ADVERTISEMENT

ಮೈಸೂರು | ಸಾಹಿತ್ಯ ಕಲಿಕೆ; ಲೋಕ ಗ್ರಹಿಕೆ: ಪ‍್ರೊ.ಬಸವರಾಜ ಕಲ್ಗುಡಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 3:04 IST
Last Updated 5 ಫೆಬ್ರುವರಿ 2026, 3:04 IST
<div class="paragraphs"><p>ಮಾನಸಗಂಗೋತ್ರಿಯ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ&nbsp;ಬುಧವಾರ ಆಯೋಜಿಸಿದ್ದ ‘ಪದವಿ ಪಠ್ಯರಚನೆ– ಬೋಧನೆ ಪ್ರಶ್ನೆಪತ್ರಿಕೆ ತಯಾರಿ ಮತ್ತು ಮೌಲ್ಯಮಾಪನ ವಿಧಿವಿಧಾನಗಳು’ ಕಾರ್ಯಾಗಾರವನ್ನು&nbsp;ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ ಉದ್ಘಾಟಿಸಿದರು.</p></div>

ಮಾನಸಗಂಗೋತ್ರಿಯ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ‘ಪದವಿ ಪಠ್ಯರಚನೆ– ಬೋಧನೆ ಪ್ರಶ್ನೆಪತ್ರಿಕೆ ತಯಾರಿ ಮತ್ತು ಮೌಲ್ಯಮಾಪನ ವಿಧಿವಿಧಾನಗಳು’ ಕಾರ್ಯಾಗಾರವನ್ನು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ ಉದ್ಘಾಟಿಸಿದರು.

   

ಮೈಸೂರು: ‘ಸಾಹಿತ್ಯಿಕ ಭಾಷೆ ಲೋಕ ನೋಡುವ ಬಗೆಯನ್ನು ಕಲಿಸುವ ಹೊಸ ಭಾಷೆ’ ಎಂದು ವಿಮರ್ಶಕ ಪ‍್ರೊ.ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು. 

ಮಾನಸಗಂಗೋತ್ರಿಯ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಮಹಾರಾಜ ಕಾಲೇಜು ಮತ್ತು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮಂಡಳಿಯು ಬುಧವಾರ ಆಯೋಜಿಸಿದ್ದ ‘ಪದವಿ ಪಠ್ಯರಚನೆ– ಬೋಧನೆ ಪ್ರಶ್ನೆಪತ್ರಿಕೆ ತಯಾರಿ ಮತ್ತು ಮೌಲ್ಯಮಾಪನ ವಿಧಿವಿಧಾನಗಳು’ ಕಾರ್ಯಾಗಾರದಲ್ಲಿ ‘ಭಾಷಾ ಪಠ್ಯದ ಮಹತ್ವ ಮತ್ತು ಆಯ್ಕೆ’ ಕುರಿತು ಮಾತನಾಡಿದರು.  

ADVERTISEMENT

‘ಲೋಕದ ವೈವಿಧ್ಯವನ್ನು ಗ್ರಹಿಸುವ ಪಠ್ಯ ಭಾಷೆಯನ್ನು ಬೋಧಕರು ಅರ್ಥಮಾಡಿಕೊಳ್ಳಬೇಕು. ಪಠ್ಯದ ವಸ್ತು, ನಿರ್ಮಿತಿ, ವರ್ಣ ವೈವಿಧ್ಯವೇನು? ಮಕ್ಕಳನ್ನು ಒಳಗೊಳ್ಳುವ ಬಗೆ ಹೇಗೆ ಎಂಬುದನ್ನು ಬೋಧಕರು ಯೋಚಿಸಬೇಕು’ ಎಂದರು. 

‘ಪಠ್ಯ ಎಂಬುದು ಅಧಿಕೃತವಾದರೂ ಅದು ನಿಮಿತ್ತವಷ್ಟೇ. ಕವಿ, ಲೇಖಕನ ಆಲೋಚನೆಯಷ್ಟೇ ಬೋಧಕನಿಗೆ ಮುಖ್ಯವಲ್ಲ. ಅದನ್ನು ಆಕರ ಮಾಡಿಕೊಂಡು ನಮ್ಮ ಆಲೋಚನೆಗಳನ್ನು ವಿಸ್ತರಿಸಬೇಕು’ ಎಂದರು. 

