ADVERTISEMENT

ಅರಮನೆಯಲ್ಲಿ ವಿದ್ವಾನ್‌ ಎಚ್.ಎಲ್‌.ಶಿವಶಂಕರಸ್ವಾಮಿ ಮತ್ತು ತಂಡದಿಂದ ‘ರಾಗ ರಿದಂ’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 5:22 IST
Last Updated 23 ಡಿಸೆಂಬರ್ 2025, 5:22 IST
ಅರಮನೆಯಲ್ಲಿ ಸೋಮವಾರ ಸಂಗೀತ ಕಾರ್ಯಕ್ರಮ 
ಅರಮನೆಯಲ್ಲಿ ಸೋಮವಾರ ಸಂಗೀತ ಕಾರ್ಯಕ್ರಮ    

ಮೈಸೂರು: ಚಳಿಸಂಜೆಯಲಿ ಅರಮನೆಯತ್ತ ಬಂದ ಪ್ರೇಕ್ಷಕರು ಸಂಗೀತ ಅಲೆಯಲ್ಲಿ ಮಿಂದರು. ವಿದ್ವಾನ್‌ ಎಚ್.ಎಲ್‌.ಶಿವಶಂಕರಸ್ವಾಮಿ ಮತ್ತು ತಂಡದವರು ಪ್ರಸ್ತುತ ಪಡಿಸಿದ ‘ರಾಗ ರಿದಂ’ನಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತಕ್ಕೆ ಕಿವಿಯಾದರು. 

ಅರಮನೆಯ ಆವರಣದಲ್ಲಿ ನಡೆಯುತ್ತಿರುವ ‘ಮಾಗಿ ಉತ್ಸವ’ ಪ್ರಯುಕ್ತ ಆಯೋಜಿಸಿರುವ ಅರಮನೆ ಫಲಪುಷ್ಪ ಪ್ರದರ್ಶನದಲ್ಲಿ ಸೋಮವಾರ ಶಿವಶಂಕರಸ್ವಾಮಿ ಅವರು ಮೃದಂಗದಲ್ಲಿ ಎಬ್ಬಿಸಿದ ತರಂಗಕ್ಕೆ ವಯಲಿನ್‌ನಲ್ಲಿ ಜ್ಯೋತ್ಸ್ನಾಶ್ರೀಕಾಂತ್, ಕೊಳಲಿನಲ್ಲಿ ರಘು ಸಿಂಹ, ಕೀ ಬೋರ್ಡ್‌ನಲ್ಲಿ ಪುರುಷೋತ್ತಮ್‌– ವೀರೇಶ್‌ ಜೋಡಿ ಮೋಡಿ ಮಾಡಿತು.

‘ಭೋ ಶಂಭೋ ಶಿವ ಶಂಭೋ ಸ್ವಯಂಭೋ’ ಭಜನೆಯನ್ನು ನುಡಿಸಿದ ಅವರು ಭಕ್ತಿ ರಸವನ್ನು ಅಂಗಳದಲ್ಲಿ ತುಂಬಿದರು. ಕರ್ನಾಟಕ ಸಂಗೀತದ ವಾಗ್ಗೇಯಕಾರ ತ್ಯಾಗರಾಜ ಅವರ ಹಿಂದೋಳ ರಾಗದ ಕೃತಿ ‘ಸಾಮಜವರಗಮನ’ ಅನ್ನು 17 ಸಂಗೀತಗಾರರೂ ತಮ್ಮ ಪ್ರಸ್ತುತಿಯೊಂದಿಗೆ ತುದಿಗಾಲಿನಲ್ಲಿ ನಿಲ್ಲಿಸಿದರಲ್ಲದೆ, ತನ್ಮಯರಾಗುವಂತೆಯೂ ಮಾಡಿದರು. ಕೀರ್ತನಾ ಅವರ ಗಾಯನವೂ ತಲೆದೂಗಿಸಿತು. 

ADVERTISEMENT

ತವಿಲ್‌ನಲ್ಲಿ ಎಂ.ನಾರಾಯಣ, ತಬಲಾದಲ್ಲಿ ಎಸ್‌.ನಾಗರಾಜ್, ಅಮಿತ್‌ ರಾಜ್, ಬೇಸ್‌ ಗಿಟಾರ್‌ನಲ್ಲಿ ಪ್ರದೀಪ್‌ ಕಿಗ್ಗಲ್, ಡ್ರಮ್ಸ್‌ನಲ್ಲಿ ಕಾರ್ತಿಕ್ ಮಣಿ, ವಿವಿಧ ತಾಳವಾದ್ಯದಲ್ಲಿ ಅನುಷ್‌ ಶೆಟ್ಟಿ, ಪ್ರಾರ್ಥನಾ, ಸುಜಿತ್, ಚಂಡೆಯಲ್ಲಿ ಪ್ರಾಣೇಶ್, ಡೋಲಿನಲ್ಲಿ ಪ್ರಸನ್ನ ಸಾಥ್ ನೀಡಿದರು. 

ಇದಕ್ಕೂ ಮೊದಲು ಭಾರತೀಯ ವಿದ್ಯಾಭವನ ಕಲಾವಿದರು ನೃತ್ಯನಾಟಕ ಪ್ರದರ್ಶಿಸಿದರೆ, ಋತ್ವಿಕ್ ರಾಜ್ ಸುಗಮ ಸಂಗೀತ ನಡೆಸಿಕೊಟ್ಟರು. ಮನೋ ಮ್ಯೂಸಿಕ್ ಲೈನ್ಸ್‌ ತಂಡವು ಕವಿ ಕಾವ್ಯ ಸಂಗೀತ ಪ್ರಸ್ತುತ ಪಡಿಸಿತು.  

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ಪಾಲ್ಗೊಂಡಿದ್ದರು. 

ಸಂಗೀತಯಾನ ಇಂದು: 

ಡಿ.23ರಂದು ಸಂಜೆ 5ಕ್ಕೆ ಸುಗಮ ಸಂಗೀತ– ಭಾಗ್ಯಶ್ರೀಗೌಡ, ಸಂಗೀತ ರಸಸಂಜೆ– ರಮೇಶ್‌ ಕುಮಾರ್, ಭರತನಾಟ್ಯ– ಸ್ಪರ್ಶಾ ಶೆಣೈ, ರಾತ್ರಿ 8ಕ್ಕೆ ಸರಿಗಮಪ ಸಂಗೀತ ಕಲಾತಂಡದಿಂದ ‘ಸಂಗೀತಯಾನ’ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.