
ಮೈಸೂರು: ಅರಮನೆ ಅಂಗಳದಲ್ಲಿ ‘ಅರಮನೆ ಮಂಡಳಿ’ಯು ಇದೇ 21ರಿಂದ ‘ಮಾಗಿ ಉತ್ಸವ’ ಪ್ರಯುಕ್ತ ‘ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದು, ಜೊತೆಗೆ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿವೆ.
ಕ್ರಿಸ್‌ಮಸ್ ರಜೆ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರವಾಸಿಗರು ನಗರಕ್ಕೆ ಲಗ್ಗೆ ಇಡಲಿದ್ದು, ಅವರಿಗಾಗಿ 10 ದಿನಗಳ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದೆ. ಡಿ.31ರವರೆಗೆ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಪ್ರವಾಸಿಗರು, ನಾಗರಿಕರು ಹೂಗಳ ಲೋಕವನ್ನು ಕಣ್ತುಂಬಿಕೊಳ್ಳಬಹುದು.
ಡಿ.21ರ ಭಾನುವಾರ ಸಂಜೆ 4ಕ್ಕೆ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಛಾಯಾಚಿತ್ರ ಪ್ರದರ್ಶನ ಹಾಗೂ ಬೊಂಬೆ ಮನೆ ಉದ್ಘಾಟನೆಯೂ ನೆರವೇರಲಿದೆ.
ಶೃಂಗೇರಿ ದೇಗುಲ ವಿಶೇಷ: ಶೃಂಗೇರಿ ಶಾರದಾ ದೇಗುಲ ಮಾದರಿ ಇರಲಿದ್ದು, 50 ಅಡಿ ಅಗಲ, 16 ಅಡಿ ಉದ್ದ ಹಾಗೂ 25 ಅಡಿ ಎತ್ತರ ಇರಲಿದೆ. ಹೂ ಹಾಗೂ ತೆಂಗಿನ ಗರಿಗಳ ಚಪ್ಪರಾಲಂಕಾರವಿದೆ.
ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರಕ್ಕೆ ಹೂ ಮತ್ತು ಸಿರಿಧಾನ್ಯ ಅಲಂಕಾರ ಮಾಡಲಾಗುತ್ತಿದ್ದು, ಮುಮ್ಮಡಿ ಕೃಷ್ಣರಾಜ ಒಡೆಯರ್ ಪ್ರತಿಕೃತಿ, ಸಂವಿಧಾನ ಪ್ರಸ್ತಾವನೆ, ವಿಶ್ವಕಪ್ ವಿಜೇತ ಮಹಿಳಾ ಕ್ರಿಕೆಟ್ ತಂಡ, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸೇನಾ ಪರಿಕರಗಳ ಮಾದರಿಗಳು ಆಕರ್ಷಿಸಲಿವೆ.
ಸಂಗೀತ ವೈಭವ: ಡಿ.21ರಿಂದ 25ರವರೆಗೆ ಸಂಗೀತ ಕಾರ್ಯಕ್ರಮ ಇರಲಿದ್ದು, ಚಲನಚಿತ್ರ ಸಂಗೀತ ನಿರ್ದೇಶಕರಾದ ಮಣಿಕಾಂತ್ ಕದ್ರಿ, ವಾಸುಕಿ ವೈಭವ್, ಗಾಯಕ ಅಜಯ್ ವಾರಿಯರ್ ಈ ಬಾರಿಯ ಆಕರ್ಷಣೆ.
‘11 ವರ್ಷದಿಂದ ಪ್ರತಿ ವರ್ಷಾಂತ್ಯದಲ್ಲಿ ಮಾಗಿ ಉತ್ಸವ ಪ್ರಯುಕ್ತ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದೆ. 25ಸಾವಿರಕ್ಕೂ ಹೆಚ್ಚಿನ ಅಲಂಕಾರಿಕ ಹೂಕುಂಡಗಳು, ಬೋನ್ಸಾಯ್ ಗಿಡಗಳು, 35 ಜಾತಿಯ ಹೂ ಗಿಡಗಳು ಪ್ರದರ್ಶನದಲ್ಲಿದ್ದು, 4 ಲಕ್ಷಕ್ಕೂ ಹೆಚ್ಚು ಹೂಗಳಿಂದ ಚಿತ್ರ ಹಾಗೂ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ಅರಮನೆ ಮಂಡಳಿ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಮಕ್ಕಳ ಕಾರ್ಟೂನ್ ತಾರೆಗಳ ರಂಗು: ಮಕ್ಕಳ ಕಾರ್ಟೂನ್ ತಾರೆಗಳಾದ ಛೋಟಾ ಭೀಮ್, ಮಾಶಾ– ಕರಡಿ ಸೇರಿದಂತೆ ವಿವಿಧ ಮಾದರಿಗಳು ಸೆಳೆಯಲಿವೆ. ಅಂಗಳದಲ್ಲಿ ಫಲಪುಷ್ಪಗಳನ್ನು ವೀಕ್ಷಿಸುತ್ತಲೇ ಜಯಚಾಮರಾಜ ಒಡೆಯರ್ ಅವರ ಕರ್ನಾಟಕ ಸಂಗೀತ ಕೃತಿಗಳನ್ನು ಆಲಿಸುವ ವ್ಯವಸ್ಥೆ ಮಾಡಲಾಗಿದೆ.
