
ಮೈಸೂರು: ‘ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ ಕಳೆದ ಐದು ತಿಂಗಳಲ್ಲಿ ₹12.3 ಕೋಟಿ ಮೌಲ್ಯದ ಸ್ಕ್ರ್ಯಾಪ್ ಮಾರಾಟ ಮಾಡಲಾಗಿದ್ದು, ಈ ಪೈಕಿ ಅಕ್ಟೋಬರ್ ಒಂದರಲ್ಲೇ ₹4.5 ಕೋಟಿ ಆದಾಯ ದೊರೆತಿದೆ’ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಮುದಿತ್ ಮಿತ್ತಲ್ ತಿಳಿಸಿದರು.
ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ ಸೋಮವಾರ ಇಲ್ಲಿನ ರೈಲ್ವೆ ಮೈದಾನದಲ್ಲಿ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ವಿಭಾಗದಲ್ಲಿ ರೈಲುಗಳ ಸಮಯಪಾಲನೆ ಶೇ 89ರಿಂದ ಶೇ 91.68ಕ್ಕೆ ಸುಧಾರಣೆ ಕಂಡಿದೆ. ಸರಕು ಸಾಗಣೆಯು ಹೋದ ವರ್ಷಕ್ಕಿಂತ ಶೇ 2ರಷ್ಟು ಸುಧಾರಣೆ ಕಂಡಿದೆ. ದೀರ್ಘ ಮಾರ್ಗದ ಲಾಭದಿಂದಾಗಿ ಆದಾಯವು ಶೇ 9ರಷ್ಟು ಹೆಚ್ಚಿದೆ. ಚಿಕ್ಕಜಾಜೂರು–ರಾಯದುರ್ಗ ವಿಭಾಗವನ್ನು 25 ಟನ್ ಆಕ್ಸಲ್ ಲೋಡ್‌ಗೆ ನವೀಕರಿಸಿರುವುದು ಒಂದೇ ರೇಕಿನಲ್ಲಿ ಹೆಚ್ಚು ಸರಕು ಸಾಗಣೆಗೆ ಸಹಕಾರಿಯಾಗಿದೆ’ ಎಂದು ವಿವರಿಸಿದರು.
‘ಲೆವೆಲ್ ಕ್ರಾಸಿಂಗ್ ಗೇಟ್‌ಗಳ ಸುರಕ್ಷತೆಗೂ ಒತ್ತು ನೀಡಲಾಗಿದೆ. ಈ ಅವಧಿಯಲ್ಲಿ 8 ರೈಲ್ವೆ ಮಂಡಳಿ ಸುರಕ್ಷತಾ ಅಭಿಯಾನ ಮತ್ತು 4 ಮುಖ್ಯಾಲಯ ಸುರಕ್ಷತಾ ಅಭಿಯಾನ ನಡೆಸಲಾಗಿದೆ. ಸಂಪೂರ್ಣ ಘಾಟ್ ವಿಭಾಗ ವಿದ್ಯುದ್ದೀಕರಣಗೊಂಡಿದ್ದು, ವಂದೇ ಭಾರತ್ ರೈಲು ಸಂಚಾರಕ್ಕೆ ಅನುಕೂಲವಾಗಿದೆ. ಹಲವು ಟ್ರ್ಯಾಕ್ಷನ್ ಉಪಕೇಂದ್ರಗಳು (ಟಿಎಸ್‌ಎಸ್) ಕಾರ್ಯಾರಂಭ ಮಾಡಿದ್ದು, ಕಳೆದ ಐದು ತಿಂಗಳಲ್ಲಿ 46 ರೈಲುಗಳನ್ನು ಡೀಸೆಲ್‌ನಿಂದ ವಿದ್ಯುತ್ ಚಾಲಿತಕ್ಕೆ ಪರಿವರ್ತಿಸಲಾಗಿದೆ’ ಎಂದು ಮಾಹಿತಿ ನೀಡಿದರು.
‘10 ಶಾಶ್ವತ ವೇಗ ನಿರ್ಬಂಧಗಳು ಮತ್ತು 3 ವಿಭಾಗಗಳಲ್ಲಿ ವೇಗ ಹೆಚ್ಚಿಸಲಾಗಿದೆ. 4 ರಸ್ತೆ ಮೇಲ್ಸೇತುವೆ/ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. ಪರಿಶೀಲನೆಯಿಂದ ₹76 ಕೋಟಿ ಉಳಿತಾಯವಾಗಿದೆ. 828 ಪಿಪಿಒಗಳ ಲಿಂಕಿಂಗ್ ನಡೆದಿದೆ. ₹13 ಕೋಟಿ ಪಿಎಲ್‌ಬಿ (ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್)ಯನ್ನು ಸಕಾಲದಲ್ಲಿ ವಿತರಿಸಲಾಗಿದೆ. ಡಿ.31ರೊಳಗೆ 559 ಸಿಬ್ಬಂದಿಗೆ ಪದೋನ್ನತಿ ನೀಡಿ, ಬಾಕಿ ಸಮಸ್ಯೆ ನಿವಾರಿಸಲಾಗಿದೆ. ಆರ್‌ಪಿಎಫ್ 63 ಜನರನ್ನು ರಕ್ಷಿಸಿದ್ದು, ಅಪಹರಣವಾಗಿದ್ದ ಆರು ತಿಂಗಳ ಮಗುವನ್ನು ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ನೆರವಿನಿಂದ ಪತ್ತೆ ಹಚ್ಚಿ ತಾಯಿ ಮಡಿಲಿಗೆ ಸೇರಿಸಲಾಯಿತು’ ಎಂದು ತಿಳಿಸಿದರು.
ರೈಲ್ವೆ ಸಿಬ್ಬಂದಿ, ಅವರ ಕುಟುಂಬದವರು ಹಾಗೂ ಲಲಿತಾ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಮ್ಮಾಸ್ ಹಮೀದ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.