ADVERTISEMENT

ಮೈಸೂರು: ಬೆನ್ನುಮೂಳೆ ಮುರಿದರೂ ಛಲ ‘ಅನಂತ’

ನಜರ್‌ಬಾದ್‌ನ ಅನಂತರಾವ್‌ಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶ ಪ್ರತಿನಿಧಿಸುವ ಕನಸು

ಮೋಹನ್ ಕುಮಾರ ಸಿ.
Published 3 ಡಿಸೆಂಬರ್ 2024, 5:48 IST
Last Updated 3 ಡಿಸೆಂಬರ್ 2024, 5:48 IST
ಡಿಸ್ಕಸ್‌ ಥ್ರೋ ಅಭ್ಯಾಸದಲ್ಲಿ ಅನಂತ ರಾವ್‌
ಡಿಸ್ಕಸ್‌ ಥ್ರೋ ಅಭ್ಯಾಸದಲ್ಲಿ ಅನಂತ ರಾವ್‌   

ಮೈಸೂರು: ‘2010ರ ದಸರಾ ಕ್ರೀಡಾಕೂಟದ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಮಾಡಿದ ಒಂದು ತಪ್ಪು ನನ್ನನ್ನು ಕಾಯಂ ಆಗಿ ವ್ಹೀಲ್‌ಚೇರ್‌ನ ಮೇಲೆ ಕೂರಿಸಿತು. ‍‍ಖಿನ್ನತೆಗೊಳಗಾದೆ, ಧೈರ್ಯ ತಂದುಕೊಂಡು ಹೊರಬಂದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಗುರಿಯೊಂದಿಗೆ ಮತ್ತೆ ಆಡಲು ಆರಂಭಿಸಿದೆ. 8 ವರ್ಷದ ನಂತರ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾದೆ’

ನಗರದ ಮಹಾರಾಜ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ ಓದುವಾಗ ನಡೆದ ಘಟನೆಯನ್ನು ನೆನೆಯುತ್ತಲೇ ನಗರದ ಪ್ಯಾರಾ ಅಥ್ಲೀಟ್‌ ಅನಂತರಾವ್ ಮಾತು ಆರಂಭಿಸಿದರು.

4ನೇ ತರಗತಿಯಲ್ಲಿದ್ದಾಗ ಒಲಿಂಪಿಕ್‌ನಲ್ಲಿ ಪದಕ ಗೆಲ್ಲುವ ಕನಸಿನೊಂದಿಗೆ ಜಿಮ್ನಾಸ್ಟಿಕ್ಸ್ ತರಬೇತಿ ಪಡೆಯಲು ಆರಂಭಿಸಿದ ಅನಂತ್ ಅವರಿಗೆ, ಆಟೊ ಚಾಲಕರಾದ ತಂದೆ ಬಾಬುರಾವ್ ಹಾಗೂ ಲಕ್ಷ್ಮಿಬಾಯಿ ನೆರವಾದರು. ಮಹಾರಾಜ ಕಾಲೇಜು ಸೇರಿದ ಮೇಲೆ ಉತ್ತಮ ತರಬೇತಿಯೂ ದೊರೆಯಿತು.

ADVERTISEMENT

ಇದಕ್ಕೂ ಮೊದಲು ಮಹಾರಾಜ ವಿಭಜಿತ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನ ದಿನಗಳಲ್ಲಿಯೂ ಅಥ್ಲೆಟಿಕ್ಸ್‌ನಲ್ಲಿ ಅನಂತ್‌ ಮುಂದಿದ್ದರು. ಜಿಮ್ನಾಸ್ಟಿಕ್ಸ್‌ನಲ್ಲಿ ರಾಜ್ಯ ಹಾಗೂ ದಕ್ಷಿಣ ವಲಯ ಕೂಟಗಳಲ್ಲಿ ಅವರು ಮಿಂಚಿದ್ದರು. ರಾಜ್ಯ ಹಾಗೂ ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟಗಳಲ್ಲಿ ನೂರಕ್ಕೂ ಹೆಚ್ಚು ಪದಕ ಬೇಟೆಯಾಡಿದ್ದ ಅವರು, ದಕ್ಷಿಣ ಭಾರತದ ಜ್ಯೂನಿಯರ್ಸ್ ವಿಭಾಗದಲ್ಲಿ ಎರಡು ಬೆಳ್ಳಿ ಮೂರು ಕಂಚು ಗೆದ್ದಿದ್ದರು. ಆದರೆ, 21ರ ವಯಸ್ಸಿನಲ್ಲಿ ದಸರಾ ಕ್ರೀಡಾಕೂಟದ ಅನಾಹುತವು ಕನಸುಗಳನ್ನು ಕಮರಿಸಿತು.

