
ಮೈಸೂರು: ಹಂಚ್ಯಾ–ಸಾತಗಳ್ಳಿ ಸಮೀಪ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ನಗರದಲ್ಲಿನ ಕಟ್ಟಡ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶೀಘ್ರ ಮುಕ್ತಿ ದೊರೆಯುವ ನಿರೀಕ್ಷೆ ಇದೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಪಾಲಿಕೆಗೆ ಹಂಚ್ಯಾ–ಸಾತಗಳ್ಳಿ ಬಳಿ 9 ಎಕರೆಯಷ್ಟು ಜಾಗ ನೀಡಿದ್ದು, ಅದರಲ್ಲಿಯೇ ಈ ಘಟಕ ತಲೆ ಎತ್ತುತ್ತಿದೆ. ಕಾಂಪೌಂಡ್ ನಿರ್ಮಾಣ ಸೇರಿದಂತೆ ವಿವಿಧ ಸಿವಿಲ್ ಕಾಮಗಾರಿಗಳು ಈಗಾಗಲೇ ಆರಂಭಗೊಂಡಿವೆ.
ಯೋಜನೆಗೆ ಒಟ್ಟು ₹11 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಇದರಲ್ಲಿ ಸಿವಿಲ್ ಕಾಮಗಾರಿಗಳಿಗೆ ₹7 ಕೋಟಿ ವ್ಯಯಿಸಲಾಗುತ್ತಿದೆ. ಯಂತ್ರೋಪಕರಣ ಹಾಗೂ ಅಗತ್ಯ ವಾಹನಗಳ ಖರೀದಿಗೆ ಉಳಿದ ಹಣ ವಿನಿಯೋಗ ಆಗಲಿದೆ. ಮುಂದಿನ ಆರು ತಿಂಗಳ ಒಳಗೆ ಈ ಘಟಕ ತೆರೆಯುವ ನಿರೀಕ್ಷೆ ಇದೆ.
ಸಮಸ್ಯೆಗೆ ಮುಕ್ತಿ:
ಮೈಸೂರು ನಗರ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ನಿತ್ಯ ನೂರಾರು ಹೊಸ ಕಟ್ಟಡಗಳು ತಲೆ ಎತ್ತುತ್ತಿವೆ. ಹಳೇ ಕಟ್ಟಡಗಳು ನವೀಕರಣದ ಹೆಸರಿನಲ್ಲಿ ಹೊಸ ರೂಪ ಪಡೆದುಕೊಳ್ಳುತ್ತಿವೆ. ಆದರೆ ಹೀಗೆ ನಿರ್ಮಾಣ ಕಾಮಗಾರಿಯಲ್ಲಿ ಉಳಿಯುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದೇ ಮಹಾನಗರ ಪಾಲಿಕೆಗೂ ಸವಾಲಾಗಿದೆ. ಈವರೆಗೂ ಈ ತ್ಯಾಜ್ಯವನ್ನು ವಿಲೇವಾರಿ ಮಾಡುವ ವ್ಯವಸ್ಥೆಯೇ ಇಲ್ಲವಾಗಿದೆ. ಬಹುತೇಕ ಕಡೆಗಳಲ್ಲಿ ನಿರ್ಜನ ಪ್ರದೇಶ, ಖಾಲಿ ಗುಂಡಿಗಳಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಕೆರೆಗಳನ್ನು ತ್ಯಾಜ್ಯಗಳಿಂದ ಮುಚ್ಚಲಾಗುತ್ತಿದೆ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಆಗಿದೆ. ಸ್ವಚ್ಛ ಸರ್ವೇಕ್ಷಣೆ ರ್‍ಯಾಂಕಿಂಗ್‌ನಲ್ಲಿ ಪಾಲಿಕೆಗೂ ಹಿನ್ನಡೆ ಆಗುತ್ತಿದೆ.
ಸಂಗ್ರಹ ಹೇಗೆ?:
ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಸುವ ರಿಯಲ್ ಎಸ್ಟೇಟ್ ಬಿಲ್ಡರ್ಸ್‌ಗಳು ತಮ್ಮಲ್ಲಿ ಉಳಿಯುವ ಘನತ್ಯಾಜ್ಯವನ್ನು ಈ ಘಟಕಕ್ಕೆ ತಮ್ಮದೇ ವೆಚ್ಚದಲ್ಲಿ ತಂದುಕೊಡಬೇಕಾಗುತ್ತದೆ. ಅದರ ಬದಲು ಬೇರೆಡೆ ಕಸ ಸುರಿದಲ್ಲಿ ಅವರಿಗೆ ಪಾಲಿಕೆ ದಂಡ ವಿಧಿಸಲಿದೆ.