‘ಪಠ್ಯ ಕೇಂದ್ರಿತ ಓದುವ ವಿಧಾನದ ಜೊತೆಗೆ ಬಹು ಆಯಾಮಗಳಲ್ಲಿ ನಮ್ಮ ಗ್ರಹಿಕೆಯನ್ನು ಮಕ್ಕಳಿಗೆ ದಾಟಿಸಬೇಕು. ಕಾವ್ಯದ ವಸ್ತು, ಆಶಯದ ಸಾರಾಂಶವನ್ನು ಹೇಳುವುದಲ್ಲದೇ ಮಕ್ಕಳ ಭಾವ, ಅನುಭವದ ಮಾದರಿಯನ್ನು ಶಿಕ್ಷಕರು ಸಾರಸಂಗ್ರಹ ಮಾಡಿ ಹೇಳಿದಾಗ ಬೋಧನೆ ಪರಿಣಾಮಕಾರಿ ಆಗುತ್ತದೆ. ಹೀಗಾಗಿಯೇ ಭಾಷಾ ಪಠ್ಯವೆಂದರೆ ಕಲಿತು ಕಲಿಸುವ ಚೈತನ್ಯಪೂರ್ಣ ಸಂಬಂಧ’ ಎಂದು ಹೇಳಿದರು.    

‘ಯಾವುದೇ ಪಠ್ಯ ನಿಮಿತ್ತ ಮಾತ್ರವೆಂದು ಪರಿಗಣಿಸಬೇಕು. ಎರಡು, ಮೂರು ಪಠ್ಯಗಳನ್ನು ಸಂವಾದಿಯಾಗಿಸಿ ಬೋಧಿಸಬೇಕು. ಒಂದು ವಸ್ತುವಿನ ಬಗ್ಗೆ ವಿವಿಧ ಕವಿಗಳ ಅಭಿವ್ಯಕ್ತಿಯನ್ನು ಬೋಧಿಸಿದರೆ ಸಾಹಿತ್ಯಕ ಚಿಂತನೆ, ವಿಮರ್ಶಾ ಪ್ರಜ್ಞೆಯು ವಿಸ್ತಾರವಾಗುತ್ತದೆ’ ಎಂದು ಹೇಳಿದ ಕಲ್ಗುಡಿ ಅವರು, ಕೆ.ಎಸ್‌.ನರಸಿಂಹಸ್ವಾಮಿ ಅವರ ‘ಮೈಸೂರು ಮಲ್ಲಿಗೆ’, ದ.ರಾ.ಬೇಂದ್ರೆ ಅವರ ‘ಸಖಿಗೀತ’ ಕಾವ್ಯದ ಸಾಲುಗಳನ್ನು ಉಲ್ಲೇಖಿಸಿದರು. 

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ತರಬೇತಿ ಕೇಂದ್ರದ ನಿರ್ದೇಶಕಿ ಪ್ರೊ.ಎಚ್‌.‍ಪಿ.ಜ್ಯೋತಿ, ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ.ವಿ.ಷಣ್ಮುಗಂ, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಡಿ.ವಿಜಯಲಕ್ಷ್ಮಿ, ಕನ್ನಡ ಸಂಘದ ಸಂಚಾಲಕಿ ಪ್ರೊ.ಬಿ.ಪಿ.ಆಶಾಕುಮಾರಿ, ಕನ್ನಡ ಅಧ್ಯಯನ ಮಂಡಳಿಯ ಪ್ರೊ.ಟಿ.ಕೆ.ಕೆಂಪೇಗೌಡ ಪಾಲ್ಗೊಂಡಿದ್ದರು. 

ಪ್ರೊ.ಬಸವರಾಜ ಕಲ್ಗುಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.