ಉದ್ಘಾಟನಾ ದಿನದಂದು 500 ಜನರಿಗೆ ತುಳಸಿ, ಮಲ್ಲಿಗೆ, ವೀಳ್ಯೆದೆಲೆ ಮೊದಲಾದ ಸಸಿಗಳನ್ನು ಸಾಂಕೇತಿಕವಾಗಿ ನೀಡಲಾಗುತ್ತಿದೆ. ನಿತ್ಯ ಸಂಜೆ 7ರಿಂದ 9ರ ವರೆಗೆ ಅರಮನೆ ವಿದ್ಯುತ್ ದೀಪಗಳು ಬೆಳಗಲಿವೆ.
ಸಾಂಸ್ಕೃತಿಕ ಕಾರ್ಯಕ್ರಮ
ಡಿ.21ರಂದು ಸಂಜೆ 4.30ರಿಂದ ಎಸ್. ಸಂಪತ್ ಮತ್ತು ತಂಡದಿಂದ ವಾದ್ಯಸಂಗೀತ ಯೋಗಶ್ರೀ ಅವರಿಂದ ಭಕ್ತಿಗೀತೆ ಎಚ್.ಎಸ್.ಸ್ನೇಹಾ ಅವರಿಂದ ಸಂಸ್ಥಾನ ಗೀತೆ. ಸಂಜೆ 7.30ರಿಂದ ಮಣಿಕಾಂತ್ ಕದ್ರಿ ಗಾಯಕಿ ಹಂಸಿಕಾ ಅಯ್ಯರ್ ಅವರಿಂದ ಸಂಗೀತ ಸಂಭ್ರಮ. ಡಿ.22ರಂದು ಸಂಜೆ 5ಕ್ಕೆ ಭಾರತೀಯ ವಿದ್ಯಾಭವನ ಕಲಾವಿದರಿಂದ ನೃತ್ಯನಾಟಕ. ಸುಗಮ ಸಂಗೀತ– ಋತ್ವಿಕ್ ರಾಜ್ ಮನೋ ಮ್ಯೂಸಿಕ್ ಲೈನ್ಸ್ ತಂಡದಿಂದ ಕವಿ ಕಾವ್ಯ ಸಂಗೀತ. ರಾತ್ರಿ 8.15ಕ್ಕೆ ಎಚ್.ಎಲ್.ಶಿವಶಂಕರಸ್ವಾಮಿ ಅವರಿಂದ ‘ರಾಗ ರಿದಂ’ ಫ್ಯೂಷನ್ ಸಂಗೀತ. ಡಿ.23ರಂದು ಸಂಜೆ 5ಕ್ಕೆ ಸುಗಮ ಸಂಗೀತ– ಭಾಗ್ಯಶ್ರೀಗೌಡ ಸಂಗೀತ ರಸಸಂಜೆ– ರಮೇಶ್ ಕುಮಾರ್ ಭರತನಾಟ್ಯ– ಸ್ಪರ್ಶಾ ಶೆಣೈ ರಾತ್ರಿ 8ಕ್ಕೆ ಸರಿಗಮಪ ಸಂಗೀತ ಕಲಾತಂಡದಿಂದ ‘ಸಂಗೀತಯಾನ’. ಡಿ.24ರಂದು ಸಂಜೆ 5ಕ್ಕೆ ಫ್ಯೂಷನ್ ಸಂಗೀತ– ಎಂ.ಆರ್.ಹನುಮಂತರಾಜು ಭಾವ ಸಂಗೀತ– ದಿವ್ಯಾ ಸಂಗೀತ ಗೋಷ್ಠಿ– ರಾ.ಸ.ನಂದಕುಮಾರ್. ರಾತ್ರಿ 8ಕ್ಕೆ ಗಾಯಕ ಅಜಯ್ ವಾರಿಯರ್ ಅವರಿಂದ ‘ಸ್ವರ ವೈಭವ’. ಡಿ.25ರಂದು ಸಂಜೆ 5ರಿಂದ ಲಘು ಸಂಗೀತ– ಪೂರ್ಣಿಮಾ ಹರೀಶ್ ನೃತ್ಯ– ಆರ್.ಪ್ರೇಕ್ಷಾ ಹರಿನಾಮ ಸಂಕೀರ್ತನ– ಇಸ್ಕಾನ್. ಫಲಪುಷ್ಪ ಗೀತಯಾನ– ಪಿ.ಆಕಾಶ್. ರಾತ್ರಿ 8ಕ್ಕೆ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರಿಂದ ‘ಸಂಗೀತ ಗೀತಾಮೃತ’. ಡಿ.31ರಂದು ರಾತ್ರಿ 11ಕ್ಕೆ ಪೊಲೀಸ್ ಬ್ಯಾಂಡ್ ವಾದ್ಯ ಸಂಗೀತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.