‘ಸಣ್ಣ ಪ್ರಮಾಣದಲ್ಲಿ ಸಂಗ್ರಹವಾಗುವ ತ್ಯಾಜ್ಯಗಳ ವಿಲೇವಾರಿಗೆ ಪಾಲಿಕೆಯಿಂದಲೇ ವಾಹನ ಸೇವೆ ಒದಗಿಸಿ, ಅದಕ್ಕೆ ತಗಲುವ ವೆಚ್ಚವನ್ನು ಸಂಬಂಧಿಸಿದ ವ್ಯಕ್ತಿಗಳಿಂದ ಸಂಗ್ರಹಿಸಲು ಯೋಜಿಸಲಾಗಿದೆ’ ಎನ್ನುತ್ತಾರೆ ಪಾಲಿಕೆಯ ಸ್ವಚ್ಛಭಾರತ್ ಮಿಷನ್ ನೋಡಲ್ ಅಧಿಕಾರಿ ಕೆ.ಎಸ್. ಮೃತ್ಯುಂಜಯ.
ಪಿಪಿಪಿ ಮಾದರಿ:
ಸಾರ್ವಜನಿಕ– ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಘಟಕಕ್ಕೆ ಬೇಕಾದ ಜಾಗ, ಯಂತ್ರೋಪಕರಣಗಳು ಮೊದಲಾದ ಮೂಲಸೌಕರ್ಯವನ್ನು ಪಾಲಿಕೆ ಒದಗಿಸಲಿದೆ. ಖಾಸಗಿ ಕಂಪನಿಗಳು ಇದರ ನಿರ್ವಹಣೆ ಮಾಡಲಿವೆ. ಅದಕ್ಕೆ ಪ್ರತಿಯಾಗಿ ಕಂಪನಿಯು ಪಾಲಿಕೆಗೆ ವರ್ಷಕ್ಕೆ ಇಂತಿಷ್ಟು ರಾಜಧನ ಪಾವತಿಸಬೇಕಾಗುತ್ತದೆ.
ಘನತ್ಯಾಜ್ಯ ಘಟಕ ನಿರ್ವಹಣೆಗೆ ಈಗಾಗಲೇ ಕಂಪನಿಯೊಂದು ಆಸಕ್ತಿ ತೋರಿದ್ದು, ಮಾತುಕತೆ ನಡೆದಿದೆ.
ವೈಜ್ಞಾನಿಕ ವಿಲೇವಾರಿ; ಉಪ ಉತ್ಪನ್ನ ತಯಾರಿ
ನಗರ ವ್ಯಾಪ್ತಿಯಲ್ಲಿ ನಿತ್ಯ ಉತ್ಪತ್ತಿ ಆಗುವ ಕಟ್ಟಡ ಹಾಗೂ ಭಗ್ನಾವಶೇಷ ತ್ಯಾಜ್ಯಗಳನ್ನು ಒಂದೆಡೆ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಇದರ ಮೂಲ ಉದ್ದೇಶವಾಗಿದೆ. ಸದ್ಯ ನಗರದಲ್ಲಿ ನಿತ್ಯ 100 ಟನ್‌ಗೂ ಅಧಿಕ ಘನತ್ಯಾಜ್ಯ ಸಂಗ್ರಹ ಆಗುತ್ತಿದೆ. ಸಂಗ್ರಹವಾಗುವ ತ್ಯಾಜ್ಯವನ್ನು ಸಿಮೆಂಟ್ ಇಟ್ಟಿಗೆ ಕಬ್ಬಿಣ ಜಲ್ಲಿ ಮರಳು ಮರ... ಹೀಗೆ ಆರು ಮಾದರಿಯ ವಸ್ತುಗಳನ್ನಾಗಿ ವಿಂಗಡಿಸಲಾಗುತ್ತದೆ. ಅದನ್ನು ಬಳಸಿಕೊಂಡು ಎಂ–ಸ್ಯಾಂಡ್ ಕಾಂಕ್ರೀಟ್ ಬ್ಲಾಕ್ ಮೊದಲಾದ ಉಪ ಉತ್ಪನ್ನ ತಯಾರಿಕೆಗೂ ಯೋಜಿಸಲಾಗಿದೆ. ಇವುಗಳನ್ನು ರಸ್ತೆ ನಿರ್ಮಾಣ ಮೊದಲಾದ ಕಾರ್ಯಗಳಿಗಾಗಿ ಬಳಸಲಾಗುತ್ತದೆ.
ಹಂಚ್ಯಾ–ಸಾತಗಳ್ಳಿ ಬಳಿ ಘನತ್ಯಾಜ್ಯ ಘಟಕ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಪಾಲಿಕೆ ಮೂಲಸೌಕರ್ಯ ಒದಗಿಸಲಿದ್ದು ಖಾಸಗಿ ಕಂಪನಿಗಳು ನಿರ್ವಹಣೆ ಮಾಡಲಿವೆ.ಕೆ.ಎಸ್. ಮೃತ್ಯುಂಜಯ, ಸ್ವಚ್ಛಭಾರತ್ ಮಿಷನ್ ನೋಡಲ್ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.