‘ದಸರಾ ಕೂಟದಲ್ಲಿ ಜಿಮ್ನಾಸ್ಟಿಕ್ಸ್‌ ‘ಫ್ಲೋರ್‌ ಎಕ್ಸ್‌ಸೈಸ್‌’ ಪ್ರದರ್ಶಿಸುವಾಗ ಸಣ್ಣ ತಪ್ಪಿನಿಂದ ನೆಲಕ್ಕೆ ತಲೆಕೊಟ್ಟೆ. ಇಡೀ ದೇಹದ ಭಾರ ಕತ್ತಿನ ಮೇಲೆ ಬಿದ್ದು ಬೆನ್ನುಮೂಳೆ ಮುರಿಯಿತು. ಅದರಿಂದ ಚೇತರಿಸಿಕೊಳ್ಳಲು ಎರಡು ವರ್ಷ ಆಸ್ಪತ್ರೆ, ಚಿಕಿತ್ಸೆ ಎಂದು ವ್ಹೀಲ್‌ಚೇರ್‌ನಲ್ಲಿ ಓಡಾಡಿದೆ’ ಎಂದು ಅನಂತರಾವ್ ನೆನೆದರು.

‘‍‍ಪ್ಯಾರಾ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಐದು ವರ್ಷ ಅಭ್ಯಾಸ ನಡೆದಿದೆ. 2018ರಿಂದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವೆ. ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡೆ. 2019, 2021 ಹಾಗೂ 2022ರಲ್ಲಿ ಅಂತರರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವೆ’ ಎಂದರು.

‘ರಾಷ್ಟ್ರಮಟ್ಟದ ಕ್ರೀಡಾಕೂಟಗಳ ಕ್ಲಬ್‌ ಥ್ರೋ, ಡಿಸ್ಕಸ್‌ ಥ್ರೋನಲ್ಲಿ ಮೂರು ಬೆಳ್ಳಿ ಹಾಗೂ ಒಂದು ಚಿನ್ನ ಗೆದ್ದಿರುವೆ. ಇದೀಗ ಟೇಬಲ್ ಟೆನಿಸ್‌ ಅಭ್ಯಾಸ ನಡೆಸುತ್ತಿದ್ದು, ಮುಂದಿನ ವರ್ಷದಿಂದ ಟೂರ್ನಿಗಳಲ್ಲಿ ಭಾಗವಹಿಸುವೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತೇನೆ’ ಎನ್ನುತ್ತಾರೆ ಅವರು.   

ಕಳೆದ ನಾಲ್ಕು ವರ್ಷದಿಂದ ತರಬೇತಿ ಪಡೆಯಲು ಬೆಂಗಳೂರಿನಲ್ಲಿಯೇ ಅನಂತ್‌ ನೆಲೆಸಿದ್ದಾರೆ. ಟೇಬಲ್‌ ಟೆನಿಸ್‌ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ನಿತ್ಯ ಅಭ್ಯಾಸ ಮಾಡುತ್ತಿದ್ದಾರೆ.

2023ರಲ್ಲಿ ಪುಣೆಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ಅನಂತರಾವ್
2010 ದಸರಾ ಕ್ರೀಡಾಕೂಟದಲ್ಲಿ ತೀವ್ರ ಗಾಯ– ಅಂಗವಿಕಲತೆ ಚಿಕಿತ್ಸೆಗಾಗಿ ಎರಡು ವರ್ಷ ಆಸ್ಪತ್ರೆ ಓಡಾಟ ವ್ಹೀಲ್‌ಚೇರ್‌ ಮೇಲೆ ಕುಳಿತು ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಸಾಧನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.