
ಮೈಸೂರು: ‘ಸಾರ್ವಜನಿಕರು ಸಮಸ್ಯೆಗಳನ್ನು ತಂದಾಗ ಅವುಗಳನ್ನು ಆಲಿಸಿ ತ್ವರಿತವಾಗಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಪ್ರಮುಖವಾಗಿ ಗ್ರಾಮೀಣ ಜನರನ್ನು ಪದೇಪದೆ ಅಲೆದಾಡಿಸುವ ಕೆಲಸ ಮಾಡಬಾರದು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ನಜರ್‌ಬಾದ್‌ನ ಮಿನಿ ವಿಧಾನಸೌಧದಲ್ಲಿರುವ ತಾಲ್ಲೂಕು ಕಚೇರಿಗೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ತಾಲ್ಲೂಕು ಕಚೇರಿಯಲ್ಲಿನ ಕೆಲವು ಲೋಪದೋಷಗಳ ಕುರಿತು ಜನರು ನನ್ನ ಕಚೇರಿಗೆ ದೂರುಗಳನ್ನು ಸಲ್ಲಿಸಿದ್ದರು. ಹೀಗಾಗಿ, ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಜನರ ಕೆಲಸ ಮಾಡಿಕೊಡಲು ನಿರ್ಲಕ್ಷ್ಯ ವಹಿಸಿದರೆ ಕ್ರಮ ವಹಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ತಾಲ್ಲೂಕು ಕಚೇರಿಗಳಿಗೆ ಬರುವ ಹೆಚ್ಚಿನ ಜನರು ಗ್ರಾಮೀಣ ಭಾಗದವರಾಗಿರುತ್ತಾರೆ. ಅವರ ಅಹವಾಲುಗಳನ್ನು ತ್ವರಿತವಾಗಿ ಪರಿಹರಿಸಲು ಎಲ್ಲ ಅಧಿಕಾರಿಗಳು ಮುಂದಾಗಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಮುಂದೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಎಂದರು.
ಕಚೇರಿಗೆ ತಡವಾಗಿ ಬಂದ ಕೆಲವು ಸಿಬ್ಬಂದಿಯನ್ನು ಸಂಸದರು ಪ್ರಶ್ನಿಸಿದರು. ತಹಶೀಲ್ದಾರ್ ಮಹೇಶ್ ಕುಮಾರ್ ಅವರೊಂದಿಗೆ ಕಚೇರಿಯಲ್ಲಿ ಪರಿಶೀಲನೆ ನಡೆಸಿದರು.
‘ಕಚೇರಿಗೆ ಸಿಬ್ಬಂದಿ ತಡವಾಗಿ ಬರುವ ಹಾಗೂ ಕಚೇರಿಯಲ್ಲಿ ಇಲ್ಲದಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಈ ಸಮಸ್ಯೆ ಬಗೆಹರಿಸಲು ತಹಶೀಲ್ದಾರ್‌ಗೆ ಸೂಚನೆ ನೀಡಿದ್ದೇನೆ’ ಎಂದು ಸಂಸದರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
‘ಕಚೇರಿಯ ಲಿಫ್ಟ್ ಕೆಟ್ಟಿತ್ತು. ಹಿರಿಯ ನಾಗರಿಕರಿಗೆ ಅನುಕೂಲ ಆಗಲೆಂದು ಅದನ್ನು ದುರಸ್ತಿ ಮಾಡಿಸಲಾಗಿದೆ. ಇದಲ್ಲದೇ ಜನರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಜವಾಬ್ದಾರಿ ವಹಿಸಿ ಕ್ರಮ ಕೈಗೊಳ್ಳಬೇಕು’ ಎಂದರು.
‘ತಾಲ್ಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ ಆಗುತ್ತಿರುವುದರಿಂದ ಜನರಿಗೆ ಬಹಳ ತೊಂದರೆಗಳಾಗುತ್ತಿವೆ. ಈ ನಿಟ್ಟಿನಲ್ಲಿ ಚುನಾವಣೆಯನ್ನು ಸಾಧ್ಯವಾದಷ್ಟು ಬೇಗ ನಡೆಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ತಾಲ್ಲೂಕು ಕಚೇರಿ ಜನಸ್ನೇಹಿಯಾಗಿ ರೂಪುಗೊಳ್ಳಬೇಕು. ಈ ನಿಟ್ಟನಲ್ಲಿ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಹಶೀಲ್ದಾರ್, ಅಧಿಕಾರಿಗೆ, ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ’ ಎಂದು ಸಂಸದರು ತಿಳಿಸಿದರು.
ದಾಖಲೀಕರಣ ಪರಿಶೀಲನೆ:
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ರಕ್ಷಣಾ ದಾಖಲೀಕರಣ ಯೋಜನೆ ಕುರಿತು ಸಂಸದರು ಪರಿಶೀಲನೆ ನಡೆಸಿದರು. ‘ಯೋಜನೆಗೆ ಮೈಸೂರನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕು ಕಚೇರಿಯಲ್ಲಿರುವ ಆಧುನಿಕ ಅಭಿಲೇಖಾಲಯ ಕಚೇರಿಗೆ ಭೇಟಿ ನೀಡಿ ದಾಖಲೆಗಳ ಡಿಜಿಟಲೀಕರಣ ಕುರಿತು ಮಾಹಿತಿ ಪಡೆದುಕೊಂಡೆ’ ಎಂದು ಹೇಳಿದರು.
‘ಹಲವು ದಶಕಗಳ ದಾಖಲೆಯ ಸಂರಕ್ಷಣೆ ಕಾರ್ಯ ನಡೆಯುತ್ತಿದೆ. ಕೇಂದ್ರ ಸರ್ಕಾರದ ಈ ಯೋಜನೆ ನಿಜಕ್ಕೂ ಜನಪರವಾಗಿದೆ’ ಎಂದರು.
‘ಬೀದಿಬದಿ ವ್ಯಾಪಾರಿಗಳ ವಲಯ ಸ್ಥಾಪನೆಗೆ ಆದ್ಯತೆ’:
‘ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬೀದಿಬದಿ ವ್ಯಾಪಾರಿಗಳ ವಲಯ ನಿರ್ಮಿಸಲು ಆದ್ಯತೆ ನೀಡಲಾಗುವುದು’ ಎಂದು ಯದುವೀರ್ ತಿಳಿಸಿದರು.
ಗುರುವಾರ ನಗರ ಪ್ರದಕ್ಷಿಣೆ ನಡೆಸಿ, ಬೀದಿಬದಿ ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದ ನಂತರ ಈ ಮಾಹಿತಿ ನೀಡಿದರು.
‘ಬೀದಿಬದಿ ವ್ಯಾಪಾರಿಗಳ ವಲಯಗಳು ಮುಖ್ಯವಾಗಿದ್ದು, ಇದನ್ನು ನಿರ್ಮಿಸಲು ನಾನು ಒತ್ತು ನೀಡುತ್ತೇನೆ. ಶೀಘ್ರದಲ್ಲೇ ಇತರ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.