ನ ಬೈರೋಚ್‌ನ ಸೈಯದ್ ಮೆಹಫೂಜ್ ಅಲಿ (21) ಹಾಗೂ ಮೈಸೂರಿನ ಅಜ್ಮಲ್ ಷರೀಫ್ (45) ಆರೋಪಿಗಳು. ಇವರಲ್ಲಿ ಸೈಯದ್ ಮೆಹಫೂಜ್ ಅಲಿ ಕೆಮಿಕಲ್ ಡಿಪ್ಲೊಮಾ ಓದಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಕುಂಬಾರಕೊಪ್ಪಲಿನ ಕೇಬಲ್ ಮಹೇಶ್ ಎಂಬುವರಿಗೆ ಸೇರಿದ ಜಾಗ ಇದಾಗಿದ್ದು, ತಿಂಗಳಿಗೆ ₹ 20ಸಾವಿರಕ್ಕೆ ಸ್ಥಳೀಯ ಅಜ್ಮಲ್ ಎಂಬುವರಿಗೆ ಬಾಡಿಗೆಗೆ ನೀಡಿದ್ದರು. ಈ ಜಾಗದಲ್ಲಿ ಅಜ್ಮಲ್ ಕಾರಿನ ಶೆಡ್ ನಿರ್ಮಿಸಿ ಅರ್ಧ ಭಾಗದಲ್ಲಿ ಕಾರು ರಿಪೇರಿ ಮಾಡುತ್ತಿದ್ದು, ಉಳಿದ ಅರ್ಧ ಭಾಗವನ್ನು ತಿಂಗಳಿಗೆ ₹ 2 ಲಕ್ಷಕ್ಕೆ ಮುಂಬೈನ ರಿಯಾನ್ ಎಂಬುವವರಿಗೆ ಬಾಡಿಗೆ ನೀಡಿದ್ದರು. ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಇಲ್ಲಿಂದಲೇ ನೆರೆ ರಾಜ್ಯಗಳಿಗೆ ಪೂರೈಸಲಾಗುತ್ತಿತ್ತು ’ ಎಂದು ತಿಳಿದುಬಂದಿದೆ.
‘ಮಾದಕ ವಸ್ತು ಪತ್ತೆಯಾಗಿರುವ ಕಾರಣದಿಂದ ವಿಶೇಷ ಕಾರ್ಯಾಚರಣೆ ನಡೆಸಲು ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚಿಸಲಾಗಿದೆ’ ಎಂದು ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.